Bangalore Blast: ರಾಮೇಶ್ವರಂ ಕೆಫೆ ಸ್ಪೋಟ, ಪ್ರಮುಖ ಆರೋಪಿ ಕುರುಹು ಪತ್ತೆ,ಶೀಘ್ರ ಬಂಧನ ಸಾಧ್ಯತೆ
ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟ ಪ್ರಕರಣದ ಕುರಿತು ಪೊಲೀಸರ ತನಿಖೆ ಚುರುಕುಗೊಂಡಿದ್ದು, ಆರೋಪಿ ಗುರುತು ಪತ್ತೆಯಾಗಿದೆ. ಶೀಘ್ರವೇ ಬಂಧನವೂ ಆಗಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ಆರೋಪಿಯ ಬಗ್ಗೆ ಕೆಲವು ಪ್ರಮುಖವಾದ ಕುರುಹುಗಳು ಸಿಕ್ಕಿದ್ದು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವ ಸಾಧ್ಯತೆಯಿದೆ. ಈ ಸಂಬಂಧ ಬೆಂಗಳೂರಿನ ಸಿಸಿಬಿ ಪೊಲೀಸರು ಹಾಗೂ ಇತರೆ ಪೊಲೀಸ್ ತನಿಖಾ ತಂಡಗಳ ಸಂಯೋಜನೆಯೊಂದಿಗೆ ಕಾರ್ಯಪ್ರವೃತ್ತರಾಗಿದ್ದು ಯಾವುದೇ ಕ್ಷಣದಲ್ಲಾದರೂ ಆರೋಪಿ ಬಂಧಿಸುವ ಸಾಧ್ಯತೆಯಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವೂ ಸೇರಿದಂತೆ ಹಲವಾರು ರೀತಿಯ ತನಿಖೆಗಳೊಂದಿಗೆ ಬೆಂಗಳೂರು ಪೊಲೀಸರು ಸ್ಪೋಟ ಪ್ರಕರಣವನ್ನು ಬೇಧಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಈವರೆಗಿನ ತನಿಖೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ವಿಚಾರಗಳನ್ನು ಚರ್ಚಿಸಲಾಗಿದೆ. ಆರೋಪಿ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.
ಎನ್‌ಐಎ, ಎನ್‌ಎಸ್‌ಜಿ ಅಧಿಕಾರಿಗಳು ಸಹ ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಬ್ಬೊಬ್ಬರಿಗೆ ಸಹಕಾರದಿಂದ ಪ್ರಕರಣವನ್ನು ಪತ್ತೆಹಚ್ಚುತ್ತೇವೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಗರವನ್ನು ಸುರಕ್ಷಿತವಾಗಿರಿಸಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಪೊಲೀಸರು ಗಸ್ತು ತಿರುಗುವುದು, ಸೂಕ್ಷ್ಮ ಚಲನವಲನಗಳ ಮೇಲೆ ನಿಗಾವಹಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚಿಸಿದ್ದೇನೆ. ತನಿಖೆಗೆ ತೊಂದರೆಯಾಗುವುದರಿಂದ ತಾಂತ್ರಿಕ ಮಾಹಿತಿಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಪಾಕ್ ಪರ ಘೋಷಣೆ
ವಿಧಾನಸೌಧದ ಆವರಣದಲ್ಲಿ ಘೋಷಣೆ ಕೂಗಿದ ಆರೋಪದ ಪ್ರಕರಣದ ಕುರಿತು ಪ್ರತಿಕ್ರಿಯಿಸೊದ ಅವರು, ಎಫ್‌ಎಸ್‌ಎಲ್‌ನ ವೈಜ್ಞಾನಿಕ ವರದಿಗಾಗಿ ಕಾಯುತ್ತಿದ್ದು, ಸಂಪೂರ್ಣ ವರದಿ ಬಂದ ನಂತರ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಮುಲಾಜಿಲ್ಲದೇ, ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಮಾತನ್ನು ಸದನದಲ್ಲಿಯೂ ಹೇಳಿದ್ದೇನೆ ಎಂದರು.
ಮೂರುದಿನದ ಹಿಂದೆ ಎಫ್‌ಎಸ್‌ಎಲ್ ವರದಿ ಬಂದಿದೆ. ಅದನ್ನು ಸ್ಪಷ್ಟಿಕರೀಣಕ್ಕಾಗಿ ಮತ್ತೆ ವಾಪಸ್ ಕಳುಹಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ಪಷ್ಟನೆ ಪ್ರಶ್ನೆ ಬರುವುದಿಲ್ಲ. ಒಮ್ಮೆ ವರದಿ ಬಂದರೆ ಮುಗಿಯಿತು. ಎರಡನೇ ವರದಿ, ಮೂರನೇ ವರದಿ ಕೊಡುವಂತೆ ನಾವು ಹೇಳಲು ಹೋಗುವುದಿಲ್ಲ. ವರದಿ ಮುಚ್ಚಿಡುವ ಅಗತ್ಯವೇ ಇಲ್ಲ. ಬಿಜೆಪಿಯವರು ಆರೋಪ ಮಾಡಿಕೊಳ್ಳಲಿ, ನಾವು ಉತ್ತರ ನೀಡುತ್ತೇವೆ. ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ. ವರದಿ ಕೈ ಸೇರಿದ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಗುಪ್ತಚರ ದಳದ ಎಡಿಜಿಪಿ ಶರತ್ ಚಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳು ಸಭೆಯಲ್ಲಿ ಹಾಜರಿದ್ದರು.
ಅಗತ್ಯ ಬಿದ್ದರೆ ಎನ್.ಐ.ಎಗೆ: ಮುಖ್ಯ ಮಂತ್ರಿ ಸಿದ್ದರಾಮಯ್ಯ
ಚಿಕ್ಕ ಮಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್.ಐ.ಎ ಗೆ ವಹಿಸುವ ಬಗ್ಗೆ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿ ಇನ್ನೂ ಸಿಕ್ಕಿಲ್ಲ. ಬೇಗನೇ ಆರೋಪಿ ಪತ್ತ ಮಾಡುವ ವಿಶ್ವಾಸ ವಿದೆ ಎಂದು ತಿಳಿಸಿದರು.
ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಲ್ಲ
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದೊಂದು ಸಿಲ್ಲಿ ಘಟನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಾಗುವುದಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು.
ಬಿಜೆಪಿ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು
ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು. 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು ಎಂದು ಕೇಳಿದರು. ಇದು ಎನ್.ಐ.ಎ, ರಾ ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.
ನಾನು ಬಾಂಬ್ ಸ್ಪೋಟವನ್ನು ಖಂಡಿಸುತ್ತೇನೆ. ಬಿಜೆಪಿಯವರು ರಾಜಕೀಯ ಮಾಡಬಾರದು ಎಂದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಸ್ಫೋಟ ವಾಗಿತ್ತು.ಆಗ ಬಿಜೆಪಿ ಅಧಿಕಾರದಲ್ಲಿದ್ದರು ಎಂದರು.