Bangalore News: ಅನುಮತಿ ಇಲ್ಲದೆ ಬೋರ್ ವೆಲ್ ಕೊರೆದರೆ ಕ್ರಮ; ಅಪಾರ್ಟ್ ಮೆಂಟ್ ಗಳಿಗೆ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರಿನ ಭರವಸೆ-bangalore news bangalore citizens warned digging borewell without permission 35000 liter water for apartments mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಅನುಮತಿ ಇಲ್ಲದೆ ಬೋರ್ ವೆಲ್ ಕೊರೆದರೆ ಕ್ರಮ; ಅಪಾರ್ಟ್ ಮೆಂಟ್ ಗಳಿಗೆ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರಿನ ಭರವಸೆ

Bangalore News: ಅನುಮತಿ ಇಲ್ಲದೆ ಬೋರ್ ವೆಲ್ ಕೊರೆದರೆ ಕ್ರಮ; ಅಪಾರ್ಟ್ ಮೆಂಟ್ ಗಳಿಗೆ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರಿನ ಭರವಸೆ

ಬೆಂಗಳೂರಿನಲ್ಲಿ ಬೋರ್‌ವೆಲ್‌ಗಳನ್ನು ತೆಗೆಯಲು ಮಿತಿ ಹೇರುವ ಜತೆಗೆ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಬೆಂಗಳೂರು ಜಲಮಂಡಳಿ ಮುಂದಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರಲ್ಲಿ ಬೋರ್‌ವೆಲ್‌ ತೆಗೆಸಲು ಮಿತಿ ಹೇರಲಾಗಿದೆ.
ಬೆಂಗಳೂರಲ್ಲಿ ಬೋರ್‌ವೆಲ್‌ ತೆಗೆಸಲು ಮಿತಿ ಹೇರಲಾಗಿದೆ.

ಬೆಂಗಳೂರು: ಬೆಂಗಳೂರು ನಗರದಲ್ಲಿ ಅನುಮತಿ ಇಲ್ಲದೆ ಬೋರ್ ವೆಲ್ ಗಳನ್ನು ಕೊರೆದರೆ, ಮಾಲೀಕರು ಹಾಗೂ ಬೋರ್ ವೆಲ್ ಗಳನ್ನು ಕೊರೆಯುವ ವಾಹನ ಮತ್ತು ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲು ಜಲಮಂಡಳಿ ಮುಂದಾಗಿದೆ. ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳು ಬತ್ತಿ ಹೋಗಿವೆ. ವೈಯಕ್ತಿಕ ಅಥವಾ ಇನ್ನಿತರೆ ಬಳಕೆಗೆ ಕೊಳವೆಬಾವಿಗಳನ್ನು ಕೊರೆಯುವ ಮುನ್ನ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮ ಹಾಗೂ ನಿಯಂತ್ರಣ) ಕಾಯ್ದೆಯಂತೆ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಮಂಡಳಿ ತಿಳಿಸಿದೆ.

ಅವೈಜ್ಞಾನಿಕವಾಗಿ ಬೋರ್ ವೆಲ್ ಗಳನ್ನು ಕೊರೆಯುತ್ತಿರುವುದು ಮತ್ತು ಅನುಮತಿ ಪಡೆಯದೆ ಕೊರೆಯುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅನುಮತಿ ಪಡೆಯದೇ ಇದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಲಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಮಾರ್ಚ್‌ 15ರಿಂದ ಈ ಆದೇಶ ಜಾರಿಗೆ ಬರಲಿದ್ದು, ಅಂದಿನಿಂದ ಕೊಳವೆಬಾವಿ ಕೊರೆಯಲು ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ತಜ್ಞರ ವರದಿಯನ್ನು ಆಧರಿಸಿ, ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಅನುಮತಿ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ಬೋರ್‌ವೆಲ್‌ಗಳ ಸಂಖ್ಯೆ ಅಧಿಕವಾಗಿದೆ. ಈಗಿರುವ ಬೋರ್‌ವೆಲ್‌ಗಳಲ್ಲಿಯೇ ನೀರು ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನ ಹಲವು ಕಡೆ ಅಂತರ್ಜಲ ಮಟ್ಟವೂ ಈ ಬಾರಿ ಕುಸಿದಿದೆ. ಇದರಿಂದ ಬೋರ್‌ವೆಲ್‌ ಕೊರೆಸುವ ಮುನ್ನ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎನ್ನುವ ಮಿತಿಯನ್ನು ಹೇರಲಾಗುತ್ತಿದೆ.ಬೆಂಗಳೂರಿನಲ್ಲಿ ಆಗುವ ಅನಗತ್ಯ ನೀರಿನ ಒತ್ತಡ ತಗ್ಗಿಸಬಹುದು ಎನ್ನುವುದು ಇದರ ಹಿಂದೆ ಇರುವ ಉದ್ದೇಶ ಎನ್ನಲಾಗುತ್ತಿದೆ.

ಅಪಾರ್ಟ್ ಮೆಂಟ್ ಗಳಿಗೆ ಕಾವೇರಿ ನೀರು

ಬೆಂಗಳೂರು ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಪಾರ್ಟ್ ಮೆಂಟ್ ಗಳಿಗೆ ಕುಡಿಯುವ ಮತ್ತು ಅಡುಗೆ ಕೆಲಸಕ್ಕಾಗಿ ಪ್ರತಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಶನಿವಾರ ಮತ್ತು ಭಾನುವಾರ ನಗರದ ಹೊರ ವಲಯದ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿ, ನಾಗರಿಕರ ನೀರಿನ ಸಮಸ್ಯೆಗಳನ್ನು ಆಲಿಸಿ ಈ ಭರವಸೆ ನೀಡಿದ್ದಾರೆ.

ಬಿಬಿಎಂಪಿಯ 110 ಗ್ರಾಮಗಳಿಗೆ ಶೀಘ್ರವೇ ಕಾವೇರಿ 5ನೇ ಹಂತ ಕಾರ್ಯಾರಂಭವಾದ ಮೇಲೆ ನೀರು ಲಭ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಗರದ ಹೊರವಲಯದ ಕಮ್ಮನಹಳ್ಳಿ ಕೆರೆಯ ಪಕ್ಕದಲ್ಲಿ ಫಿಲ್ಟರ್ ಬೋರ್‌ವೆಲ್‌ ಕೊರೆದು, ಸಮೀಪದ ಅಪಾರ್ಟ್‍ಮೆಂಟ್‍ಗಳಿಗೆ ಕುಡಿಯಲು ಮತ್ತು ಅಡುಗೆ ಹೊರತುಪಡಿಸಿ ಇತರೆ ಅಗತ್ಯಗಳಿಗಾಗಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.

ಹೊಂಗಸಂದ್ರದ ಗಾರ್ವೆಭಾವಿಪಾಳ್ಯದಲ್ಲಿರುವ ಅಗರ ಮತ್ತು ಚಿಕ್ಕಬೇಗೂರು ಕೆರೆಗಳ ಸಮೀಪ ಫಿಲ್ಟರ್‌ ಬೋರ್‌ವೆಲ್‌ ಕೊರೆದು ನೀರು ಪೂರೈಸಲು ಸೂಚನೆ ನೀಡಿದ್ದಾರೆ.

ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಟ್ಯಾಂಕ್‌ ಅಳವಡಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು.

ಬೊಮ್ಮನಹಳ್ಳಿ ಕ್ಷೇತ್ರದ ಗುಲ್ಬರ್ಗ ಕಾಲೊನಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‍ಗಳನ್ನು ಅಳವಡಿಸಬೇಕು. ಈಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ, ಪೈಪ್‍ಲೈನ್ ಬದಲು ಟ್ಯಾಂಕ್‍ನಿಂದ ನೀರು ಸಂಗ್ರಹಿಸಲು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸುಬ್ರಮಣ್ಯಪುರ ಹಾಗೂ ದೊರಕೆರೆ ಅಂಗಳದಲ್ಲಿ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

(ವರದಿ: ಎಚ್‌.ಮಾರುತಿ. ಬೆಂಗಳೂರು)