ಕನ್ನಡ ಸುದ್ದಿ  /  ಕರ್ನಾಟಕ  /  Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಯ ಯೋಜನೆ ಸಿದ್ದವಾಗಿದೆ. ಮುಂದಿನ ದಿನಗಳಲ್ಲಿ ಮೆಟ್ರೋ ಮೂಲಕವೇ ನಗರವನ್ನು ಸುತ್ತು ಹಾಕುವ ಅವಕಾಶವೂ ಸಿಗಬಹುದು.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು ನಮ್ಮ ಮೆಟ್ರೋ ವಿಸ್ತರಣೆ ಯೋಜನೆ ರೂಪಿಸಲಾಗಿದೆ.
ಬೆಂಗಳೂರು ನಮ್ಮ ಮೆಟ್ರೋ ವಿಸ್ತರಣೆ ಯೋಜನೆ ರೂಪಿಸಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಾರಂಭವಾದಾಗಿನಿಂದ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿದಿನ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ರಷ್ಟಿದೆ. ಆದರೆ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ತೆರಳಬೇಕಾದರೆ ಇಂಟರ್ ಚೇಂಜ್ ಅಥವಾ ಮಾರ್ಗ ಬದಲಾವಣಾ ನಿಲ್ದಾಣಗಳ ಸಂಖ್ಯೆ ಕೊರತೆ ಇದೆ. ಸದ್ಯಕ್ಕೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಾತ್ರ ಇಂಟರ್‌ಚೇಂಜ್‌ ನಿಲ್ದಾಣವಾಗಿದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರೈಲು ಬದಲಾಯಿಸಲು ಮೆಜೆಸ್ಟಿಕ್‌ ಗೆ ಬರಬೇಕಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಮುಂದಿನ ಐದು ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ ಹದಿನಾರು ಇಂಟರ್‌ಚೇಂಜ್‌ ನಿಲ್ದಾಣಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ. ಈ ಮೂಲಕ ಉದ್ಯಾನ ನಗರ ಬೆಂಗಳೂರನ್ನು ಮೆಟ್ರೋ ರೈಲಿನಲ್ಲೇ ಸುತ್ತಾಡಬಹುದು.

ಪ್ರತಿನಿತ್ಯ ಅಂದಾಜು 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮೆಜೆಸ್ಟಿಕ್‌ ನ ನಾಡಪ್ರಭು ಕೆಂಪೇಗೌಡ ನಿಲ್ದಾಣವನ್ನು ಬಳಸುತ್ತಿದ್ದಾರೆ. ಇವರಲ್ಲಿ ಬಹುತೇಕ ಪ್ರಯಾಣಿಕರು ಮೆಟ್ರೋ ರೈಲು ಬದಲಾಯಿಸಲೆಂದೇ ಬರಬೇಕಾದ ಅನಿವಾರ್ಯತೆ ಇದೆ. ಮೊದಲೇ ಜನನಿಬಿಡ ಪ್ರದೇಶವಾಗಿರುವ ಮೆಜೆಸ್ಟಿಕ್ ನಲ್ಲಿ ಜನದಟ್ಟಣೆ ಹೆಚ್ಚಿದ್ದು ಇಂಟರ್‌ಚೇಂಜ್‌ ನಿಲ್ದಾಣಗಳು ನಿರ್ಮಾಣವಾದರೆ ಹೊರೆ ಕಡಿಮೆಯಾಗುತ್ತದೆ.

ಸದ್ಯಕ್ಕೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹಸಿರು ಮತ್ತು ನೀಲಿ ಮಾರ್ಗದ ಪ್ರಯಾಣಿಕರು ತಮ್ಮ ಮಾರ್ಗ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ನೇರಳೆ ಮಾರ್ಗದಲ್ಲಿ ಐದು, ಹಸಿರು ಮಾರ್ಗದಲ್ಲಿ ಮೂರು, ಸುರಂಗ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗದಲ್ಲಿ ತಲಾ ನಾಲ್ಕು ಹಾಗೂ ಕೇಸರಿ ಮಾರ್ಗದಲ್ಲಿ ಒಂದು ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ.

ಎಲ್ಲವೂ ಸಕಾಲದಲ್ಲಿ ನಡೆದಿದ್ದರೆ ಕಳೆದ ವರ್ಷವೇ ಜಯದೇವ ಆಸ್ಪತ್ರೆ ಬಳಿ ನಿರ್ಮಾಣ ಮಾಡಲಾಗುತ್ತಿರುವ ಇಂಟರ್‌ಚೇಂಜ್‌ ನಿಲ್ದಾಣ ಆರಂಭವಾಗಬೇಕಿತ್ತು. ಆದರೆ ಈ ವರ್ಷ ಪ್ರಯಾಣಿಕರಿಗೆ ಮುಕ್ತವಾಗುವುದರಲ್ಲಿ ಸಂದೇಹವಿಲ್ಲ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಜಯದೇವ ಇಂಟರ್‌ಚೇಂಜ್ ನಿಲ್ದಾಣ ಕಾಳೇನಅಗ್ರಹಾರ - ನಾಗವಾರ ನಡುವಿನ ಗುಲಾಬಿ ಮತ್ತು ಹಳದಿ ಕಾರಿಡಾರ್‌ ನ ಆರ್ ವಿ ರಸ್ತೆ ಬೊಮ್ಮಸಂದ್ರ ನಡುವಿನ ಇಂಟರ್‌ಚೇಂಜ್‌ ಆಗಿ ಕೆಲಸ ಮಾಡಲಿದೆ. ಇದು ಬಹು ದೊಡ್ಡ ಮೆಟ್ರೋನಿಲ್ದಾಣವಾಗಿದ್ದು 25 ಸಾವಿರ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಶೇ.95 ರಷ್ಟು ನಿರ್ಮಾಣ ಕಾರ್ಯ ಮುಗಿದಿದ್ದು ಈ ವರ್ಷ ಬಳಕೆಗೆ ಮುಕ್ತವಾಗಲಿದೆ.

ಕಸ್ತೂರಿ ನಗರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಎರಡನೇ ಹಂತದ ನೀಲಿ ಮಾರ್ಗಗಳಲ್ಲಿ ಇಂಟರ್‌ಚೇಂಜ್‌ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿವೆ.

ಕೆ ಆರ್ ಪುರ, ನಾಗವಾರ ಮತ್ತು ಹೆಬ್ಬಾಳದಲ್ಲಿ ಇಂಟರ್‌ಚೇಂಜ್‌ ನಿಲ್ದಾಣಗಳು ಬರಲಿವೆ. ಮೆಟ್ರೋ ಮೂರನೇ ಹಂತದ ಎರಡು ಕಾರಿಡಾರ್‌ಗಳಾದ ಜೆಪಿ ನಗರ-ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ ನಡುವಿನ ಕೇಸರಿ ಮಾರ್ಗ, 3 ನೇ ಹಂತದ ಹೆಬ್ಬಾಳ-ಸರ್ಜಾಪುರ ನಡುವಿನ ಕೆಂಪು ಮಾರ್ಗ ಪೂರ್ಣಗೊಂಡ ಬಳಿಕ ಹದಿನಾರು ಇಂಟರ್‌ಚೇಂಜ್‌ ನಿಲ್ದಾಣಗಳು ನಿರ್ಮಾಣ ಆಗಲಿವೆ.

ಇಂಟರ್‌ ಚೇಂಜ್‌ ನಿಲ್ದಾಣಗಳಿಂದ ಮೆಟ್ರೋ ಜಾಲವನ್ನು ಒಂದನ್ನೊಂದು ಸಂಧಿಸಲಿದೆ. ಇದರಿಂದ ಪ್ರಯಾಣಿಕರು ಬೆಂಗಳೂರನ್ನು ಮೆಟ್ರೋದಲ್ಲೇ ಸಂಚರಿಸಬಹುದಾಗಿದೆ. ಹಸಿರು, ಹಳದಿ ನೇರಳೆ ಸೇರಿ ಯಾವುದೇ ಕಾರಿಡಾರ್‌ನ ಮೆಟ್ರೋ ಹತ್ತಿದರೂ ಪ್ರಯಾಣಿಕರು ಇಂಟರ್‌ಚೇಂಜ್‌ನಲ್ಲಿ ಇಳಿದು ಮತ್ತೊಂದು ಮಾರ್ಗದ ರೈಲು ಹತ್ತಿ ತಾವು ತಲುಪಬೇಕಾದ ಸ್ಥಳ ತಲುಪಲು ಅನುಕೂಲವಾಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point