Bangalore News: ಬೆಂಗಳೂರು ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢ; ವಸತಿ ನಿಲಯದ ಅವ್ಯವಸ್ಥೆ, ವಾರ್ಡನ್ ಅಮಾನತು-bangalore news bangalore medical college hostel cholera case confirmed hostel warden suspended mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢ; ವಸತಿ ನಿಲಯದ ಅವ್ಯವಸ್ಥೆ, ವಾರ್ಡನ್ ಅಮಾನತು

Bangalore News: ಬೆಂಗಳೂರು ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢ; ವಸತಿ ನಿಲಯದ ಅವ್ಯವಸ್ಥೆ, ವಾರ್ಡನ್ ಅಮಾನತು

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾಲರಾ ಪ್ರಕರಣ ಖಚಿತವಾದ ನಂತರ ಕಟ್ಟೆಚ್ಚರ ವಹಿಸಲಾಗಿದೆ. ಹಾಸ್ಟೆಲ್‌ ವಾರ್ಡನ್‌ ಡಾ.ಅಖಿಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲಾಗಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ.

ಬೆಂಗಳೂರು:ಬೆಂಗಳೂರು ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಇರುವುದು ದೃಢಪಟ್ಟಿದೆ.ಬಿಎಂಸಿಆರ್‌ಐ ವಸತಿ ನಿಲಯದ 47 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಅವರನ್ನು ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲ ವಿದ್ಯಾರ್ಥಿನಿಯರು ಭೇದಿ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ಧಾರೆ. ಇವರಲ್ಲಿ ಇಬ್ಬರಿಗೆ ಕಾಲರಾ ಇರುವುದು ಕಂಡು ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ವಿಚಕ್ಷಣಾ ಘಟಕದ ಡಾ. ಪದ್ಮಾ ತಿಳಿಸಿದ್ದಾರೆ. ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ 20, ಎಚ್‌–ಬ್ಲಾಕ್‌ನಲ್ಲಿ 15 ಹಾಗೂ ಐಸಿಯುನಲ್ಲಿ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಡೀನ್ ರಮೇಶ್ ಕೃಷ್ಣ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಆರೋಪ

ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿದ್ದರಿಂದ ಕಾಲರಾ ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಆದರೆ ವಸತಿ ನಿಲಯದಿಂದ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ಕಾಲರಾ ಅಂಶಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ ಹಾಸ್ಟೆಲ್‌ನ ನೀರು ಬಳಕೆ ಮಾಡದಂತೆ ತಿಳಿಸಲಾಗಿದೆ. ಕಾಲರಾ ದೃಢಪಟ್ಟ ವಿದ್ಯಾರ್ಥಿನಿಯರಲ್ಲಿ ನಿರ್ಜಲೀಕರಣ ಕ್ಕೆ ಕಾರಣವಾಗುವ ವಿಬ್ರಿಯೋ ಬ್ಯಾಕ್ಟೀರಿಯಾ ಕಂಡು ಬಂದಿದೆ.

ಈಗಾಗಲೇ 21 ವಿದ್ಯಾರ್ಥಿನಿಯರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದೆ ಎಂದು ಕಾಲೇಜಿನ ಡೀನ್ ತಿಳಿಸಿದ್ದಾರೆ. ಆದರೆ ವಸತಿ ನಿಲಯದ ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಸ್ಟೆಲ್ ನ ವ್ಯವಸ್ಥೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ವಸತಿ ನಿಲಯದ ಯಾವುದೇ ಕೊನೆಯಲ್ಲಿ ಸ್ವಚ್ಚತೆ ಇಲ್ಲ. ಸ್ವಚ್ಛ ನೀರಿನ ಸೌಲಭ್ಯ ಇಲ್ಲ. ಕಾಲೇಜಿನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ದೂರಿದ್ದಾರೆ.

ಈ ಆರೋಪಗಳ ಹಿನ್ನೆಲೆಯಲ್ಲಿ ವಸತಿ ನಿಲಯದ ವಾರ್ಡನ್ ಡಾ. ಅಖಿಲಂದೇಶ್ವರಿ ಅವರನ್ನು ಅಮಾನತು ಮಾಡಲಾಗಿದೆ. ಹಾಸ್ಟೆಲ್ ನ ಅಡುಗೆ ಮನೆಯನ್ನು ಮುಚ್ಚಲಾಗಿದೆ. ಶುದ್ಧೀಕರಿಸಿದ ನೀರು ಮತ್ತು ಊಟವನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಒದಗಿಸಲಾಗುತ್ತಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಡೀನ್ ಹೇಳಿದ್ದಾರೆ.

ವಸತಿ ನಿಲಯ ಮತ್ತು ಕಾಲೇಜಿನ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.

ಸೌಲಭ್ಯಕ್ಕೆ ಒತ್ತು

ವಸತಿ ನಿಲಯದ ಅಡುಗೆ ತಯಾರಕರನ್ನು ಬದಲಾಯಿಸಲು ಮತ್ತು ಉತ್ತಮ ಸೌಲಭ್ಯಗಳನ್ನು ಮುಂದುವರೆಸಲು ವಸತಿ ನಿಲಯದ ಸಮಿತಿಯನ್ನು ರಚಿಸುವುದಾಗಿ ಬಿಎಂಸಿಆರ್‌ಐ ಭರವಸೆ ನೀಡಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದಿಂದ ಸೌಲಭ್ಯಗಳಲ್ಲಿ ಕೊರತೆ ಉಂಟಾಗಿದೆ. ವಸತಿ ನಿಲಯದ ಉನ್ನತೀಕರಣಕ್ಕೆ 2 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅರಮನೆ ರಸ್ತೆಯಲ್ಲಿ 65 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ವಸತಿ ನಿಲಯ ಕಟ್ಟಲು ಸರ್ಕಾರ ತೀರ್ಮಾನಿಸಿದೆ.

ಆಯೋಗದ ಅಧ್ಯಕ್ಷರ ಭೇಟಿ

ಶನಿವಾರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಹಾಸ್ಟೆಲ್ ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಬಿಎಂಸಿಆರ್‌ಐ ಹಾಸ್ಟೆಲ್ ನಲ್ಲಿ ಕನಿಷ್ಠ ಸ್ವಚ್ಛತೆಯಿಲ್ಲ ಎಂದು ಹಲವು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅವ್ಯವಸ್ಥೆ ಕುರಿತು ವರದಿ ಕೇಳಿದ್ದೇನೆ. ಅಲ್ಲದೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸಲು ಸೂಚಿಸಿದ್ದೇನೆ ಎಂದರು.

ಇಲ್ಲಿನ ಕೋಣೆಗಳು ಚಿಕ್ಕದಾಗಿವೆ. ಸರಿಯಾದ ವ್ಯವಸ್ಥೆ ಇಲ್ಲ. ಈ ಸಮಸ್ಯೆಗಳನ್ನು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಇನ್ನು ಮುಂದೆ ಪ್ರತಿಯೊಂದು ಆಸ್ಪತ್ರೆ ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

(ವರದಿ: ಎಚ್. ಮಾರುತಿ, ಬೆಂಗಳೂರು)

mysore-dasara_Entry_Point