Bangalore Weather: ಬೆಂಗಳೂರಲ್ಲೂ ಬಿರು ಬಿಸಿಲು, 5 ವರ್ಷದಲ್ಲಿ ಉಷ್ಣಾಂಶ ಈಗಿನದ್ದೇ ಅತ್ಯಧಿಕ, ಏಪ್ರಿಲ್‌ನಲ್ಲಿ ಇನ್ನಷ್ಟು ಹೆಚ್ಚಳ !
ಬೇಸಿಗೆಯ ಕಾವು ಈ ಬಾರಿ ಬೆಂಗಳೂರಿನಲ್ಲೂ ಅಧಿಕ. ಏಪ್ರಿಲ್‌ನಲ್ಲಿ28 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವ ಮುನ್ಸೂಚನೆ ದೊರೆತಿದೆ.
ಬೆಂಗಳೂರು: ಒಂದು ಕಡೆ ಲೋಕಸಭೆ ಚುನಾವಣೆ 2024ರ ಕಾವು ಸದ್ದಿಲ್ಲದೇ ಎಲ್ಲೆಡೆ ಏರುತ್ತಿದೆ. ಬೆಂಗಳೂರಿನಲ್ಲೂ ಆ ಕಾವು ಕಂಡು ಬರುತ್ತಿದೆ. ಇದರ ನಡುವೆಯೇ ಬೇಸಿಗೆಯ ಕಾವು ಕೂಡ ಏರಿಕೆಯಾಗುತ್ತಲೇ ಇದೆ. ಕರ್ನಾಟಕದ ಕೆಲವು ಕಡೆಗಳಲ್ಲಿ ಬಿಸಿಗಾಳಿಯ ವಾತಾವರಣ ಕಂಡು ಬಂದರೆ, ಗಾರ್ಡನ್‌ಸಿಟಿ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರಿನಲ್ಲಿ ಬಿಸಿಲ ಪ್ರಮಾಣ ಕೊಂಚ ಹೆಚ್ಚೇ ಇದೆ. ಶುಕ್ರವಾರದಂದು 36.4 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಐದು ವರ್ಷಗಳ ಅವಧಿಯಲ್ಲಿಯೇ ಅತ್ಯಧಿಕ ಎದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಬೆಂಗಳೂರು ಹಾಗೂ ಮೈಸೂರು ಹಸಿರು ವಲಯದಲ್ಲಿ ಇರುವುದರಿಂದ ಇಲ್ಲಿ ಎಂತಹ ಪರಿಸ್ಥಿತಿಯಲ್ಲೂ ಉಷ್ಣಾಂಶ ಏರುವುದು ಕಡಿಮೆ. ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೊಂಚ ಉಷ್ಣಾಂಶ ಹೆಚ್ಚಳವಾಗಿದೆ. ಅದರಲ್ಲೂ ಹಿಂದಿನ 15 ವರ್ಷಗಳಲ್ಲಿ ಇದು ಮೂರನೇ ಅತ್ಯಧಿಕ ಉಷ್ಣಾಂಶ ಎಂದು ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಈವರೆಗೂ ದಾಖಲಾದ ಗರಿಷ್ಠ ಉಷ್ಣಾಂಶದ ಪ್ರಮಾಣ 37.3 ಡಿಗ್ರಿ ಸೆಲ್ಸಿಯಸ್. ಇದು 28 ವರ್ಷಗಳ ಹಿಂದೆ ದಾಖಲಾಗಿದ್ದು. ಅದೂ ಮಾರ್ಚ್ 25, 1996 ರಂದು ಈ ದಾಖಲೆಯ ಉಷ್ಣಾಂಶ ಕಂಡು ಬಂದಿತ್ತು. ಅದನ್ನು ಬಿಟ್ಟರೆ 37 ಡಿಗ್ರಿ ಸೆಲ್ಸಿಯಸ್ ಒಳಗೆ ಗರಿಷ್ಠ ಉಷ್ಣಾಂಶ ಬೆಂಗಳೂರಿನಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಗರಿಷ್ಠ ಉಷ್ಣಾಂಶ ಪ್ರಮಾಣ 33 ಡಿಗ್ರಿ ಸೆಲ್ಸಿಯಸ್ ಆಜುಜಾಜಿನಲ್ಲಿದೆ. ಈ ವರ್ಷ ಸುಮಾರು 3.3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಿದೆ ಎನ್ನುವುದು ಹವಾಮಾನ ತಜ್ಞರ ಅಭಿಪ್ರಾಯ.
ಆದರೆ ಈಗಿನ ಉಷ್ಣಾಂಶದ ಪ್ರಮಾಣವನ್ನು ನೋಡಿದರೆ ಏಪ್ರಿಲ್ ತಿಂಗಳ ಬೇಸಿಗೆ ಸಮಯದಲ್ಲಿ ಇನ್ನೂ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಏರಿಕೆ ಕಾಣಬಹುದು. ಆಗ ಹಿಂದಿನ ದಾಖಲೆಯನ್ನೂ ಮುರಿದು ಅತಿ ಗರಿಷ್ಠ ಉಷ್ಣಾಂಶ ಇದೇ ವರ್ಷವೇ ದಾಖಲಾಗಬಹುದು ಎನ್ನುವುದನ್ನೂ ತಜ್ಞರು ಹೇಳುತ್ತಾರೆ.
ಈಗಾಗಲೇ ಕಲಬುರಗಿ, ರಾಯಚೂರು, ಬೀದರ್, ವಿಜಯಪುರ, ಯಾದಗಿರಿ, ಬಾಗಲಕೋಟೆ ,ಕೊಪ್ಪಳ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇನ್ನೂ ಹೆಚ್ಚುವ ಮುನ್ಸೂಚನೆಯಿದೆ. ಬೆಂಗಳೂರಲ್ಲಿನಲ್ಲಿಯೂ ಉತ್ತರ ಕರ್ನಾಟಕದಂತೆಯೇ ಬಿಸಿಲ ದಿನಗಳನ್ನು ಈ ಬಾರಿ ಎದುರಿಸಬೇಕಾಗಬಹುದು ಎನ್ನಲಾಗುತ್ತಿದೆ.
ಈ ಕಾರಣದಿಂದ ಬೆಂಗಳೂರಿನಲ್ಲೂ ಕೂಡ ಬೆಳಿಗ್ಗೆ11 ರಿಂದ ಮಧ್ಯಾಹ್ನ 3ರವರೆಗೆ ಆದಷ್ಟು ಮನೆ ಅಥವಾ ಕಚೇರಿಯಿಂದ ಹೊರ ಹೋಗದಂತೆ ನೋಡಿಕೊಳ್ಳಿ. ತಲೆಗೆ ಬಿಳಿ ಕಾಟನ್ ಬಟ್ಟೆಯನ್ನು ಸುತ್ತಿಕೊಳ್ಳಿ. ಕರಿಯ ಛತ್ತಿ ಇಲ್ಲವೇ ಬಿಳಿ ಬಣ್ಣದ ಟೋಪಿಗಳನ್ನು ತಪ್ಪದೇ ಬಳಸಿ. ಹೊರಗಡೆ ಹೋದಾಗ ಹೆಚ್ಚು ದ್ರವಾಹಾರ ಸೇವಿಸಿ. ಅದರಲ್ಲೂ ಹಣ್ಣಿನ ಜ್ಯೂಸ್ ಇಲ್ಲವೇ ಮಜ್ಜಿಗೆ, ನೀರು ಒಳ್ಳೆಯದು ಎನ್ನುವುದು ತಜ್ಞರ ಸಲಹೆ.
ಮಹಾರಾಷ್ಟ್ರದಲ್ಲಿ ಇರುವಷ್ಟು ಬಿಸಿಗಾಳಿ ಕರ್ನಾಟಕದಲ್ಲಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ ಎನ್ನುವುದು ಹವಾಮಾನ ತಜ್ಞರು ನೀಡುವ ಸಲಹೆ.