Bangalore News: ಬೆಂಗಳೂರು ಅರಮನೆ ಮೈದಾನದ 15 ಎಕರೆ ಭೂಮಿ ಸರ್ಕಾರದ ವಶಕ್ಕೆ ಸಮೀಕ್ಷೆ, ರಾಜವಂಶಸ್ಥರಿಗೆ ಸಿಗಲಿದೆ ಭಾರೀ ಆದಾಯ
ಬೆಂಗಳೂರಿನಲ್ಲಿ ಸಂಚಾರದಟ್ಟಣೆ ತಪ್ಪಿಸಲು ನಿಟ್ಟಿನಲ್ಲಿ ರಸ್ತೆ ಅಗಲೀಕರಣ, ಅಂಡರ್ ಪಾಸ್ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಅರಮನೆ ರಸ್ತೆಗಾಗಿ( Bangalore Palace) ಭೂಮಿ ಸ್ವಾಧೀನಕ್ಕೆ ಸಮೀಕ್ಷೆ ಶುರುವಾಗಿದೆ.ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನ ಹೃದಯ ಭಾಗವಾಗಿರುವ ಅರಮನೆ ಸುತ್ತಮುತ್ತಲಿನ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಈ ಭಾಗದ ರಸ್ತೆ ಅಗಲೀಕರಣ ಹಾಗೂ ಅಂಡರ್ ಪಾಸ್ ನಿರ್ಮಾಣವೂ ಅದರಲ್ಲಿ ಸೇರಿವೆ. ಇದಕ್ಕಾಗಿ ಐದಾರು ವರ್ಷಗಳಿಂದ ಪ್ರಯತ್ನ ನಡೆದಿದ್ದರೂ ಯಾವುದೇ ಬೆಳವಣಿಗೆ ಆಗಿಲಿಲ್ಲ. ಹಲವು ವರ್ಷಗಳ ಯೋಜನೆಯಾದ ರಸ್ತೆ ವಿಸ್ತರಣೆ, ಅಂಡರ್‌ಪಾಸ್ ಯೋಜನೆಗೆ ಈಗ ಕಾಲ ಕೂಡಿ ಬಂದಿದೆ. ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳನ್ನು ವಿಸ್ತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಅಧಿಕಾರಿಗಳು ಅರಮನೆ ಮೈದಾನದಲ್ಲಿನ 15 ಎಕರೆ 39 ಗುಂಟೆ ಭೂಮಿಯ ಸಮೀಕ್ಷೆ ನಡೆಸಿದರು.ಸರಿಯಾದ ವಿಸ್ತೀರ್ಣ ವರದಿ (ಸಿಡಿಆರ್)ಯನ್ನು ಸಿದ್ಧಪಡಿಸಲು ಈ ಸರ್ವೆ ನಡೆಸಲಾಗಿದೆ. ಇದರಿಂದ ಅರಮನೆ ಮೈದಾನದ ಎಷ್ಟು ಭೂಮಿಗೆ ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಯೋಜನೆ
ಬಿಬಿಎಂಪಿ ಅಧಿಕಾರಿಗಳು ಕಂದಾಯ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಿದರು. ಇದಕ್ಕಾಗಿ ಅಗತ್ಯ ಉಪಕರಣಗಳನ್ನು ಬಳಸಿ ನಿಖರವಾದ ಸರ್ವೇ ನಡೆಸಲಾಗಿದೆ.
ಅರಮನೆ ಅಡ್ಡರಸ್ತೆ ಹಾಗೂ ಮೇಖ್ರಿ ವೃತ್ತದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಈ ಹಿಂದೆ ಅರಮನೆ ಮೈದಾನದ ಪ್ರದೇಶವನ್ನು ಎರಡು ಬಾರಿ ಬಳಸಿಕೊಳ್ಳಲಾಗಿದೆ. ಈಗ ಮತ್ತೊಮ್ಮೆ ಅರಮನೆ ಮೈದಾನದ ಕಾಂಪೌಂಡ್ ನಿಂದ ರಸ್ತೆವರೆಗಿರುವ ಖಾಲಿ ಭೂಮಿಯನ್ನು ಅಳತೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಗೊಂಡ ನಿವೇಶನಗಳನ್ನು ಹಸ್ತಾಂತರಿಸುವ ಮುನ್ನ ಸಿಡಿಆರ್ ಮೂಲಕ ವರದಿಗಳನ್ನು ತಯಾರಿಸುತ್ತದೆ. ಅದೇ ಮಾದರಿಯಲ್ಲಿ ಅರಮನೆ ಮೈದಾನದ ಭೂಮಿಯ ಸರ್ವೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ವಿಸ್ತರಣೆಗಾಗಿ ಬೆಂಗಳೂರು ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಸಿಕೊಳ್ಳಲು ಮತ್ತು ಅದಕ್ಕೆ ಟಿಡಿಆರ್ ನೀಡಲು ಮಾರ್ಚ್‌ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಈ ಕುರಿತು ಏಪ್ರಿಲ್ 15ರ ಸೋಮವಾರದಂದು ಆದೇಶ ಹೊರಡಿಸಿತ್ತು.
ರಾಜವಂಶಸ್ಥರಿಗೆ 1,400 ಕೋಟಿ ರೂ. ಟಿಡಿಆರ್
ಒಂದು ವೇಳೆ ರಸ್ತೆ ವಿಸ್ತರಣೆ ಮಾಡುವುದಾದರೆ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಕೊಟ್ಟು ಬೆಂಗಳೂರು ಅರಮನೆ ಜಾಗವನ್ನು ಬಳಸಿಕೊಂಡು ರಸ್ತೆ ನಿರ್ಮಿಸಲು ಈ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ನಂತರ ರಚನೆಯಾದ ಒಂದೊಂದು ಸರ್ಕಾರ ಒಂದೊಂದು ನಿಲುವು ತಾಳುತ್ತಾ ಬಂದಿದ್ದವು.ಅಂತಿಮವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೈಸೂರು ರಾಜ ವಂಶಸ್ಥರಿಗೆ ಸುಮಾರು 1,400 ಕೋಟಿ ರೂಪಾಯಿ ಮೌಲ್ಯದಷ್ಟು ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ನೀಡಲು ಸರ್ಕಾರ ಒಪ್ಪಿಕೊಂಡಿದೆ.
ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಎರಡೂ ಬದಿಯ ರಸ್ತೆಗಳನ್ನು ವಿಸ್ತರಗೊಳಿಸಲು ಈ ಭೂಮಿ ಬಳಕೆಯಾಗಲಿದೆ. ಜಯಮಹಲ್ ಮತ್ತು ಬಳ್ಳಾರಿ ರಸ್ತೆಗಳ ವಿಸ್ತರಣೆಯಾಗಲಿದೆ.
ಇದಕ್ಕೆ ಪೂರಕವಾಗಿ ಒಂದು ಬದಿಯಲ್ಲಿ ಮೇಖ್ರಿ ಸರ್ಕಲ್‌ನಿಂದ ಬಿಡಿಎ ಜಂಕ್ಷನ್‌ವರೆಗೆ ಮತ್ತು ಮತ್ತೊಂದು ಬದಿಯಲ್ಲಿ ಮೇಖ್ರಿ ಸರ್ಕಲ್‌ನಿಂದ ದಂಡು ರೈಲ್ವೆ ನಿಲ್ದಾಣದವರೆಗೆ ಅರಮನೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ.
2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಸ್ತೆ ವಿಸ್ತರಣೆಗಾಗಿ ಅರಮನೆ ಭೂಮಿಯನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಿತ್ತು. ನಂತರ ರಚನೆಯಾದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎರಡೂ ಬದಿಯ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಟ್ಟಿರುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ದೊಡ್ಡ ಮೊತ್ತದ ಟಿಡಿಆರ್ ನೀಡಬೇಕಾಗುತ್ತದೆ ಎಂಬ ಕಾರಣವನ್ನು ನೀಡಿ ರಸ್ತೆ ಅಗಲೀಕರಣವನ್ನು ಕೈ ಬಿಟ್ಟಿತ್ತು. ಈಗ ಇದೇ ಪ್ರಕ್ರಿಯೆ ಈಗ ಶುರುವಾಗಿದೆ.
(ವರದಿ, ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
( To read more like this please logon to kannada.hindustantimes.com)
ವಿಭಾಗ