Bangalore News: ಬೆಂಗಳೂರಿನ ನಿರಂಜನ, ಜಿಂಕೆಗಳಿಗೆ ನೀರು ಆಹಾರ ನೀಡುವ ಒಡನಾಡಿ
ಸೇವೆಯನ್ನು ಯಾವ ರೂಪದಲ್ಲಾದರೂ ಮಾಡಬಹುದು. ಬೆಂಗಳೂರಿನ ನಿರಂಜನ್ ಅರಣ್ಯ ಇಲಾಖೆ ಅನುಮತಿಯೊಂದಿಗೆ ಜಿಂಕೆಗಳಿಗೆ ಆಹಾರ ನೀಡುತ್ತಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಓಂಕಾರ್ ಹಿಲ್ ಗೆ ಹೊಂದಿಕೊಂಡಂತೆ ಮತ್ತು ಕೃಷ್ಣ ಗಾರ್ಡನ್ ಕಡೆಗೆ ಸಾಗುವ ರಸ್ತೆಯಲ್ಲಿ ತುರಹಳ್ಳಿ ಮೀಸಲು ಅರಣ್ಯವಿದೆ. ಸುಮಾರು 500 ಎಕರೆ ವಿಸ್ತಾರದಲ್ಲಿರುವ ಈ ಅರಣ್ಯ ಬನ್ನೇರುಘಟ್ಟದವರೆಗೆ ಹಬ್ಬಿದೆ. ಆರ್ ಆರ್ ನಗರಕ್ಕೆ ಹೊಂದಿಕೊಂಡಿರುವ ಈ ಅರಣ್ಯದಲ್ಲಿ ಜಿಂಕೆ, ಮೊಲ, ಹಂದಿ ನವಿಲು ಹಾವುಗಳು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳಿವೆ. ಈ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳಿಗೆ ಈ ಪ್ರಾಣಿ ಪಕ್ಷಿಗಳ ಪರಿಚಯ ಇದ್ದೇ ಇರುತ್ತದೆ. ಇಲ್ಲಿ ನಿತ್ಯ ತರಕಾರಿ ಕತ್ತರಿಸುವ ವ್ಯಕ್ತಿ ಸಿಗುತ್ತಾರೆ. ಇವರು ಪ್ರತಿದಿನ 40-50 ಜಿಂಕೆಗಳಿಗೆ ಆಹಾರ ಮತ್ತು ನೀರು ಒದಗಿಸುತ್ತಾರೆ; ತರಕಾರಿ ಅಂಗಡಿ ಗಳಿಂದ ತರಕಾರಿ ಸಂಗ್ರಹಿಸಿ ಕತ್ತರಿಸಿ ಹಾಕುತ್ತಾರೆ. ಇವರ ಬರುವಿಕೆಯನ್ನು ಜಿಂಕೆಗಳು ಕಾಯುತ್ತವೆ. ಇವರ ಹೆಸರು ನಿರಂಜನ್.
ಈ ವರ್ಷ ಮಳೆಯಿಲ್ಲದೆ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಈ ಅರಣ್ಯ ಪ್ರದೇಶದ ಪ್ರಾಣಿ ಪಕ್ಷಿಗಳು ರಸ್ತೆಗೆ ಇಳಿಯುತ್ತವೆ. ಅಲ್ಲಲ್ಲಿ ಬಿಸಾಡಿರುವ ತ್ಯಾಜ್ಯದ ಕವರ್ ಗಳನ್ನು ಹರಿದು ಅದರಲ್ಲಿರುವ ಹಸಿ ತ್ಯಾಜ್ಯವನ್ನು ತಿನ್ನುತ್ತವೆ. ಒಮ್ಮೆ ಇಲ್ಲಿನ ನಿವಾಸಿ ನಿರಂಜನ್ ಅವರು ಒಂದು ತಿಂಗಳ ಹಿಂದೆ 20-25 ಜಿಂಕೆಗಳು ಈ ರೀತಿ ಆಹಾರವನ್ನು ಹುಡುಕಿಕೊಳ್ಳುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡು ಮಮ್ಮಲ ಮರುಗುತ್ತಾರೆ. ಅಂದೇ ಅವರು ಇಲ್ಲಿನ ಜಿಂಕೆಗಳಿಗೆ ಆಹಾರ ಒದಗಿಸುವ ನಿರ್ಧಾರಕ್ಕೆ ಬರುತ್ತಾರೆ.\
ಆರಂಭದಲ್ಲಿ ಕಡಿಮೆ ಬೆಲೆಗೆ ಸಿಗುವ ತರಕಾರಿಯನ್ನು ಅಂಗಡಿಗಳಿಂದ ಹಣ ಕೊಟ್ಟು ಖರೀದಿಸಿ ತರುತ್ತಾರೆ. ಹಲವಾರು ಅಂಗಡಿಗಳಿಂದ ಈ ರೀತಿ ತಂದ ತರಕಾರಿಯನ್ನು ಸಂಗ್ರಹಿಸುತ್ತಾರೆ. ರಸ್ತೆ ಬದಿಯಲ್ಲಿ ಕುಳಿತು ತರಕಾರಿಯನ್ನು ಕತ್ತರಿಸಿ ಅರಣ್ಯದೊಳಗೆ ಒಂದು ಕಡೆ ಹರಡುತ್ತಾರೆ. ಇವರ ಕಳಕಳಿಯನ್ನು ಮೆಚ್ಚಿಕೊಂಡ ಅನೇಕ ಹೋಟೆಲ್ ನವರು ಇವರಿಗೆ ಕೈ ಜೋಡಿಸಿದ್ದಾರೆ. ಅವರು ಉಳಿದ ತರಕಾರಿಯನ್ನು ಒದಗಿಸುತ್ತಿದ್ದಾರೆ. ಪ್ರತಿದಿನ ಅಂದಾಜು 40-50 ಕೆಜಿಯಷ್ಟು ತರಕಾರಿಯನ್ನು ಸಂಗ್ರಹಿಸಿ ಜಿಂಕೆಗಳಿಗೆ ಒದಗಿಸುತ್ತಾರೆ. ತರಕಾರಿ ಜಿಂಕೆಗಳ ನಿಯಮಿತ ಆಹಾರ ಅಲ್ಲ. ಆದ್ದರಿಂದ ಅವರು ಹುಲ್ಲನ್ನು ಕಾಸುಕೊಟ್ಟು ಖರೀದಿಸಿ ತರುತ್ತಾರೆ. ಒಂದು ತಿಂಗಳಿಂದ ಈ ಕೈಂಕರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ.
ನೀರಿಗೂ ಇವರು ವ್ಯವಸ್ಥೆ ಮಾಡಿದ್ದಾರೆ. ಎರಡು ಡ್ರಂಗಳಲ್ಲಿ ನೀರನ್ನು ಸಂಗ್ರಹಿಸಿ ಅರಣ್ಯದೊಳಗಿರುವ ಸಣ್ಣ ಬೋಗುಣಿಗಳಲ್ಲಿ ನೀರನ್ನು ತುಂಬಿಸುತ್ತಾರೆ.
ಆರಂಭದಲ್ಲಿ 25-30 ಜಿಂಕೆಗಳು ಆಹಾರ ತಿನ್ನಲು ಬರುತ್ತಿದ್ದವು. ಇದೀಗ ಅವುಗಳ ಸಂಖ್ಯೆ 40ಕ್ಕೆ ಏರಿದೆ. ಈ ಜಿಂಕೆಗಳು ನಿರಂಜನ್ ಅವರಿಗೆ ಎಷ್ಟು ಹೊಂದಿಕೊಂಡಿವೆಯೆಂದರೆ ಇವರಿದ್ದರೆ ಯಾವುದೇ ಅಂಜಿಕೆ ಇಲ್ಲದೆ ಅವು ಆಹಾರ ತಿಂದು ನೀರು ಕುಡಿಯುತ್ತವೆ. ಬೇರೆ ಯಾರೇ ಹತ್ತಿರ ಹೋದರೂ ಅರಣ್ಯದೊಳಗೆ ಮಾಯವಾಗಿ ಬಿಡುತ್ತವೆ. 40 ಜಿಂಕೆಗಳಿಗೆ ಇದು ಕಡಿಮೆ ಆಹಾರವೇ. ಆದರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಒಂದುಜಿಂಕೆಗೆ ಕನಿಷ್ಠ 3-4ಕೆಜಿಯಷ್ಟಾದರೂ ಆಹಾರದ ಅವಶ್ಯಕತೆ ಇರುತ್ತದೆ. ಎಲ್ಲವನ್ನೂ ಒಬ್ಬರೇ ಮಾಡುವುದು ಕಷ್ಟಸಾಧ್ಯ. ದಾನಿಗಳು ಕೈ ಜೋಡಿಸಿದರೆ ಜಿಂಕೆಗಳಿಗೆ ಹೊಟ್ಟ ತುಂಬಾ ಊಟ ಹಾಕಬಹದು ಎಂದು ಆಸೆಯಿಂದ ಹೇಳುತ್ತಾರೆ.
ಪ್ರತಿದಿನ ಜಿಂಕೆಗಳು ಇವರ ಬರುವಿಕೆಯನ್ನು ಕಾಯುತ್ತಿರುತ್ತವೆ. ಅರಣ್ಯದಲ್ಲಿ ಪ್ರಾಣಿಗಳಿಗೆ ರಕ್ಷಣೆ ಇಲ್ಲವಾಗಿದೆ. ಜಿಂಕೆಗಳಿಗೆ ನಾಯಿಗಳ ಕಾಟ.ಹೆಚ್ಚಾಗಿದೆ. ಒಮ್ಮೊಮ್ಮೆ ಕಚ್ಚುತ್ತವೆ. ಇದರಿಂದಲೂ ಜಿಂಕೆಗಳು ಹೆದರಿಕೊಳ್ಳುತ್ತಿವೆ ಎಂದು ನಿರಂಜನ್ ಹೇಳುತ್ತಾರೆ.
ಈ ಅರಣ್ಯದ ರಕ್ಷಣೆಗೆ ನಿರ್ಮಿಸಿರುವ ತಡೆಗೋಡೆ ತುಂಬಾ.ಚಿಕ್ಕದಾಗಿದ್ದು, ಎತ್ತರಿಸಬೇಕು. ಅದಕ್ಕೂ ಮುನ್ನ ಅಲ್ಲಲ್ಲಿ ಮುರಿದು ಬಿದ್ದಿರುವ ತಡೆಗೋಡೆಯನ್ನು ಸರಿಪಡಿಸಬೇಕು ಎಂದು ಆಗ್ರಹಪಡಿಸುತ್ತಾರೆ.
ಇದು ಮೀಸಲು ಅರಣ್ಯವಾಗಿರುವುದರಿಂದ ಏಕಾಏಕಿ ಈ ಕೆಲಸವನ್ನು ಮಾಡುವಂತಿಲ್ಲ. ಹಾಗಾಗಿ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿದ್ದಾರೆ. 40-50 ಜಿಂಕೆಗಳಿಗೆ ಇಷ್ಟು ಆಹಾರ ಸಾಕಾಗುವುದಿಲ್ಲ. ತರಕಾರಿ ಮತ್ತು ಹುಲ್ಲು ಖರೀದಿಗೆ ಸಹಾಯ ಮಾಡುವವರು ನಿರಂಜನ್ ಅವರನ್ನು ಸಂಪರ್ಕಿಸಬಹುದಾಗಿದೆ. ವೃತ್ತಿಯಿಂದ ಉದ್ಯಮಿಯಾಗಿರುವ ನಿರಂಜನ್ ಅವರ ಈ ಕೆಲಸಕ್ಕೆ ನಾವೆಲ್ಲರೂ ಆಲ್ ದಿ ಬೆಸ್ಟ್ ಹೇಳೋಣ.
ಅವರ ಸಂಪರ್ಕ ಸಂಖ್ಯೆ; 9741199323
(ವರದಿ: ಎಚ್.ಮಾರುತಿ, ಬೆಂಗಳೂರು)
