Bangalore Metro: ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಮಂಡಳಿ ಸಮ್ಮತಿ, ಎಷ್ಟು ಕೋಟಿಯ ಯೋಜನೆಯಿದು?
Namma Metro ಬೆಂಗಳೂರು ನಮ್ಮ ಮೆಟ್ರೋ( Bangalore Namma Metro) ಇನ್ನಷ್ಟು ವಿಸ್ತರಣೆಗೆ ಕಾಲ ಕೂಡಿ ಬರುತ್ತಿದೆ.ವರದಿ: ಎಚ್.ಮಾರುತಿ.ಬೆಂಗಳೂರು

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಮಂಡಳಿ ಸಮ್ಮತಿ ಸೂಚಿಸಿದೆ. 44.65 ಕಿ.ಮೀ. ಉದ್ದದ 15,611 ಕೋಟಿ ರೂ.ಗಳ ಈ ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಮಾತ್ರ ಬಾಕಿ ಉಳಿದಿದೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ಸಾಧ್ಯತೆಗಳಿವೆ. ಬಲ್ಲ ಮೂಲಗಳ ಪ್ರಕಾರ ಸಾರ್ವಜನಿಕ ಹೂಡಿಕೆ ಮಂಡಳಿ ಈ ಯೋಜನೆಗೆ ಅಸ್ತು ಎಂದಿದ್ದು, ಕಡತವನ್ನು ಕೇಂದ್ರ ಸಚಿವ ಸಂಪುಟದ ಒಪ್ಪಿಗೆಗೆ ಕಳುಹಿಸಿದೆ. ಹೊಸದಾಗಿ ರಚನೆಯಾಗಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಸಾರ್ವಜನಿಕ ಹೂಡಿಕೆ ಮಂಡಳಿಯ ನಿರ್ಧಾರ ಅತಿ ಮುಖ್ಯವಾಗಿದ್ದು, ಈ ಮಂಡಳಿ ಸಮ್ಮತಿ ಸೂಚಿಸಿರುವುದು ಮೆಟ್ರೋ-3ನೇ ಹಂತದ ಮಹತ್ವದ ಬೆಳವಣಿಗೆಯಾಗಿದೆ.ಲೋಕಸಭಾ ಚುನಾವಣೆಗಳು ಎದುರಾಗಿದ್ದರಿಂದ ಮಂಡಳಿ ಮತ್ತು ನಮ್ಮ ಮೆಟ್ರೋ ಅಧಿಕಾರಿಗಳ ಸಭೆ ಮುಂದೂಡಲ್ಪಟ್ಟು ಕೊಂಚ ವಿಳಂಬವಾಗಿದೆ.
ಹೇಗಿರಲಿದೆ ಯೋಜನೆ
ಈ ಮೂರನೇ ಹಂತದಲ್ಲಿ ಎರಡು ಎತ್ತರದ ಮಾರ್ಗಗಳಿವೆ. 32.15 ಕಿ.ಮೀ.ಮಾರ್ಗವು ಹೊರ ವರ್ತುಲ ರಸ್ತೆಯ ಪಶ್ಚಿಮ ಭಾಗದ ಜೆ.ಪಿ. ನಗರದ ನಾಲ್ಕನೇ ಹಂತವನ್ನು ಸಂಪರ್ಕಿಸಿದರೆ 12.5 ಕಿ.ಮೀ. ಉದ್ದದ ಮತ್ತೊಂದು ಮಾರ್ಗ ಮಾಗಡಿ ರಸ್ತೆಯ ಹೊಸಹಳ್ಳಿ ಮತ್ತು ಕಡಬಗೆರೆಯನ್ನು ಸಂಪರ್ಕಿಸುತ್ತದೆ. ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 22 ನಿಲ್ದಾಣಗಳು ಹೊಸಹಳ್ಳಿಯಿಂದ ಕಡಬಗೆರೆವರೆಗೆ 9 ನಿಲ್ದಾಣಗಳು ಸೇರಿ ಈ ಮಾರ್ಗದಲ್ಲಿ ಒಟ್ಟು 31 ನಿಲ್ದಾಣಗಳಿರುತ್ತವೆ. ಈ ಮಾರ್ಗವು ಉಪನಗರ ರೈಲು ಯೋಜನೆ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.
ಕರ್ನಾಟಕದ ಒಪ್ಪಿಗೆ
ಮಾರ್ಚ್ 14ರಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ 15,611 ಕೋಟಿ ರೂ.ಗಳ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಈ ಯೋಜನೆಯ ಶೇ.80ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು ಉಳಿದ ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದಕ್ಕೂ ಮುನ್ನ 18, ನವಂಬರ್ 2022ರಂದು ರಾಜ್ಯ ಸರ್ಕಾರ ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಪ್ರಸ್ತಾವನೆಯನ್ನು ಫೆಬ್ರವರಿ 2023 ರಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತಾದರೂ ವೆಚ್ಚವನ್ನು ಕಡಿಮೆಗೊಳಿಸುವಂತೆ ಕೇಂದ್ರ ಸರ್ಕಾರ ಕಡತವನ್ನು ಹಿಂತಿರುಗಿಸಿತ್ತು. ನಂತರ ರಾಜ್ಯ ಸರ್ಕಾರ ವೆಚ್ಚವನ್ನು ಕಡಿಮೆಗೊಳಿಸಿ ಪ್ರಸ್ತಾವನೆಯನ್ನು ಸಿದ್ದಪಡಿಸಿತ್ತು. ತದನಂತರ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸಭೆಗಳನ್ನು ನಡೆಸಿ ಪರಸ್ಪರ ಸ್ಪಷ್ಟನೆಗಳನ್ನು ಪಡೆದುಕೊಂಡಿದ್ದವು.
ಕೇಂದ್ರದ ಆಸಕ್ತಿ
ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕಾದ ಅಂತಿಮ ಹಂತದಲ್ಲಿ ಲೋಕಸಭಾ ಚುನಾವಣೆ ಎದುರಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇಲ್ಲವಾದಲ್ಲಿ ಎರಡು ಮೂರು ತಿಂಗಳ ಹಿಂದೆಯೇ ಈ ಯೋಜನೆಗೆ ಸಮ್ಮತಿ ಸಿಗುವ ಸಾಧ್ಯತೆಗಳಿದ್ದವು.
2051ರ ವೇಳೆಗೆ ನಮ್ಮ ಮೆಟ್ರೋ 3ನೇ ಹಂತದ ಮಾರ್ಗಗಳಲ್ಲಿ ಪ್ರತಿದಿನ 9.12 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಊಹಿಸಲಾಗಿದೆ. ಸಾರ್ವಜನಿಕ ಹೂಡಿಕೆ ಮಂಡಳಿಯು ಕೇಂದ್ರ ಹಣಕಾಸು ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಯೋಜನೆಗಳ ಬಂಡವಾಳ ಹೂಡಿಕೆಗಳ ಸಾಧ್ಯಾಸಾಧ್ಯತೆಗಳನ್ನು ಈ ಮಂಡಳಿ ಪರಿಶೀಲಿಸಲಿದೆ. ವೆಚ್ಚಗಳ ಇಲಾಖೆಯ ಕಾರ್ಯದರ್ಶಿಗಳು ಈ ಮಂಡಳಿಯ ನೇತೃತ್ವ ವಹಿಸಿರುತ್ತಾರೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.
(ವರದಿ: ಎಚ್.ಮಾರುತಿ. ಬೆಂಗಳೂರು)
