Bangalore News: ನಿಮ್ಮದು ಬೆಂಗಳೂರಲ್ಲಿ ಬಿಡಿಎ ಸೈಟಿದೆಯೇ, ಮನೆ ಕಟ್ಟಿಲ್ಲವೇ, ಹೆಚ್ಚುವರಿ ದಂಡ ಪಾವತಿಸಲು ಸಿದ್ದರಾಗಿ
BDA News ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಖಾಲಿ ನಿವೇಶನದಾರರಿಗೆ ಅವಧಿ ನಂತರವೂ ಮನೆ ಕಟ್ಟದಿದ್ದರೆ ಹೆಚ್ಚುವರಿ ದಂಡ ವಿಧಿಸಲು ಮುಂದಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ನಿಮಗೆ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ನೀಡಿದ( BDA) ನಿವೇಶನ ಇದೆಯೇ? ನಿವೇಶನ ಪಡೆದುಕೊಂಡು ಇನ್ನೂ ಮನೆ ಕಟ್ಟಲು ಆಗಿಲ್ಲವೇ, ನಿವೇಶನವನ್ನು ಖಾಲಿಯಾಗಿ ಬಿಟ್ಟಿದ್ದೀರಿಯೇ. ಆದಷ್ಟು ಬೇಗನೆ ಮನೆ ಕಟ್ಟೋಣ ಎಂದು ತೀರ್ಮಾನಿಸಿಕೊಂಡಿದ್ದರೆ ಅದನ್ನು ಮುಗಿಸಬಹುದಾ ನೋಡಿ. ಏಕೆಂದರೆ ಖಾಲಿ ನಿವೇಶನಗಳ ಮೇಲೆ ಗಮನಹರಿಸಿರುವ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಹೆಚ್ಚುವರಿ ಶುಲ್ಕವನ್ನು ವಿಧಿಸಲು ಯೋಚಿಸುತ್ತಿದೆ. ಈಗಾಗಲೇ ತೆರಿಗೆಯನ್ನು ನಿವೇಶನಕ್ಕಾಗಿ ನೀವು ಪಾವತಿಸುತ್ತಿದ್ದರೆ, ಇನ್ನೂ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಪ್ರಾಧಿಕಾರಕ್ಕೆ ಪಾವತಿಸಬೇಕಾಗುತ್ತದೆ. ಒಂದು ಕಡೆ ಖಾಲಿ ನಿವೇಶನ ಬಿಡುತ್ತಿರುವುದರಿಂದ ನೆರೆಹೊರೆಯವರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಜತೆಗೆ ಪ್ರಾಧಿಕಾರದ ಆದಾಯವನ್ನೂ ಹೆಚ್ಚಿಸಿಕೊಳ್ಳುವ ಉದ್ದೇಶವೂ ಇದರ ಹಿಂದೆ ಇದೆ.
ಈಗಾಗಲೇ ಖಾಲಿ ನಿವೇಶನಗಳ ಮೇಲಿನ ತೆರಿಗೆ ಪ್ರಮಾಣ ಹೆಚ್ಚಿಸುವ ತೀರ್ಮಾನ ಅಂತಿಮ ಹಂತದಲ್ಲಿದ್ದು ಸದ್ಯವೇ ಜಾರಿಯಾಗಬಹುದು. ಇದಕ್ಕಾಗಿ ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರು ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಬಿಡಿಎ ಮೂಲಗಳು ತಿಳಿಸಿವೆ.
ಕಾರಣ ಏನು?
ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಾಣ ಮಾಡಿರುವ 64 ಬಡಾವಣೆಗಳಲ್ಲಿ 13 ಸಾವಿರಕ್ಕೂ ಹೆಚ್ಚು ನಿವೇಶನಗಳು ಈಗಲೂ ಖಾಲಿ ಇವೆ. ನಾನಾ ಕಾರಣಗಳಿಂದ ಮಾಲೀಕರು ಮನೆ ನಿರ್ಮಿಸಿಕೊಂಡಿಲ್ಲ. ಇದರಲ್ಲಿ ಕೆಲವು ನಿವೇಶನಗಳ ಮಾಲೀಕತ್ವದ ವ್ಯಾಜ್ಯಗಳಿವೆ. ಕೆಲವರು ಬೇರೆ ಊರುಗಳಲ್ಲಿ ಇರುವುದರಿಂದಲೂ ಮನೆ ಕಟ್ಟಿಸಿಕೊಂಡರಾಯಿತು ಎಂದು ಸುಮ್ಮನಿದ್ದಾರೆ. ಪ್ರಾಧಿಕಾರವು ಈಗಾಗಲೇ ಹಲವು ಬಾರಿ ನೊಟೀಸ್ ಅನ್ನು ನೀಡಿ ನಿವೇಶನ ಸ್ವಚ್ಚವಾಗಿಡಬೇಕು. ಬೇಗನೇ ಮನೆ ಕಟ್ಟಿಸಿಕೊಳ್ಳಬೇಕು ಎಂದೂ ಸೂಚಿಸಿದೆ.
ಹೀಗಿದ್ದರೂ ಪರಿಸ್ಥಿತಿ ಬದಲಾಗದೇ ಇರುವುದರಿಂದ ಈಗ ಹಲವಾರು ನಿಯಮ ಸಡಿಸಲು ಬಿಡಿಎ ಮುಂದಾಗಿದೆ. ಇದಕ್ಕೂ ಮೊದಲು ನಿವೇಶನ ಪಡೆದ 5 ವರ್ಷದೊಳಗೆ ಮನೆ ಕಟ್ಟಬೇಕು. ನಿಗದಿತ ಅವಧಿಯೊಳಗೆ ಮನೆ ಕಟ್ಟದಿದ್ದರೆ ಶೇ.10ರಷ್ಟು ದಂಡ ವಿಧಿಸಲಾ ಗುತ್ತಿತ್ತು. ಅದರಂತೆ 600 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ 5000 ರು.,4000 ಚದರ ಅಡಿ ಅಳತೆ ನಿವೇಶನಕ್ಕೆ 3.75 ಲಕ್ಷ ಹಾಗೂ 4000 ಚದರ ಅಡಿಗಿಂತ ಮೇಲ್ಪಟ್ಟ ನಿವೇಶನಗಳಿಗೆ 6 ಲಕ್ಷ ರು. ದಂಡದ ಮೊತ್ತವನ್ನು ನಿಗದಿಪಡಿಸಿತ್ತು. ಈಗ ಈ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿರುವ ಬಿಡಿಎ ಮನೆ ಕಟ್ಟುವ ಅವಧಿಯನ್ನು 3 ವರ್ಷಕ್ಕೆ ಕಡಿತಗೊಳಿಸಲಿದೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಎಷ್ಟು ಹೆಚ್ಚಾಗಬಹುದು
ನಿವೇಶನ ಪಡೆದ ಮೂರು ವರ್ಷದೊಳಗೆ ಮನೆ ಕಟ್ಟದಿದ್ದರೆ ಆಯಾ ಪ್ರದೇಶದ ಮಾರ್ಗಸೂಚಿ ದರದ ಅನ್ವಯ ಶೇ.25ರಷ್ಟು ದಂಡ ವಿಧಿಸುವುದು ಬಿಡಿಎ ಮುಂದಿರುವ ಪ್ರಸ್ತಾವ. ದೆ. ಇದು ಜಾರಿಯಾದರೆ ಭಾರೀ ಹೊರೆ ನಿವೇಶನದಾರರ ಮೇಲೆ ಬೀರಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿಸಿದ ಗ್ರಾಹಕರುಗಳಿಗೆ 3 ವರ್ಷದೊಳಗೆ ಮನೆ ಕಟ್ಟಿಕೊಳ್ಳದಿದ್ದರೆ ಶೇ.25ರಷ್ಟು ದಂಡ ಪಾವತಿಸಲೇಬೇಕಾದ ಸಿಲುಕಲಿದ್ದಾರೆ! ಸಂಕಷ್ಟಕ್ಕೆ ನಿಗದಿತ ಅವಧಿಯಲ್ಲಿ ಮನೆ ಕಟ್ಟಿಸಿಕೊಳ್ಳದವರಿಗೆ ದಂಡ ವಿಧಿಸುವ ನಿಯಮವಿದ್ದರೂ ಪಾಲನೆಯಾ ಗುತ್ತಿಲ್ಲ. ಸಾವಿರಾರು ನಿವೇಶನಗಳು ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಡಿಎ ಈಗ ನಿಯಮ ವನ್ನು ಇನ್ನಷ್ಟು ಬಿಗಿಗೊಳಿಸಲು ಉದ್ದೇಶಿಸಿದೆ. ವಿವಿಧ ಬಡಾವಣೆಗಳಲ್ಲಿ ಬಿಡಿಎ ನಿವೇಶನ ಪಡೆದ ಗ್ರಾಹಕರು, ಹಲವಾರು ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಳ್ಳದೆ ನೂರಾರು ಎಕರೆಗಳಷ್ಟು ಜಾಗ ಖಾಲಿ ಬಿದ್ದಿದೆ. ಖಾಲಿ ನಿವೇಶನಗಳು ಕಂಡ ಕೂಡಲೇ ತ್ಯಾಜ್ಯ ಸುರಿಯುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಗಿಡ-ಗಂಟಿ ಬೆಳೆದು ಹಾವು , ಚೇಳು ಸೇರಿದಂತೆ ಹಲವು ಪ್ರಾಣಿಗಳ ಅವಾಸಸ್ಥಾನವಾಗಿ ಬದಲಾಗಿರುವ ದೂರುಗಳು ನಿರಂತರಾಗಿ ಕೇಳಿ ಬರುತ್ತಿವೆ. ಇದೆಲ್ಲವನ್ನು ತಡೆಯಲು ಮನೆ ಕಟ್ಟುವ ಅವಧಿಯನ್ನು ಮೂರು ವರ್ಷಕ್ಕೆ ಇಳಿಸುವ ನಿರ್ಧಾರ ಆಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮಾರಾಟದಲ್ಲೂ ಬದಲಾವಣೆ
ಇನ್ನು ಬಿಡಿಎ ನಿವೇಶನ ಮಾರಾಟ ವಿಚಾರದಲ್ಲೂ ಇದ್ದ ಗೊಂದಲವನ್ನು ಸರಿಪಡಿಸಲಾಗುತ್ತಿದೆ. ಹಿಂದೆ ಬಿಡಿಎಯಿಂದ ನಿವೇಶನ ಖರೀದಿಸಿದ 10 ವರ್ಷಗಳ ವರಗೆ ನಿವೇಶನ ಮಾರಾಟ ಮಾಡುವಂತಿರಲಿಲ್ಲ/. ಈಗ ನಿಯಮ ಸಡಿಲಗೊಳಿಸಲಾಗಿದ್ದು, ಯಾವಾಗ ಬೇಕಾದರೂ ನಿವೇಶನ ಮಾರಾಟ ಮಾಡಬಹುದು. ಆದರೆ, ಮೂಲ ಫಲಾನುಭವಿಗಳಿಂದ ನಿವೇಶನ ಖರೀದಿ ಮಾಡುವವರು ಮಾರುಕಟ್ಟೆ ಮಾರ್ಗಸೂಚಿ ಅನ್ವಯ ಶೇ.25ರಷ್ಟು ದಂಡ ಶುಲ್ಕ ಪಾವತಿ ಅನಿವಾರ್ಯ ಎನ್ನುವುದು ಅಧಿಕಾರಿಗಳ ವಿವರಣೆ.