Railway News: ಬೆಂಗಳೂರು ಕೊಯಮತ್ತೂರು ಉದಯ ಎಕ್ಸ್ ಪ್ರೆಸ್ ಇನ್ನು 7 ದಿನ ಸಂಚಾರ, ಕೆಲ ರೈಲುಗಳಲ್ಲಿ ವ್ಯತ್ಯಯ
ಬೆಂಗಳೂರು ಹಾಗೂ ಕೊಯಮತ್ತೂರು ನಡುವಿನ ಉದಯ ಎಕ್ಸ್‌ಪ್ರೆಸ್ ರೈಲು ವಾರದ ಎಲ್ಲಾ ದಿನವೂ ಸಂಚರಿಸಲಿದೆ.
ಬೆಂಗಳೂರು: ಬೆಂಗಳೂರು ಹಾಗೂ ಕೊಯಮತ್ತೂರು ನಗರಗಳ ನಡುವ ನಿತ್ಯ ಸಂಚಾರಕ್ಕೆ ಅನುವಾಗುವಂತೆ ಭಾರತೀಯ ರೈಲ್ವೆ ದಕ್ಷಿಣ ವಿಭಾಗವು ರೈಲಿನ ಸಂಚಾರದಲ್ಲಿ ಬದಲಾವಣೆ ಮಾಡಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತಿದ್ದ ಉದಯ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22665/22666) ರೈಲು ಇನ್ನು ಮುಂದೆ ಬೆಂಗಳೂರು ಮತ್ತು ಕೊಯಮತ್ತೂರು ನಿಲ್ದಾಣಗಳ ನಡುವೆ 2024ರ ಮಾರ್ಚ್ 5ರಿಂದ ಅನ್ವಯವಾಗುವಂತೆ ವಾರದ ಏಳು ದಿನವೂ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ. ಈ ಕುರಿತು ಹಲವು ದಿನಗಳಿಂದ ಬೇಡಿಕೆಯಿದ್ದು, ಅದನ್ನು ಪೂರೈಸಿದೆ.
ಬೆಂಗಳೂರು ಹಾಗೂ ಚೆನ್ನೈ ನಡುವೆ ಸಾಕಷ್ಟು ರೈಲುಗಳಿದ್ದರೂ ಕೊಯಮತ್ತೂರು ಭಾಗಕ್ಕೆ ಹೆಚ್ಚಿನ ರೈಲು ಬೆಂಗಳೂರಿನಿಂದ ಬೇಕು ಎನ್ನುವ ಬೇಡಿಕೆಯಿದೆ. ಈಗಿರುವ ಉದಯ ಎಕ್ಸ್‌ಪ್ರೆಸ್ ಅನ್ನು ವಾರದ ಎಲ್ಲಾ ದಿನಗಳಲ್ಲೂ ಸಂಚರಿಸುವಂತೆ ಮಾಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ವಾರದ ಎಲ್ಲಾ ದಿನವೂ ಈ ರೈಲು ಸಂಚರಿಸುವುದರಿಂದ ಈ ಭಾಗದ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಉದಯ ಎಕ್ಸ್‌ಪ್ರೆಸ್ ರೈಲು ಪ್ರತಿ ದಿನವೂ ಬೆಳಿಗ್ಗೆ 05.45ಕ್ಕೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ12.40ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯಾಹ್ನ 2.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9ಕ್ಕೆ ಕೊಯಮತ್ತೂರು ತಲುಪಲಿದೆ.
ಈ ರೈಲು ಬೆಂಗಳೂರು ನಂತರ ಕೃಷ್ಣರಾಜಪುರಂ ಕುಪ್ಪಂ. ಸೇಲಂ ಹಾಗೂ ಈರೋಡ್‌ಗಳಲ್ಲಿ ನಿಲುಗಡೆಯಾಗಲಿದೆ.
ಉದಯ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ಸಂಯೋಜನೆ, ವೇಳಾಪಟ್ಟಿ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವಂತೆಯೇ ಬುಧವಾರವೂ ಈ ರೈಲು ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ರೈಲುಗಳ ಮಾರ್ಗ ಬದಲಾವಣೆ / ನಿಯಂತ್ರಣ
ನಜೀರಗಂಜ-ಉಜಿಯಾರ್ಪುರ್-ಸಮಸ್ತಿಪುರ ನಿಲ್ದಾಣಗಳ ನಡುವೆ ಸುರಕ್ಷತಗೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲು ಪೂರ್ವ ಮಧ್ಯ ರೈಲ್ವೆಯು ಸೂಚಿಸಿದೆ.
1. ಮಾರ್ಚ್1, 2024 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12578 ಮೈಸೂರು-ದರ್ಭಂಗಾ ಭಾಗ್ಮತಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
2. ಮಾರ್ಚ್ 7, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 15227 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುಜಾಫರ್ಪುರ ಎಕ್ಸ್ ಪ್ರೆಸ್ ರೈಲು ಖಗರಿಯಾ, ಸಿಂಘಿಯಾಘಾಟ್ ಮತ್ತು ಸಮಸ್ತಿಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೇಗುಸರಾಯ್ ಮತ್ತು ಬರೌನಿ ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.