Bangalore News: ಬೆಂಗಳೂರಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ, ಬೆಸ್ಕಾಂ ವಿರುದ್ದ ಆಕ್ರೋಶ, ಸಮಸ್ಯೆಗೆ ಕಾರಣವೇನು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ, ಬೆಸ್ಕಾಂ ವಿರುದ್ದ ಆಕ್ರೋಶ, ಸಮಸ್ಯೆಗೆ ಕಾರಣವೇನು

Bangalore News: ಬೆಂಗಳೂರಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ, ಬೆಸ್ಕಾಂ ವಿರುದ್ದ ಆಕ್ರೋಶ, ಸಮಸ್ಯೆಗೆ ಕಾರಣವೇನು

Bescom News ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ವ್ಯಾಪ್ತಿಯಲ್ಲಿ ವಿದ್ಯುತ್‌ ಕಡಿತವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚಿದ ವಿದ್ಯುತ್‌ ಕಡಿತ
ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚಿದ ವಿದ್ಯುತ್‌ ಕಡಿತ

ಬೆಂಗಳೂರು: ವಾಡಿಕೆಯ ಮುಂಗಾರು ಮಳೆ ಆರಂಭವಾಗುವುದಕ್ಕೂ ಮುನ್ನ ಸುರಿದ ಮಳೆಗೆ ಮೇ ತಿಂಗಳಲ್ಲಿ ಅತಿಹೆಚ್ಚು ವಿದ್ಯುತ್‌ ಅಡಚಣೆ ಉಂಟಾಗಿರುವುದು ಬೆಸ್ಕಾಂ ಅಂಕಿಅಂಶಗಳಿಂದ ವ್ಯಕ್ತವಾಗಿದೆ. ಈ ವರ್ಷದ ಯಾವುದೇ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ವಿದ್ಯುತ್‌ ಅಡಚಣೆ ಉಂಟಾಗಿರುವ ಬಗ್ಗೆ ಹೆಚ್ಚು ದೂರುಗಳು ದಾಖಲಾಗಿವೆ. ಬೇಸಿಗೆಗೆ ಹೋಲಿಸಿದರೆ ಸಾಮಾನ್ಯವಾಗಿ ಮೇ ತಿಂಗಳಲ್ಲಿ ವಿದ್ಯುತ್‌ ಬೇಡಿಕೆ ಕಡಿಮೆ ಇರುತ್ತದೆ. ಆದರೆ ಈ ತಿಂಗಳ ಆರಂಭದಲ್ಲಿ ಸುರಿದ ಮಳೆಗೆ ವಿದ್ಯುತ್‌ ಮೂಲಭೂತ ಸೌಕರ್ಯಗಳು ಹಾಳಾಗಿ ವಿದ್ಯುತ್‌ ಸರಬರಾಜಿಗೆ ಅಡಚಣೆ ಉಂಟಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ನಿರಂತರವಾಗಿ ಹಲವು ತಿಂಗಳ ಕಾಲ ಮಳೆ ಇಲ್ಲದೆ ಮರಗಳು ಚೆನ್ನಾಗಿ ಒಣಗಿದ್ದವು. ತಿಂಗಳ ಆರಂಭದಲ್ಲಿ ಸುರಿದ ಭಾರಿ ಮಳೆಗೆ ಈ ಮರಗಳೂ ಧರೆಗುರುಳಿವೆ. ಇದರಿಂದ ವಿದ್ಯುತ್‌ ಸರಬರಾಜಿನ ಕೇಬಲ್‌ ಗಳಿಗೆ ಹಾನಿ ಉಂಟಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಆಗಿದೆ ಎಂದೂ ಅವರು ಪ್ರತಿಪಾದಿಸುತ್ತಾರೆ.

ಮುಂಗಾರು ಮಳೆ ಆರಂಭವಾಗುವುದಕ್ಕೂ ಮುನ್ನ ಸುರಿವ ಮಳೆಯ ಜೊತೆಗೆ ಗಾಳಿ ಜೋರಾಗಿ ಬೀಸುತ್ತದೆ. ಇದರಿಂದ ವಿದ್ಯುತ್‌ ಕೇಬಲ್‌ ಹಾನಿಗೊಳಗಾಗುವುದರ ಜೊತೆಗೆ ವಿದ್ಯುತ್‌ಕಂಬಗಳೂ ಉರುಳಿಬಿದ್ದಿವೆ ಎಂದು ಬೆಸ್ಕಾಂ ಇಂಜಿನಿಯರ್‌ಗಳು ಹೇಳುತ್ತಾರೆ.

ಬೇಸಿಗೆಯಲ್ಲಿ ಬಿರು ಬಿಸಿಲು ಇರುತ್ತದೆ. ಉಷ್ಣಾಂಶ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಮುಂಗಾರು ಆರಂಭವಾಗುವುದಕ್ಕೂ ಮುನ್ನ ವಿದ್ಯುತ್‌ ಮೂಲ ಸೌಕರ್ಯಗಳ ನಿರ್ವಹಣೆ ನಿರ್ಣಾಯಕವಾಗಿರುತ್ತದೆ.

ಕಂಬಗಳ ಮೇಲೆ ಹಾದುಹೋಗಿರುವ ಕೇಬಲ್‌ ಗಳನ್ನು ಸಾಮಾನ್ಯವಾಗಿ ಸಿಲಿಕಾನ್‌ ನಿಂದ ತಯಾರಿಸಲಾಗಿರುತ್ತವೆ. ಬೇಸಿಗೆಯ ಉಷ್ಣಾಂಶಕ್ಕೆ ಈ ಕೇಬಲ್‌ ಗಳು ಮೃದುವಾಗುತ್ತವೆ. ಹಾಗಾಗಿ ಸುಲಭವಾಗಿ ಈ ಕೇಬಲ್‌ ಗಳು ಹಾಳಾಗುತ್ತವೆ.‌ ಮುಂಗಾರು ಆರಂಭವಾಗುವುದಕ್ಕೂ ಮುನ್ನ ಸಾಧ್ಯವಾದಷ್ಟೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಮುಂಗಾರು ಮುನ್ನ ಸುರಿವ ಐದಾರು ರಿ ಸುರಿವ ಮಳೆಗೆ ಕೇಬಲ್‌ ಗಳನ್ನು ನಿರ್ವಹಿಸುವುದು ಕಷ್ಟ ಎಂದು ಬೆಸ್ಕಾಂ ಇಂಜಿನಿಯರ್‌ ಗಳು ಅಭಿಪ್ರಾಯಪಡುತ್ತಾರೆ.

ಮೇ 1ರಿಂದ ಮೇ 9 ರವರೆಗೆ ಸುರಿದ ಭಾರಿ ಪ್ರಮಾಣದಲ್ಲಿ ಮಳೆಯಾಗಿತ್ತು. ಈ ಅವಧಿಯಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಬೆಸ್ಕಾಂ ಸಹಾಯವಾಣಿಗೆ ಸುಮಾರು 15,000 ದೂರುಗಳು ಬಂದಿವೆ ಎಂದು ಹೇಳುತ್ತಾರೆ.

ಈ ವರ್ಷದ ಮೊದಲ ಮಳೆ ಸುರಿದ ಮೇ 3ರಂದು ಬೆಸ್ಕಾಂ ವ್ಯಾಪ್ತಿಯಲ್ಲಿ 305 ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ 57 ವಿದ್ಯುತ್‌ ಪರಿವರ್ತಕಗಳು ಹಾನಿಗೊಳಗಾಗಿದ್ದವು. ಇವುಗಳನ್ನು ದುರಸ್ತಿಗೊಳಿಸಲು 1.18 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಆದರೂ ಬೇಸಿಗೆ ಮತ್ತು ಮಳೆಯ ಸಂದರ್ಭದಲ್ಲಿ ಅಡಚಣೆ ಗಂಭೀರ ಸಮಸ್ಯೆಯಾಗಿರಲಿಲ್ಲ. ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೂ ವಿದ್ಯುತ್‌ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗದ ಕಾರಣ ವಿದ್ಯುತ್‌ ಅಡಚಣೆಗೆ ಸಮಸ್ಯೆ ಉಂಟಾಗಿರಲಿಲ್ಲ. ಮುಂಗಾರು ಆರಂಭವಾಗುವ ವೇಳೆಗೆ ದುರ್ಬಲಗೊಂಡ ಮರಗಳು ಉರುಳಿ ಬಿದ್ದಿದ್ದವು. ಗಾಳಿಯ ಆರ್ಭಟವೂ ಕಡಿಮೆಯಾಗಿತ್ತು. ಹಾಗಾಗಿ ವಿದ್ಯುತ್‌ ಅಡಚಣೆ ಕಡಿಮೆ ಎಂದೇ ಹೇಳಬಹುದು ಎಂದು ಬೆಸ್ಕಾಂ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.

ಮಳೆಗಾಲ ಇನ್ನಷ್ಟೇ ಆರಂಭವಾಗಬೇಕಿದೆ. ಶಾಲಾ ಕಾಲೇಜುಗಳು ಆರಂಭವಾಗುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯುತ್‌ ಅಡಚಣೆ ಉಂಟಾದರೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ವಿದ್ಯುತ್‌ ಮೂಲಭೂತ ಸೌಕರ್ಯಗಳನ್ನು ಸುಸ್ಥಿತಿಯಲ್ಲಿಡಲು ಬೆಸ್ಕಾಂ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಗಾಲ ಎಂದರೆ ಭಾರಿ ಮಳೆಯೂ ಸುರಿಯುತ್ತದೆ, ಬಿರುಗಾಳಿಯೂ ಬೀಸುತ್ತದೆ. ಸಬೂಬುಗಳನ್ನು ಹೇಳದೆ ಬೆಸ್ಕಾಂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸುತ್ತಾರೆ.

ವರದಿ: ಎಚ್.ಮಾರುತಿ, ಬೆಂಗಳೂರು

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner