Bangalore Ramanavami Festival: ಬೆಂಗಳೂರಲ್ಲಿ ತಿಂಗಳು ಪೂರ್ತಿ ನಡೆಯುವ ರಾಮನವಮಿ ಸಂಗೀತೋತ್ಸವ ಆರಂಭ, ಈ ಬಾರಿ ಯಾವ ಕಲಾವಿದರು ಬರ್ತಾರೆ
Musical Evenings ಬೆಂಗಳೂರಿನಲ್ಲಿ ರಾಮನವಮಿ ಸಂಗೀತೋತ್ಸವ ಜನಪ್ರಿಯ. ಅದರಲ್ಲೂ ಚಾಮರಾಜಪೇಟೆ ರಾಮಸೇವಾ ಮಂಡಳಿ ಕಾರ್ಯಕ್ರಮಕ್ಕೆ ಸುಧೀರ್ಘ ಇತಿಹಾಸವಿದೆ.
ಬೆಂಗಳೂರು: ಬೆಂಗಳೂರಿನ ಕೋಟೆ ಪ್ರೌಢಶಾಲೆ ಆವರಣದಲ್ಲಿ ಇನ್ನು ಒಂದು ತಿಂಗಳ ಕಾಲ ಸಂಜೆ ಸಂಗೀತದ ಅನುರಣನ. ಖ್ಯಾತನಾಮ ಕಲಾವಿದರಿಂದ ಕಛೇರಿ ಸಮಯ. ಇದಕ್ಕೆಂದೇ ಬರುವ ಸಂಗೀತ ಪ್ರಿಯರು. ಯುಗಾದಿ ಮುಗಿದು ಇನ್ನೇನು ರಾಮನವಮಿ ಶುರುವಾಗಬೇಕು ಎನ್ನುವ ಮೊದಲೇ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮಗಳು ಶುರುವಾಗುತ್ತವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ರಾಮಸೇವಾ ಮಂಡಳಿ ಎಂಟು ದಶಕಕ್ಕೂ ಮಿಗಿಲಾಗಿ ರಾಮನವಮಿ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಈ ವರ್ಷದ ಕಾರ್ಯಕ್ರಮಗಳು ಮಂಗಳವಾರವೇ ಆರಂಭಗೊಂಡಿವೆ.400 ಕ್ಕೂ ಹೆಚ್ಚು ಕಲಾವಿದರು ನಗರದಲ್ಲಿ ಪ್ರದರ್ಶನ ನೀಡಲು ಬರಲಿದ್ದಾರೆ.
ಮೈಸೂರು ವಿಜಯ ಸೂರ್ಯ ಅವರ ನಾದಸ್ವರದೊಂದಿಗೆ ಈ ಬಾರಿಯ ರಾಮನವಮಿ ಸಂಗೀತೋತ್ಸವಕ್ಕೆ ಚಾಲನೆ ದೊರೆಯಿತು. ಯುಗಾದಿ ಹಬ್ಬದ ಮುಗಿದ ಸಂತಸದ ನಡುವೆ ಬೆಂಗಳೂರಿನ ಸಂಗೀತಾಸಕ್ತರು ಚಾಮರಾಜಪೇಟೆಯಲ್ಲಿ ಸೇರಿದ್ದರು. ವಿಜಯಸೂರ್ಯ ಅವರ ನಾದಸ್ವರ ವಾದನಕ್ಕೆ ತಲೆ ದೂಗಿದರು. ಇದಾದ ಬಳಿಕ ತ್ರಿಶೂರ್ ಸಹೋದರರ ಕಾರ್ಯಕ್ರಮವೂ ಇತ್ತು. ತ್ರಿಶೂರ್ ಸಹೋದರರ ಶಾಸ್ತ್ರೀಯ ಗಾಯನಕ್ಕೆ ಎಡಪ್ಪಾಡಿ ಅಜಿತ್ ಅವರು ವಯೋಲಿನ್, ಕೋವೈ ಸುರೇಶ್ ಅವರು ಘಟಂನಲ್ಲಿ ಸಾಥ್ ನೀಡಿದರು.
ಇನ್ನು ಸತತ ಒಂದು ತಿಂಗಳ ಕಾಲ ಪ್ರತಿನಿತ್ಯ ಸಂಜೆ ಕಲಾವಿದರ ಕಾರ್ಯಕ್ರಮಗಳು ಇರಲಿವೆ. ಏಪ್ರಿಲ್ 10 ರಂದು ಕುಮರೇಶ್ ಹಾಗೂ ಜಯಂತಿ ಕುಮರೇಶ್ ಅವರ ಕಾರ್ಯಕ್ರಮ ನಿಗದಿಯಾಗಿದೆ. ಅಂದೇ ಕೂಳುರು ಜಯಚಂದ್ರರಾವ್, ತ್ರಿಚಿ ಕೃಷ್ಣ ಅವರ ಕಾರ್ಯಕ್ರಮವೂ ಇದೆ.
ಏಪ್ರಿಲ್ 18ರಂದು ಸಿಕ್ಕಲ್ ಗುರುಚರಣ್, ಚಾರುಲತಾ ರಾಮಾನುಜಮ್, ಬೆಂಗಳೂರು ವಿ ಪ್ರವೀಣ್, ಗಿರಿಧರ ಉಡುಪ ಅವರ ತಂಡದ ಕಾರ್ಯಕ್ರಮ ಇರಲಿದೆ.
ಏಪ್ರಿಲ್ 21 ರಂದು ಕರ್ನಾಟಕ ಹಾಗೂ ಹಿಂದೂಸ್ತಾನಿ ಜುಗುಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಜಯತೀರ್ಥ ಮೇವುಂಡಿ ಹಾಗೂ ಸಂದೀಪ್ ನಾರಾಯಣ್ ಜುಗುಲ್ ಬಂದಿಗೆ ಮತ್ತೂರು ಶ್ರೀನಿಧಿ, ಮಿಲಿಂದ್ ಕುಲಕರ್ಣಿ, ಸಾಯ್ ಗಿರಿಧರ್, ಇಶಾನ್ ಘೋಷ್ ಅವರು ಸಾಥ್ ಕೊಡುವರು.
ಮೇ 10 ರಂದು ಈ ಬಾರಿಯ ರಾಮೋತ್ಸವವು ಗ್ರಾಮೀ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್ ಅವರ ಕಛೇರಿಯೊಂದಿಗೆ ತೆರೆ ಕಾಣಲಿದೆ ಎಂದು ಸಮಿತಿಯ ಪ್ರಮುಖರು ಹೇಳುತ್ತಾರೆ.
ಮಂಡಲಿಯನ್ನು 1939 ರಲ್ಲಿ ಎಸ್ ವಿ ನಾರಾಯಣಸ್ವಾಮಿ ರಾವ್ ಸ್ಥಾಪಿಸಿದರು. ಸಮಿತಿ ಆಯೋಜಿಸುವ ಈ ಉತ್ಸವವು ಭಾರತದಲ್ಲಿನ ಶಾಸ್ತ್ರೀಯ ಸಂಗೀತ ಸರ್ಕ್ಯೂಟ್‌ನಲ್ಲಿ ಅತ್ಯಂತ ಪ್ರಮುಖವಾದದ್ದು. ಉತ್ಸವದ ಹಿಂದಿನ ಆವೃತ್ತಿಗಳಲ್ಲಿ ಎಂಎಸ್ ಸುಬ್ಬುಲಕ್ಷ್ಮಿ, ಕೆಜೆ ಯೇಸುದಾಸ್, ಬಿಸ್ಮಿಲ್ಲಾ ಖಾನ್, ಎಲ್ ಸುಬ್ರಮಣ್ಯಂ, ಬಾಂಬೆ ಜಯಶ್ರೀ ಸಹಿತ ದಿಗ್ಗಜ ಕಲಾವಿದರು ವೇದಿಕೆ ಹಂಚಿಕೊಂಡಿದ್ದಾರೆ. ಈ ಕಾರಣದಿಂದಲೇ ರಾಮಸೇವಾ ಮಂಡಳಿಯ ರಾಮೋತ್ಸವಕ್ಕೆ ಸಂಗೀತ ಪ್ರಿಯರು ಈಗಲೂ ಹಿಂದಿನ ನೆನಪುಗಳನ್ನು ಹೊತ್ತು ಬರುತ್ತಾರೆ. ಸಂಗೀತ ಕಛೇರಿಯಲ್ಲಿ ಮಿಂದೆದ್ದು ಖುಷಿಯಿಂದಲೇ ಹೋಗುತ್ತಾರೆ.