Bangalore News: ಬೆಂಗಳೂರಲ್ಲಿ ಟ್ಯಾಂಕರ್ ದರ ನಿಗದಿ, ಆದೇಶ ಜಾರಿಗೊಳಿಸಿದ ಜಿಲ್ಲಾಧಿಕಾರಿ
ಬೆಂಗಳೂರಿನಲ್ಲಿ ನೀರು ಸರಬರಾಜಿಗೆ ಟ್ಯಾಂಕರ್‌ಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ದರ ನಿಗದಿಪಡಿಸಲಾಗಿದೆ.ವರದಿ: ಎಚ್ ಮಾರುತಿ, ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಟ್ಯಾಂಕರ್ ನೀರಿನ ಮಾಫಿಯಾಗೆ ಕೊನೆಗೂ ಕಡಿವಾಣ ಬಿದ್ದಿದೆ. ಬೆಂಗಳೂರು ನಗರ ಜಿಲ್ಲಾಡಳಿತ ಟ್ಯಾಂಕರ್ ನೀರಿನ ಬೆಲೆಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಟ್ಯಾಂಕರ್ ಮಾಲೀಕರು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ನಿರಂತರ ಆರೋಪಗಳುಕೇಳಿ ಬಂದ ನಂತರ ಈ ಕ್ರಮ ಜರುಗಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಪರವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮನವಿ ಸಲ್ಲಿಸಿದ ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಸುತ್ತೋಲೆಯನ್ನು ಹೊರಡಿಸಿದ್ದಾರೆ. ತಾಂತ್ರಿಕ ಸಮಿತಿ ಸಲಹೆಗಳ ಆಧಾರದ ಮೇಲೆ ಈ ದರವನ್ನು ನಿಗದಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇತ್ತೀಚೆಗೆ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಲ್ಲ ಖಾಸಗಿ ಟ್ಯಾಂಕರ್ ಗಳನ್ನು ನೋಂದಣಿ ಮಾಡುವುದು ಕಡ್ಡಾಯ ಮತ್ತು ನೋಂದಣಿ ಪತ್ರವನ್ನು ವಾಹನದಲ್ಲಿ ಪ್ರದರ್ಶಿಸಬೇಕು ಎಂದು ಘೋಷಿಸಿದ್ದರು.
ನೀರಿನ ಅಭಾವದ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಖಾಸಗಿ ಟ್ಯಾಂಕರ್ ಮಾಲೀಕರು ದುಪ್ಪಟ್ಟು ದರ ವಿಧಿಸಿ ನಾಗರಿಕರನ್ನು ಶೋಷಿಸುತ್ತಿದ್ದರು. ಒಂದು ಟ್ಯಾಂಕರ್ ನೀರಿನ ಬೆಲೆಯನ್ನು ಒಂದೇ ತಿಂಗಳಲ್ಲಿ 500 ರಿಂದ 2000 ರೂಪಾಯಿಗೆ ಹೆಚ್ಚಿಸಿದ್ದರು. ಈ ಶೋಷಣೆಗೆ ಬೇಸತ್ತ ಸಾರ್ವಜನಿಕರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು ಜಿಲ್ಲಾಡಳಿತ ನಿಗದಿ ಪಡಿಸಿರುವ ದರಪಟ್ಟಿ ಹೀಗಿದೆ.
- 5 ಕಿಮೀ ವ್ಯಾಪ್ತಿವರೆಗೆ 6000 ಲೀಟರ್ ನೀರಿನ ಟ್ಯಾಂಕರ್ ಗೆ 600 ರೂಪಾಯಿ, 8,000 ಲೀಟರ್ ನೀರಿನ ಟ್ಯಾಂಕರ್ ಗೆ 700 ರೂಪಾಯಿ, 12,000 ಲೀಟರ್ ನೀರಿನ ಟ್ಯಾಂಕರ್ ಗೆ 1,000 ರೂಪಾಯಿ ನಿಗದಿ ಮಾಡಲಾಗಿದೆ.
- 5 ರಿಂದ 10 ಕಿಮೀ ವರೆಗೆ ಕಿಮೀ ವ್ಯಾಪ್ತಿವರೆಗೆ 6000 ಲೀಟರ್ ನೀರಿನ ಟ್ಯಾಂಕರ್ ಗೆ 750 ರೂಪಾಯಿ, 8,000 ಲೀಟರ್ ನೀರಿನ ಟ್ಯಾಂಕರ್ ಗೆ 850 ರೂಪಾಯಿ, 12,000 ಲೀಟರ್ ನೀರಿನ ಟ್ಯಾಂಕರ್ ಗೆ ರೂಪಾಯಿ 1,200 ನಿಗದಿ ಮಾಡಲಾಗಿದೆ.
- ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಜಿಲ್ಲಾಧಿಕಾರಿಗಳು, ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್ ಗಳು ಜಿ ಎಸ್ ಟಿ ವ್ಯಾಪ್ತಿಗೆ ಒಳಪಡಲಿದ್ದು, ಈ ದರಗಳಲ್ಲಿ ಜಿ ಎಸ್ ಟಿ ಸೇರ್ಪಡೆಯಾಗುತ್ತದೆ.
ಇದನ್ನೂ ಓದಿರಿ: ಛಲದಂಕ ಮಲ್ಲ ಈ 3 ಅಡಿ ಎತ್ತರದ ಯುವಕ; ವೈದ್ಯಕೀಯ ಮಂಡಳಿಗೆ ತೊಡೆತಟ್ಟಿ ಗೆದ್ದ ಗಣೇಶ್ ಈಗ ಡಾಕ್ಟರ್, ಇದು ಯಶೋಗಾಥೆ
- ಬೆಂಗಳೂರಿನಲ್ಲಿ ಸುಮಾರು 4,000 ಖಾಸಗಿ ಟ್ಯಾಂಕರ್ ಗಳು ನೀರು ಸರಬರಾಜು ಮಾಡುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
- ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಖಾಸಗಿ ಟ್ಯಾಂಕರ್ ಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದ್ದು, ಗುರುವಾರದೊಳಗೆ ನೋಂದಣಿ ಮಾಡಿಕೊಳ್ಳಬೇಕಿದೆ.
- ಇದುವರೆಗೂ 315 ಖಾಸಗಿ ಟ್ಯಾಂಕರ್ ಗಳನ್ನು ನೋಂದಣಿ ಮಾಡಲಾಗಿದೆ. ಒಂದು ವೇಳೆ ನೋಂದಣಿ ಮಾಡಲು ವಿಫಲವಾದರೆ ಟ್ಯಾಂಕರ್ ಗಳನ್ನು ಜಪ್ತಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
- ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ನೀರನ್ನು ಹೊರತುಪಡಿಸಿ 6 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಅನ್ನು ಬಾಡಿಗೆಗೆ ಪಡೆಯಲು ಪ್ರತಿ ದಿನಕ್ಕೆ 5,200 ರೂಪಾಯಿ, 12 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 7,100 ರೂಪಾಯಿಗಳನ್ನು ಪಾವತಿಸಬೇಕಿದೆ.
ಇದನ್ನೂ ಓದಿರಿ: ಯುಪಿ ವಾರಿಯರ್ಸ್ ವಿರುದ್ಧ ಬ್ಯಾಟಿಂಗ್‌ಗಿಳಿದ ಮುಂಬೈ ಇಂಡಿಯನ್ಸ್; ಗೆಲುವಿನ ಲಯಕ್ಕೆ ಮರಳಲು ಉಭಯ ತಂಡಗಳು ಸಜ್ಜು
- ದಿನದ ಬಾಡಿಗೆ ಆಧಾರದ ಮೇಲೂ ಟ್ಯಾಂಕರ್ ಗಳನ್ನು ಬಾಡಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 6000 ಲೀಟರ್ ನೀರಿನ ಟ್ಯಾಂಕರ್ ಗೆ ಪ್ರತಿದಿನಕ್ಕೆ ರೂಪಾಯಿ 5,200, 12,000 ಲೀಟರ್ ನೀರಿನ ಟ್ಯಾಂಕರ್ ಗೆ ಪ್ರತಿದಿನಕ್ಕೆ 7,100 ರೂಪಾಯಿ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)

ವಿಭಾಗ