Bangalore police:ಬೆಂಗಳೂರಲ್ಲಿ ದೋಷಪೂರಿತ ನಂಬರ್‌ ವಾಹನಗಳ ಮೇಲೆ ದಾಳಿ: ಹೀಗಿರಲಿ ನಿಮ್ಮ ವಾಹನ ನಂಬರ್‌ ಪ್ಲೇಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Bangalore Police:ಬೆಂಗಳೂರಲ್ಲಿ ದೋಷಪೂರಿತ ನಂಬರ್‌ ವಾಹನಗಳ ಮೇಲೆ ದಾಳಿ: ಹೀಗಿರಲಿ ನಿಮ್ಮ ವಾಹನ ನಂಬರ್‌ ಪ್ಲೇಟ್‌

Bangalore police:ಬೆಂಗಳೂರಲ್ಲಿ ದೋಷಪೂರಿತ ನಂಬರ್‌ ವಾಹನಗಳ ಮೇಲೆ ದಾಳಿ: ಹೀಗಿರಲಿ ನಿಮ್ಮ ವಾಹನ ನಂಬರ್‌ ಪ್ಲೇಟ್‌

Bangalore traffic ಬೆಂಗಳೂರಿನಲ್ಲಿ ದೋಷಪೂರಿತ ನಂಬರ್‌ ಪ್ಲೇಟ್‌ ವಾಹನಗಳ ಮೇಲೆ ದಾಳಿ ಮುಂದುವರಿದಿದ್ದು. ಹಲವರ ವಾಹನ ಜಪ್ತಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ದೋಷಪೂರಿತ ನಂಬರ್‌ ಪ್ಲೇಟ್‌ ವಾಹನಗಳ ಪತ್ತೆ ಕಾರ್ಯಾಚರಣೆ ಕೈಗೊಂಡಿದೆ.
ಬೆಂಗಳೂರಿನಲ್ಲಿ ದೋಷಪೂರಿತ ನಂಬರ್‌ ಪ್ಲೇಟ್‌ ವಾಹನಗಳ ಪತ್ತೆ ಕಾರ್ಯಾಚರಣೆ ಕೈಗೊಂಡಿದೆ.

ಬೆಂಗಳೂರು: ಬೆಂಗಳೂರು ವಾಹನ ಸವಾರರೇ, ನಿಮ್ಮ ವಾಹನದ ನಂಬರ್‌ ಪ್ಲೇಟ್‌ ದೋಷಪೂರಿತವೇ ಎಂದು ಪರೀಕ್ಷಿಸಿಕೊಳ್ಳಿ. ಸಾರಿಗೆ ಇಲಾಖೆ ನೀಡಿರುವ ನಿಯಮಾವಳಿಗಳ ಪ್ರಕಾರವೇ ನಂಬರ್‌ ಪ್ಲೇಟ್‌ ಇದೆಯೋ ಇಲ್ಲವೇ ನೋಡಿಕೊಳ್ಳಿ.

ಇಲ್ಲದೇ ಇದ್ದರೆ ಬೆಂಗಳೂರು ಸಂಚಾರ ಪೊಲೀಸರು ನಿಮ್ಮ ವಾಹನ ಜಪ್ತಿ ಮಾಡಿ ಭಾರೀ ದಂಡವನ್ನೂ ವಿಧಿಸಲಿದ್ದಾರೆ.

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ 158 ವಾಹನ ಸವಾರರ ವಾಹನಗಳನ್ನು ದಕ್ಷಿಣ ಸಂಚಾರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.

ಇತ್ತೀಚೆಗೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಸಂಚರಿಸುವ ವಾಹನ ಸವಾರರ ಸಂಖ್ಯೆ ಹೆಚ್ಚುತ್ತಿದ್ದು, ಅಂತಹ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ದಕ್ಷಿಣ ವಿಭಾಗದ ಎಲ್ಲಾ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್‌ ಗಳಿಗೆ ಸೂಚಿಸಲಾಗಿತ್ತು.

ಡಿ 4 ಮತ್ತು 5 ರವರೆಗೆ ಸಂಚಾರ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ 24, ಬಸವನಗುಡಿ (3), ಜಯನಗರ(20), ಕೆಎಸ್ ಲೇಔಟ್(1), ತಲಘಟ್ಟಪುರ(12), ಆಡುಗೋಡಿ(3),ಮಡಿವಾಳ(1), ಹುಳಿಮಾವು(7), ಬೆಳ್ಳಂದೂರು(9), ಎಲೆಕ್ಟ್ರಾನಿಕ್ ಸಿಟಿ(57), ಹೆಚ್.ಎಸ್.ಆರ್(21) ಸೇರಿ ಒಟ್ಟು 158 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೆಲವರಿಗೆ ಒಂದು ಸಾವಿರ ರೂ.ವರೆಗೂ ದಂಡ ವಿಧಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಯಲ್ಲೇ ಹೆಚ್ಚು ಪ್ರಕರಣ

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು 54 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕೇವಲ ಎರಡು ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು ದೋಷಪೂರಿತ ನಂಬರ್‌ ಪ್ಲೇಟ್ ಬಳಸಿಕೊಂಡು ಸಂಚರಿಸುತ್ತಿದ್ದ 54 ವಾಹನಗಳನ್ನು ಪತ್ತೆ ಮಾಡಿ ಆ ವಾಹನಗಳ ಚಾಲಕ ಮತ್ತು ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಜೊತೆಗೆ ವಾಹನಗಳಿಗೆ ಸಮರ್ಪಕ ನಂಬರ್‌ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ.

ತಲಘಟ್ಟಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ತನ್ನ ಡಿಯೋ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಅನ್ನು ಮರೆಮಾಚಿಕೊಂಡು ವಾಹನ ಚಲಾಯಿಸುತ್ತಿದ್ದ 29 ವರ್ಷದ ನೌಫಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತಲಘಟ್ಟಪುರ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ವಶಕ್ಕೆ ನೀಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗಿದೆ.

ಹೀಗಿರಲಿ ನಿಮ್ಮ ವಾಹನ ನಂಬರ್‌ ಪ್ಲೇಟ್‌

ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 50 ಮತ್ತು 51 ರ ಪ್ರಕಾರ, ನಂಬರ್ ಪ್ಲೇಟ್‌ಗಳಲ್ಲಿ ಯಾವುದೇ ಗೀಚುಬರಹ ಅಥವಾ ರೇಖಾಚಿತ್ರ ಇರಬಾರದು. ಸಂಖ್ಯೆಗಳು ಕಾಯಿದೆ ಸೂಚಿಸಿದ ಮಾನದಂಡದ ಪ್ರಕಾರ ಇರಬೇಕು.

ಮಾನದಂಡದ ಪ್ರಕಾರ, ಕರ್ನಾಟಕದಲ್ಲಿ ನೋಂದಾಯಿಸಲಾದ ವಾಹನಗಳು ಕೆಎ ಕೋಡ್ ಅನ್ನು ಹೊಂದಿರಬೇಕು ಮತ್ತು ನಂತರ ನ್ಯಾಯವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಕಚೇರಿಯ ಕೋಡ್ ಅನ್ನು ಹೊಂದಿರಬೇಕು. ಎರಡನೇ ಸಾಲಿನಲ್ಲಿ ವಾಹನ ನೋಂದಣಿ ಸಂಖ್ಯೆಗಳನ್ನು ಹೊಂದಿರಬೇಕು. ರಾತ್ರಿ ವೇಳೆ ನಂಬರ್ ಪ್ಲೇಟ್ ಬೆಳಗಬೇಕು.

ಪದಗಳು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿದ್ದರೆ, ಅಂಕಿಅಂಶಗಳು ಅರೇಬಿಕ್ ಶೈಲಿಯಲ್ಲಿರಬೇಕು. ವಾಹನಗಳಲ್ಲಿ ಕನ್ನಡ ಭಾಷೆಯ ನಂಬರ್ ಪ್ಲೇಟ್‌ಗಳನ್ನು ಅನುಮತಿಸದಿದ್ದರೂ, ಇಂಗ್ಲಿಷ್‌ನಲ್ಲಿಯೂ ಸ್ಪೋರ್ಟ್ ಪ್ಲೇಟ್‌ಗಳನ್ನು ಹಾಕುವುದು ಕಡ್ಡಾಯವಾಗಿದೆ. ಸರ್ಕಾರಿ ಇಲಾಖೆಗಳಿಗೆ ಸೇರಿದ ವಾಹನಗಳು ಸೇರಿದಂತೆ ಎಲ್ಲ ವಾಹನಗಳಿಗೂ ಈ ನಿಯಮ ಅನ್ವಯಿಸುತ್ತದೆ.

ಖಾಸಗಿ ವಾಹನಗಳ ನೋಂದಣಿ ಸಂಖ್ಯೆ ಫಲಕವು ಬಿಳಿ ಹಿನ್ನೆಲೆ ಮತ್ತು ಕಪ್ಪು ಬಣ್ಣದ ಅಕ್ಷರಗಳನ್ನು ಹೊಂದಿರಬೇಕು, ಆದರೆ ವಾಣಿಜ್ಯ ವಾಹನಗಳು ಕಪ್ಪು ಅಕ್ಷರಗಳೊಂದಿಗೆ ಹಳದಿ ಹಿನ್ನೆಲೆಯನ್ನು ಹೊಂದಿರಬೇಕು.

2 ಚಕ್ರದ ವಾಹನಗಳಿಗೆ ನಿಗದಿತ ಗಾತ್ರವು 200X100 ಮಿ.ಮಿ ಮತ್ತು 4 ಚಕ್ರಗಳಿಗೆ 340X200 ಮಿ.ಮಿ / 500X120 ಮಿ.ಮಿ ಇರಬೇಕು.

ದೋಷಪೂರಿತ ನಂಬರ್ ಪ್ಲೇಟ್ ಹಾಕಿದರೆ ದಂಡ ರೂ. ಮೊದಲ ಬಾರಿಯ ಉಲ್ಲಂಘನೆಗಳಿಗೆ 500ರಿಂದ 1000 ರೂ. ಆದರೆ ಅಪರಾಧ ಪುನರಾವರ್ತನೆಯಾದಲ್ಲಿ ಇದು ಇನ್ನೂ ಹೆಚ್ಚಲಿದೆ.

(ವರದಿ: ಎಚ್. ಮಾರುತಿ ಬೆಂಗಳೂರು)

Whats_app_banner