Bangalore News: ಬೆಂಗಳೂರು ಅಪಾರ್ಟ್‌ಮೆಂಟ್‌ಗಳಿಗೂ ತಟ್ಟಿದ ನೀರಿನ ಬಿಸಿ, ಈಜುಕೊಳಗಳು ಬಂದ್‌ !
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಅಪಾರ್ಟ್‌ಮೆಂಟ್‌ಗಳಿಗೂ ತಟ್ಟಿದ ನೀರಿನ ಬಿಸಿ, ಈಜುಕೊಳಗಳು ಬಂದ್‌ !

Bangalore News: ಬೆಂಗಳೂರು ಅಪಾರ್ಟ್‌ಮೆಂಟ್‌ಗಳಿಗೂ ತಟ್ಟಿದ ನೀರಿನ ಬಿಸಿ, ಈಜುಕೊಳಗಳು ಬಂದ್‌ !

Water problem ಬೆಂಗಳೂರಿನಲ್ಲಿ ಖಾಸಗಿ ಟ್ಯಾಂಕರ್ ಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡ ಪರಿಣಾಮವಾಗಿ ಅಪಾರ್ಟ್ ಮೆಂಟ್ ಗಳಿಗೂ ನೀರಿನ ಕೊರತೆ ತಟ್ಟಿದೆ. ಇದರಿಂದ ಕಾರ್ ವಾಷಿಂಗ್, ಸ್ವಿಮ್ಮಿಂಗ್ ಪೂಲ್ ಬಂದ್ ಆಗುತ್ತಿವೆ.(ವರದಿ: ಎಚ್. ಮಾರುತಿ, ಬೆಂಗಳೂರು)

ಬೇಸಿಗೆ ಕಾರಣಕ್ಕೆ ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳಗಳನ್ನು ಬಂದ್‌ ಮಾಡಲಾಗುತ್ತಿದೆ.
ಬೇಸಿಗೆ ಕಾರಣಕ್ಕೆ ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳಗಳನ್ನು ಬಂದ್‌ ಮಾಡಲಾಗುತ್ತಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯನ್ನು ಕೇವಲ ಬಡ, ಮಾಧ್ಯಮ ಅಥವಾ ಕೊಳಚೆ ಪ್ರದೇಶಗಳ ನಿವಾಸಿಗಳು ಮಾತ್ರ ಎದುರಿಸುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ. ಸ್ವತಂತ್ರ ಮನೆಗಳ ನಿವಾಸಿಗಳೂ ಈ ಬಾರಿ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇನ್ನು ಗೇಟೆಡ್ ಕಮ್ಯೂನಿಟಿ ಪ್ರದೇಶಗಳು ಅಥವಾ ವಸತಿ ಸಮುಚ್ಚಯಗಳೂ ಈಗ ನೀರಿನ ಸಮಸ್ಯೆಗೆ ತುತ್ತಾಗಿವೆ. ಗೇಟೆಡ್ ಕಮ್ಯೂನಿಟಿ ಮನೆಗಳು ಅಥವಾ ಅಪಾರ್ಟ್ ಮೆಂಟ್ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಹೆಚ್ಚಿನ ಹಣ ತೆತ್ತು ಪ್ರತಿದಿನ ರಾತ್ರಿ ಸಮಯದಲ್ಲಿ ಟ್ಯಾಂಕರ್ ಗಳಲ್ಲಿ ನೀರು ತರಿಸುತ್ತಿದ್ದರು. ಆದರೆ ಈಗ ಹಣ ಕೊಟ್ಟರೂ ನೀರು ಸಿಗದ ಪರಿಸ್ಥಿತಿ ಎದುರಾಗಿದೆ.

ಮೊದಲನೆಯದಾಗಿ ಅಂತರ್ಜಲ ಬತ್ತಿ ಹೋಗಿರುವುದರಿಂದ ಟ್ಯಾಂಕರ್ ಗಳಿಗೂ ನೀರಿನ ಕೊರತೆ ಉಂಟಾಗಿದೆ. ಎರಡನೆಯದಾಗಿ ಟ್ಯಾಂಕರ್ ಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಗೇಟೆಡ್ ಕಮ್ಯೂನಿಟಿಗಳ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ.

ಸಾರಿಗೆ ಇಲಾಖೆ ಸೂಚನೆ

ಈ ನಿಟ್ಟಿನಲ್ಲಿ ಸರ್ಕಾರ ಮಿಂಚಿನ ಕಾರ್ಯಾಚರಣೆ ಆರಂಭಿಸಿದೆ. ಈಗಾಗಲೇ 8 ಖಾಸಗಿ ಟ್ಯಾಂಕರ್ ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ನಗರ ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಎಂ.ಶೋಭಾ ತಿಳಿಸಿದ್ದಾರೆ.

ಇದರಿಂದ ಖಾಸಗಿ ಟ್ಯಾಂಕರ್ ಗಳ ಮೇಲೆ ಪ್ರಭಾವ ಬೀರುತ್ತಿದ್ದ ಅಪಾರ್ಟ್ ಮೆಂಟ್ ಗಳು ಈಗ ಟ್ಯಾಂಕರ್ ನೀರಿಗಾಗಿ ಜಲಮಂಡಳಿಯನ್ನು ಆಶ್ರಯಿಸಬೇಕಾಗಿದೆ. ನೀರು ಸರಬರಾಜು ಇಲ್ಲದ ಕಾರಣ ಅನೇಕ ಅಪಾರ್ಟ್ ಮೆಂಟ್ ಗಳ ನಿವಾಸಿಗಳ ಸಂಘಗಳು ತನ್ನ ಸದಸ್ಯರಿಗೆ ನೀರಿನ ಅಲಭ್ಯತೆ ಕುರಿತು ಸಂದೇಶ ರವಾನಿಸಿವೆ.

ಇನ್ನೂ ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ಸಂಪುಗಳಲ್ಲಿ ನೀರು ಖಾಲಿಯಾಗಿದ್ದು, ಓವರ್ ಹೆಡ್ ಟ್ಯಾಂಕ್ ಗಳಲ್ಲಿ ಇರುವಷ್ಟು ನೀರು ಮಾತ್ರ ಲಭ್ಯ. ಹೆಚ್ಚೆಂದರೆ ಒಂದು ಗಂಟೆ ಮಾತ್ರ ನಿಭಾಯಿಸಬಹುದು, ಕ್ಷಮೆ ಇರಲಿ ಎಂದು ಗ್ರೂಪ್ ಗಳಲ್ಲಿ ಸಂದೇಶಗಳು ಓಡಾಡುತ್ತಿವೆ.

ಸರ್ಕಾರ ಖಾಸಗಿ ಟ್ಯಾಂಕರ್ ಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಅಪಾರ್ಟ್ ಮೆಂಟ್ ಗಳಿಗೆ ತೊಂದರೆ ಎದುರಾಗಿದೆ. ಜಲಮಂಡಳಿ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಇದುವರೆಗೂ ಟ್ಯಾಂಕರ್ ಗಳ ಮಾಲೀಕರೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದೆವು. ಇದೀಗ ಅಧಿಕಾರಿಗಳೊಂದಿಗೆ ಹೆಣಗಬೇಕಾಗಿದೆ. ಇದರ ಬದಲಾಗಿ ಸರ್ಕಾರ ಟ್ಯಾಂಕರ್ ನೀರಿಗೆ ದರವನ್ನು ನಿಗದಿಪಡಿಸಿ ನಿಯಂತ್ರಣಕ್ಕೊಳಪಡಿಸಲಿ ಎಂದು ಒತ್ತಾಯಿಸುತ್ತಾರೆ.

ನೋಂದಣಿ ಕಡ್ಡಾಯ

ಖಾಸಗಿ ಟ್ಯಾಂಕರ್ ಗಳು, ಮಾರ್ಚ್ 7ರೊಳಗೆ ನೋಂದಣಿಯನ್ನು ಮಾಡಿಕೊಳ್ಳಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿ ಸೂಚನೆ ನೀಡಿದೆ. ಒಂದು ವೇಳೆ ವಿಫಲವಾದಲ್ಲಿ ಅಂತಹ ಟ್ಯಾಂಕರ್ ಗಳನ್ನು 110 ಹಳ್ಳಿಗಳಿಗೆ ಉಚಿತವಾಗಿ ನೀರು ಸರಬರಾಜು ಮಾಡಲು ಬಳಸಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಒಟ್ಟು 3,500 ನೀರಿನ ಟ್ಯಾಂಕರ್ ಗಳಿವೆ. ಆದರೆ ಕೇವಲ 60 ಟ್ಯಾಂಕರ್ ಗಳು ಮಾತ್ರ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿವೆ. ಬಿಡಬ್ಲ್ಯೂ ಎಸ್ ಎಸ್ ಬಿ ಬಳಿ 68 ಟ್ಯಾಂಕರ್ ಗಳಿದ್ದು, ಉಚಿತವಾಗಿ ನೀರು ಸರಬರಾಜು ಮಾಡಲು ಬಳಸಿಕೊಳ್ಳುತ್ತಿವೆ.

ಕಾರು ಸ್ವಚ್ಛಗೊಳಿಸಬೇಡಿ, ಮನವಿ

ಬಿಸಿಲಿನಷ್ಟೇ ನೀರಿನ ಸಮಸ್ಯೆಯೂ ಬಿಸಿಯಾಗತೊಡಗಿದೆ. ನಗರದ ಅನೇಕ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘಗಳು ತಾತ್ಕಾಲಿಕವಾಗಿ ಕಾರು ತೊಳೆಯುವುದನ್ನು ನಿಷೇಧಿಸಿವೆ ಮತ್ತು ಸ್ವಿಮ್ಮಿಂಗ್ ಪೂಲ್ ಗಳನ್ನು ಬಂದ್ ಮಾಡಿವೆ. ಇದುವರೆಗೂ ವಾರಕ್ಕೊಮ್ಮೆ ಕಾರು ತೊಳೆಯಲು ಅವಕಾಶ ನೀಡಲಾಗಿತ್ತು. ಇದೀಗ ನೀರು ರಹಿತವಾಗಿ ಸ್ವಚ್ಛಗೊಳಿಸಲು ಅವಕಾಶ ನೀಡಲಾಗಿದೆ. ಹೀಗೆ ನೀರನ್ನು ಉಳಿಸಲು ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ನಿವಾಸಿಗಳ ಸಂಘಗಳು ಅನುಸರಿಸುತ್ತಿವೆ.

ಬೆಂಗಳೂರಿನ ಕೇಂದ್ರ ಭಾಗದಲ್ಲಿ ಒಂದು ಹಂತಕ್ಕೆ ನೀರಿನ ಸಮಸ್ಯೆಯನ್ನು ನಿಭಾಯಿಸಬಹುದಾಗಿದೆ. ಆದರೆ ನಗರದ ಹೊರ ಭಾಗಗಳಲ್ಲಿ ಅದರಲ್ಲೂ ಐಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿ ಕಷ್ಟವಾಗುತ್ತಿದೆ. ಈ ಪ್ರದೇಶಗಳಲ್ಲಿ ಪೈಪ್ ಗಳ ಸಂಪರ್ಕ ಇಲ್ಲದಿರುವುದರಿಂದ ಕಾವೇರಿ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮೂರು ತಿಂಗಳ ಕಾಲ ಬೆಂಗಳೂರಿನಲ್ಲಿ ನೀರಿನ ವಿಚಾರದಲ್ಲಿ ತೊಂದರೆಗಳು ಹೆಚ್ಚಲಿದ್ದು, ಸಮರ್ಪಕ ಬಳಕೆ ಮಾರ್ಗವೊಂದೇ ಪರ್ಯಾಯ ಮಾರ್ಗ ಎನ್ನುವ ಸಂದೇಶವನ್ನೂ ರವಾನಿಸಲಾಗುತ್ತಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner