ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಸಾರ್ವಜನಿಕರ ಅಹವಾಲು ಸಲ್ಲಿಕೆಗೆ ಡಿಜಿಟಲ್‌ ಬುಕ್ಕಿಂಗ್‌ ವ್ಯವಸ್ಥೆ, ಬಿಡಿಎದಿಂದ ಹೊಸ ಕ್ರಮ, ಏನಿದರ ವಿಶೇಷ

Bangalore News: ಸಾರ್ವಜನಿಕರ ಅಹವಾಲು ಸಲ್ಲಿಕೆಗೆ ಡಿಜಿಟಲ್‌ ಬುಕ್ಕಿಂಗ್‌ ವ್ಯವಸ್ಥೆ, ಬಿಡಿಎದಿಂದ ಹೊಸ ಕ್ರಮ, ಏನಿದರ ವಿಶೇಷ

BDA News ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಡಿಜಿಟಲ್‌ ಆಧರಿತ ಸಾರ್ವಜನಿಕ ದೂರು ಆಲಿಸುವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

ಬಿಡಿಎದಲ್ಲಿ ಜಾರಿಯಾಗಲಿದೆ ಡಿಜಿಟಲ್‌ ಆಧರಿತ ಸಾರ್ವಜನಿಕ ದೂರು ಆಲಿಕೆ ವ್ಯವಸ್ಥೆ
ಬಿಡಿಎದಲ್ಲಿ ಜಾರಿಯಾಗಲಿದೆ ಡಿಜಿಟಲ್‌ ಆಧರಿತ ಸಾರ್ವಜನಿಕ ದೂರು ಆಲಿಕೆ ವ್ಯವಸ್ಥೆ

ಬೆಂಗಳೂರು: ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ( BDA) ಸಾರ್ವಜನಿಕ ಸ್ನೇಹಿ ಅಹವಾಲು ಸಲ್ಲಿಕೆಯ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಅದರಲ್ಲೂ ಡಿಜಿಟಲ್‌ ತಂತ್ರಜ್ಞಾನವನ್ನು ಬಳಕೆ( digital appointment booking system) ಮಾಡಿಕೊಂಡು ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ. ಇದರಿಂದ ಜನ ಬಿಡಿಎಗೆ ಬಂದು ಅಧ್ಯಕ್ಷರು ಇಲ್ಲವೇ ಅಧಿಕಾರಿಗಳನ್ನು ಭೇಟಿಯಾಗಲು ಅಲೆಯುವುದು ತಪ್ಪಲಿದೆ. ಅಲ್ಲದೇ ಸಾರ್ವಜನಿಕರು ನೀಡಿರುವ ದೂರು ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿಯಲು ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ. ಸಂಪೂರ್ಣ ಡಿಜಿಟಲ್‌ ಆಧರಿತ ಈ ಸೇವೆ ಸಿದ್ದತೆಯ ಹಂತದಲ್ಲಿದ್ದು, ಹದಿನೈದು ದಿನದ ಒಳಗೆ ಅಂತಿಮ ವಾಗಲಿದೆ. ಜುಲೈ ಕೊನೆಯ ವಾರ ಇಲ್ಲವೇ ಆಗಸ್ಟ್‌ ಮೊದಲ ವಾರದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಾಧಿಕಾರವು ಯೋಜನೆ ಹಾಕಿಕೊಂಡಿದೆ.

ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ತಮ್ಮ ಮನೆ, ನಿವೇಶನ ವಿಚಾರವಾಗಿ ಜನ ಭೇಟಿ ನೀಡುವ ಸನ್ನಿವೇಶ ಎದುರಾಗುತ್ತವೆ. ಈ ವೇಳೆ ಅಧಿಕಾರಿಗಳು ಹೊರಗಡೆ ಹೋದಾಗ ಇಲ್ಲವೇ ಸಭೆಯಲ್ಲಿ ನಿರತರಾಗಿದ್ದಾಗ ಭೇಟಿಯಾಗಲು ಆಗುವುದಿಲ್ಲ. ಈ ವೇಳೆ ಇಲ್ಲಿಗೆ ಬರುವವರು ನಿರಾಶೆಯಿಂದ ಹೋಗುವ ಇಲ್ಲವೇ ಪದೇ ಪದೇ ಬಂದು ಹೋಗುವ ಸನ್ನಿವೇಶವೂ ಸೃಷ್ಟಿಯಾಗಬಹುದು. ಈ ಕಾರಣದಿಂದಲೇ ಡಿಜಿಟಲ್‌ ಆಧರಿತ ಸೇವೆಯನ್ನು ಆರಂಭಿಸಿ ನಿಗದಿತ ಸಮಯದೊಳಗೆ ಸೇವೆ ನೀಡಬಹುದು ಎನ್ನುವುದು ಪ್ರಾಧಿಕಾರದ ಆಶಯ.

ಟ್ರೆಂಡಿಂಗ್​ ಸುದ್ದಿ

ಈ ಕುರಿತು ಮಾತನಾಡಿರುವ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌, ಜನ ಇನ್ನು ಮುಂದೆ ತಮ್ಮ ಅಹವಾಲನ್ನು ನೇರವಾಗಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಇದಕ್ಕೆ ಸೂಕ್ತ ವೆಬ್‌ಸೈಟ್‌ ಅನ್ನು ರೂಪಿಸಲಾಗುತ್ತಿದೆ. ಅದರ ಮೂಲಕ ನಿಗದಿತ ಅವಧಿಯೊಳಗೆ ಉತ್ತರವನ್ನು ನೀಡಲಾಗುತ್ತದೆ. ಕಚೇರಿಗೆ ಭೇಟಿ ಸನ್ನಿವೇಶ ಇದ್ದರೆ ಅದಕ್ಕೂ ಸಮಯವನ್ನು ನಿಗದಿಪಡಿಸಲಾಗುತ್ತದೆ. ದೂರಿನ ಸ್ಥಿತಿ ಯಾವ ಹಂತದಲ್ಲಿದೆ ಎನ್ನುವುದನ್ನು ಅರಿಯಲು ಇದು ಸಹಕಾರಿಯಾಗಲಿದೆ. ಇಂತಿಷ್ಟು ಅವಧಿಯೊಳಗೆ ಇದನ್ನು ಮುಗಿಸಬೇಕು ಎನ್ನುವುದು ಇದರ ಉದ್ದೇಶವೂ ಆಗಿದೆ. ಯಾವ ವಿಭಾಗದಲ್ಲಿ ಕೆಲಸ ಆಗಬೇಕು ಅಲ್ಲಿಗೆ ಆನ್‌ಲೈನ್‌ನಲ್ಲಿ ದೂರು ನೀಡಬೇಕು. ಸಂಬಂಧಪಟ್ಟವರು ತಮ್ಮ ಕೆಲಸ ಮುಗಿಸಿ ಹಿರಿಯ ಅಧಿಕಾರಿಗಳಿಗೆ ರವಾನಿಸಿ ದೂರು ನೀಡಿದವರ ಕೆಲಸ ಆಗಿರುವ ಮಾಹಿತಿಯನ್ನೂ ಒದಗಿಸಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್‌ ಸಿದ್ದಪಡಿಸಲಾಗುತ್ತಿದೆ. ಸದ್ಯವೇ ಅಧಿಕೃತವಾಗಿ ಇದಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳುತ್ತಾರೆ.

ಇದರೊಟ್ಟಿಗೆ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕ ಅಹವಾಲು ಆಲಿಸುವ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ಅಲ್ಲಿಯೂ ದೂರು ನೀಡುವವರಿಗೆ ಸಾಧ್ಯವಾದರೆ ಸ್ಥಳದಲ್ಲೇ ಪರಿಹಾರ ನೀಡುತ್ತೇವೆ ಎನ್ನುವುದು ಹ್ಯಾರಿಸ್‌ ವಿವರಣೆ.

ಬಿಡಿಎ ಆಯುಕ್ತ ಎನ್‌.ಜಯರಾಂ ಅವರ ಪ್ರಕಾರ, ಈಗಾಗಲೇ ಸಕಾಲ ಅಡಿ ಪ್ರಾಧಿಕಾರದ ಅಹವಾಲು ಆಲಿಕೆ ವ್ಯವಸ್ಥೆ ಜಾರಿಯಲ್ಲಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಇನ್ನಷ್ಟು ತ್ವರಿತಗೊಳಿಸುವ ಜತೆಗೆ ಪಾರದರ್ಶಕವಾಗಿ ಜನರಿಗೂ ಅವರ ಸಮಸ್ಯೆಯಾಗಿ ಪರಿಹಾರವನ್ನು ತಿಳಿಸುವ ಪ್ರಯತ್ನ ಇದರಿಂದ ಆಗಲಿದೆ. ದೂರು ನೀಡಿದವರು ಅನಗತ್ಯವಾಗಿ ಕಾಯುವ, ಏನಾಗಿದೆ ಎಂದು ತಿಳಿದುಕೊಳ್ಳಲು ಕಷ್ಟಪಡುವುದು ತಪ್ಪಲಿದೆ ಎನ್ನುತ್ತಾರೆ.

ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನಾನಾ ಕಾರಣಗಳಿಂದ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ದೂರು ನೀಡುವ ವ್ಯವಸ್ಥೆ, ಮಧ್ಯಾಹ್ನದ ನಂತರ ಅಧ್ಯಕ್ಷರು, ಆಯುಕ್ತರು ಹಾಗೂ ಕಾರ್ಯದರ್ಶಿಗಳ ಸಹಿತ ಹಿರಿಯ ಅಧಿಕಾರಿಗಳ ಭೇಟಿ ನೀಡಿ ದೂರು ನೀಡುವ ವ್ಯವಸ್ಥೆ ಇದೆ. ಆದರೆ ಆನ್‌ಲೈನ್‌ ವ್ಯವಸ್ಥೆ ಇರಲಿಲ್ಲ. ಇದನ್ನು ರೂಪಿಸಿ ಪ್ರಾಧಿಕಾರದಲ್ಲಿ ಸಾರ್ವಜನಿಕ ದೂರು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತಿದುರುವುದು ವಿಶೇಷ.