Bangalore News: ಬಿಸಿ ಆಹಾರ ನೀಡದ ಬೆಂಗಳೂರಿನ ರೆಸ್ಟೋರೆಂಟ್‌ಗೆ ದಂಡ, ಗ್ರಾಹಕ ನ್ಯಾಯಾಲಯದ ಆದೇಶ ಏನು?
Consumer court ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಗುಣಮಟ್ಟದ ಆಹಾರ ನೀಡದ ಹೊಟೇಲ್ ಒಂದಕ್ಕೆ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ಹೊಟೇಲ್‌ಗಳಲ್ಲಿ ಆಗತಾನೇ ಮಾಡಿಕೊಟ್ಟ ಬಿಸಿಯಾದ ಹಾಗೂ ರುಚಿಕರವಾದ ಆಹಾರ ಸಿಗಬಹುದು ಎಂದು ಹೋಗುವ ಗ್ರಾಹಕರು ಅಧಿಕ. ಅದರಲ್ಲೂ ಪ್ರವಾಸಕ್ಕೆಂದು ಹೊರಟರೆ ಹೆಚ್ಚಿನ ಜನ ಅವಲಂಬಿಸುವುದು ಹೊಟೇಲ್ ಅನ್ನೇ. ಅದೇ ರೀತಿ ಮಹಿಳೆಯೊಬ್ಬರು ಹೊಟೇಲ್‌ಗೆ ಹೋದರೂ ಅಲ್ಲಿ ಆರಿ ಹೋದ ಆಹಾರ ನೀಡಿ ಅದನ್ನು ಸರಿಪಡಿಸುವಂತೆ ಕೋರಿದರೂ ನಿರ್ಲಕ್ಷ್ಯತನದಿಂದ ನಡೆದುಕೊಂಡ ಘಟನೆ ನಡೆದಿದೆ. ಈ ರೀತಿ ಗ್ರಾಹಕರ ವಿರೋಧಿಯಾಗಿ ನಡೆದುಕೊಂಡ ಹೊಟೇಲ್‌ಗೆ ಬೆಂಗಳೂರು ಗ್ರಾಹಕರ ನ್ಯಾಯಾಲಯವು 7,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ಬೆಂಗಳೂರಿನ ಕೋರಮಂಗಲ ನಿವಾಸಿ ತಹಾರ ಎನ್ನುವವರು ಎರಡು ವರ್ಷದ ಹಿಂದೆ ಅಂದರೆ 2022ರ ಜುಲೈ 30 ರಂದು ಬೆಂಗಳೂರಿನಿಂದ ಹಾಸನಕ್ಕೆಂದು ಪ್ರವಾಸ ಹೊರಟಿದ್ದರು. ಈ ವೇಳೆ ಬೆಂಗಳೂರು ಹೊರ ವಲಯದಲ್ಲಿ ಉಡುಪಿ ಗಾರ್ಡನ್ ಎನ್ನುವ ಹೊಟೇಲ್‌ಗೆ ಕುಟುಂಬದವರೊಂದಿಗೆ ತೆರಳಿದ್ದರು. ಈ ವೇಳೆ ಅವರು ಆರ್ಡರ್ ಮಾಡಿದ್ದ ಆಹಾರ ಗುಣಮಟ್ಟದಿಂದ ಕೂಡಿರಲಿಲ್ಲ. ಆರಿ ಹೋಗಿತ್ತು. ಈ ಬಗ್ಗೆ ಸಪ್ಲೈಯರ್‌ಗೆ ತಿಳಿಸಿದರೆ ಆತ ಬದಲು ಮಾಡಿಕೊಡಲಿಲ್ಲ. ಮಾಲೀಕರಿಗೆ ದೂರು ನೀಡಿದರೂ ಅವರಿಂದಲೂ ನಿರ್ಲಕ್ಷ್ಯದ ಉತ್ತರವೇ ಬಂದಿತ್ತು. ನನಗೆ ರಕ್ತದೊತ್ತಡವಿದೆ. ಸೂಕ್ತ ಸಮಯದಕ್ಕೆ ಆಹಾರ ತೆಗೆದುಕೊಳ್ಳದೇ ಇದ್ದರೆ ಆರೋಗ್ಯ ಸಮಸ್ಯೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರೂ ಹೊಟೇಲ್ ನವರ ವರ್ತನೆ ಬದಲಾಗಲಿಲ್ಲ ಎಂದು ತಹಾರ ಅವರು ಬೆಂಗಳೂರಿನ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಕಳಪೆ ಆಹಾರ ನೀಡುವ ಜತೆಗೆ ನನ್ನ ಆರೋಗ್ಯ ವ್ಯತ್ಯಯವಾಗಲು ಕಾರಣವಾಗಿದ್ದಾರೆ. ಹೊಟೇಲ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರಿನ ಪ್ರಥಮ ಹೆಚ್ಚುವರಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಕಳಪೆ ಆಹಾರ ನೀಡಿರುವುದು ಸಾಬೀತಾಗಿರುವ ಜತೆಗೆ ಹೊಟೇಲ್‌ನವರು ಗ್ರಾಹಕರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಉಡುಪಿ ಗಾರ್ಡನ್ ಹೊಟೇಲ್‌ಗೆ 7,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಗ್ರಾಹಕರ ನ್ಯಾಯಾಲಯದ ಅಧ್ಯಕ್ಷರಾಗಿರುವ ಬಿ.ನಾರಾಯಣಪ್ಪ ಅವರು ಈ ಕುರಿತು ಆದೇಶ ಹೊರಡಿಸಿದ್ದು, ನಿರ್ಲಕ್ಷ್ಯ ವಹಿಸಿದ್ದಕ್ಕೆ 5,000 ರೂ. ಹಾಗೂ ಕಾನೂನು ಹೋರಾಟದ ವೆಚ್ಚದ ರೂಪದಲ್ಲಿ 2,000 ರೂ.ಗಳನ್ನು ಹೊಟೇಲ್ ಪಾವತಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಿಂದ ಹೊರಡುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಹೊಟೇಲ್‌ಗಳಿವೆ. ಕೆಲವು ಕಡೆ ಉತ್ತಮವಾಗಿ ಆಹಾರ ನೀಡಿದರೂ ಇನ್ನಷ್ಟು ಕಡೆ ಇಂತಹ ದೂರುಗಳು ಆಗಾಗ ಕೇಳಿ ಬರುತ್ತವೆ. ಅದರಲ್ಲೂ ಪ್ರವಾಸಕ್ಕೆ ಬರುವವರಿಗೆ ಈ ಅನುಭವ ಹೆಚ್ಚು ಆಗಿರುತ್ತದೆ. ಅಲ್ಲದೇ ಬಸ್‌ಗಳು ಕೂಡ ಕೆಲವು ಕಡೆ ಮಾರ್ಗಮಧ್ಯೆ ನಿಲ್ಲಿಸಿದಾಗಲೂ ಇದೇ ರೀತಿಯ ಕಹಿ ಅನುಭವಗಳು ಆಗಿರುವುದು ಉಂಟು. ಮಹಿಳೆಯರು, ಮಕ್ಕಳು, ಹಿರಿಯರು ಕೂಡ ಕಿರಿಕಿರಿ ಅನುಭವಿಸುತ್ತಾರೆ. ಆದರೆ ಕೆಲವರು ದೂರು ನೀಡಿದರೆ ಇನ್ನು ಕೆಲವರು ಸುಮ್ಮನಾಗಿ ಬಿಡುತ್ತಾರೆ. ತಹಾರ ಅವರು ದೂರು ನೀಡಿ ಗ್ರಾಹಕರ ನ್ಯಾಯಾಲಯದಲ್ಲಿ ಎರಡು ವರ್ಷ ಹೋರಾಡಿ ಜಯ ಸಾಧಿಸಿದ್ದಾರೆ. ಆದೇಶದ ಪ್ರತಿಯನ್ನು ದೂರುದಾರರು ಹಾಗು ಹೊಟೇಲ್ ಮಾಲೀಕರಿಗೆ ಕಳುಹಿಸಲಾಗಿದೆ. ಆದೇಶ ಜಾರಿಯಾದ ನಿಗದಿತ ಅವಧಿಯೊಳಗೆ ಪರಿಹಾರ ತುಂಬಿಕೊಡದೇ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
