ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ಪರಿಚಿತ ಯುವತಿ ಅಪಹರಣ, 2 ಗಂಟೆಯೊಳಗೆ ಆರೋಪಿಗಳ ಬಂಧನ

Bangalore crime: ಬೆಂಗಳೂರಲ್ಲಿ ಪರಿಚಿತ ಯುವತಿ ಅಪಹರಣ, 2 ಗಂಟೆಯೊಳಗೆ ಆರೋಪಿಗಳ ಬಂಧನ

ಯುವತಿಯನ್ನು ಅಪಹರಿಸಿದ್ದ ಪ್ರಕರಣವನ್ನು ಎರಡು ಗಂಟೆಯಲ್ಲೇ ಬೇಧಿಸಿರುವ ಬೆಂಗಳೂರು ಪೊಲೀಸರು( Bangalore Police) ಐವರನ್ನು ಬಂಧಿಸಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಯುವತಿ ಅಪಹರಣ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಬೆಂಗಳೂರಿನಲ್ಲಿ ಯುವತಿ ಅಪಹರಣ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರು: ಯುವತಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದಡಿಯಲ್ಲಿ ಪರಿಚಯ ಇರುವ ಯುವಕ, ಆತನ ಸಹೋದರ ಸೇರಿದಂತೆ ಐವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿ.ಜಿ ಕಟ್ಟಡವೊಂದರಲ್ಲಿ ವಾಸವಿದ್ದ ಯುವತಿಯನ್ನು ಅಲ್ಲಿಂದಲೇ ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಅಪಹರಿಸಲಾಗಿತ್ತು. ಪಿ.ಜಿ ಕಟ್ಟಡದ ಮಾಲೀಕ ನೀಡಿದ್ದ ಮಾಹಿತಿಗಳನ್ನು ಆಧರಿಸಿ ಕೇವಲ ಎರಡು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹ್ರೈಗ್ರೌಂಡ್ಸ್ ಠಾಣೆ ಪೊಲೀಸರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂತ್ರಸ್ತ ಯುವತಿ ಹಾಗೂ ಆರೋಪಿ ಯುವಕ ಇಬ್ಬರೂ ಕೆಲವು ವರ್ಷಗಳಿಂದ ಪರಿಚಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯುವತಿಗೆ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡು ಕೆಲಸಕ್ಕೆ ಹೋಗಿ ಬರುತ್ತಿದ್ದರು.

ಯುವತಿ ಮತ್ತು ಆರೋಪಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಜೊತೆಯಲ್ಲಿ ಸುತ್ತಾಡಿದ್ದರು. ಆದರೆ ಸರ್ಕಾರಿ ಉದ್ಯೋಗ ಸಿಕ್ಕ ನಂತರ ಯುವತಿಯು ಆರೋಪಿಯಿಂದ ದೂರ ಉಳಿದುಕೊಂಡಿದ್ದರು. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲು ಸಂಚು ಹೂಡಿದ್ದ. ಇದಕ್ಕಾಗಿ ತನ್ನ ಸಹೋದರ ಮತ್ತು ಮೂವರು ಸ್ನೇಹಿತರಿಗೆ ವಿಷಯ ತಿಳಿಸಿ ನೆರವು ನೀಡುವಂತೆ ಪುಸಲಾಯಿಸಿದ್ದ. ನಂತರ ಅವರೆಲ್ಲರೂ ಒಪ್ಪಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ಶಂಕೆ

ಪಿ.ಜಿ ಕಟ್ಟಡದ ಬಳಿ ಹೋಗಿದ್ದ ಆರೋಪಿಗಳು ಯುವತಿ ಹೊರ ಬರುತ್ತಿದ್ದಂತೆ ಅಪಹರಿಸಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದರು. ಅಪರಿಚಿತ ಸ್ಥಳದ ಕೊಠಡಿಯೊಂದರಲ್ಲಿ ಯುವತಿ ಮೇಲೆ ಪರಿಚಿತ ಆರೋಪಿ ಯುವಕ ಅತ್ಯಾಚಾರ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ.

ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದಂತೆ ಯುವತಿಯು ಕೋರಿಕೊಂಡಿದ್ದು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಒದಗಿಸಿಲ್ಲ.

ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ನೇಹಿತ, ಆತನ ಸಹೋದರ ಹಾಗೂ ಮೂವರು ಸ್ನೇಹಿತರನ್ನು ಬಂಧಿಸಲಾಗಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮನೆ ಬಾಗಿಲು ಹಾಕುವುದನ್ನು ಮರೆತ ಡಾಕ್ಟರ್, ಲೂಟಿ ಮಾಡಿದ ಕಳ್ಳರು

ತರಕಾರಿ ತರಲು ಮನೆ ಬಾಗಿಲು ಹಾಕುವುದನ್ನು ಮರೆತು ತರಕಾರಿ ತರಲು ಹೋಗಿ ಬರುವಷ್ಟರಲ್ಲಿ ಚಿನ್ನಾಭರಣ ಮತ್ತು ನಗದು ದೋಚಿರುವ ಪ್ರಕರಣ ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದಿದೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತಿಯಿಂದ ವೈದ್ಯರಾಗಿರುವ ಡಾ. ಉಮಾಶಂಕರ್ ಅವರು ಮನೆಯಲ್ಲಿ ಒಬ್ಬರೇ ಇದ್ದರು. ತರಕಾರಿ ತರಲು ಅವರು ಹೊರಗೆ ಹೋಗಿದ್ದರು. ಆದರೆ ಮನೆಗೆ ಬೀಗ ಹಾಕುವುದನ್ನು ಮಾಡುವುದನ್ನು ಮರೆತಿದ್ದರು. ಈ ಸಮಯವನ್ನು ಕಾಯುತ್ತಿದ್ದ ನಾಲ್ವರು ಕಳ್ಳರು, ಮನೆಯೊಳಗೆ ನುಗ್ಗಿದ್ದಾರೆ. ಮೂವರು ಮನೆಯೊಳಗೆ ದೋಚುತ್ತಿದ್ದರೆ ಬಾಗಿಲ ಬಳಿ ಒಬ್ಬ ಕಾಯುತ್ತಿರುತ್ತಾನೆ. ಚಿನ್ನಾಭರಣ ಹಾಗೂ ನಗದು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡಿದ್ದಾರೆ.

ಕೂಡಿ ಹಾಕಿ ಪರಾರಿ

ತರಕಾರಿ ತೆಗೆದುಕೊಂಡು ಉಮಾಶಂಕರ್ ಮನೆಗೆ ಹಿಂತಿರುಗಿದ್ದಾರೆ. ಆಗ ಬಾಗಿಲ ಬಳಿ ನಿಂತಿದ್ದ ಒಬ್ಬನನ್ನು ನೋಡಿ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಆ ಕಳ್ಳ ಒಳಗಿದ್ದ ಇತರರನ್ನು ಎಚ್ಚರಿಸಿದ್ದಾನೆ.

ಮನೆಯೊಳಗೆ ಹೋದ ಉಮಾಶಂಕರ್ ಒಳಗಿನಿಂದ ಬಾಗಿಲು ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಉಮಾಶಂಕರ್ ಅವರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ.

ವೈದ್ಯರು ಬಾಗಿಲು ಮುರಿದು ಕಷ್ಟಪಟ್ಟು ಕೊಠಡಿಯಿಂದ ಆಚೆ ಬಂದಿದ್ದಾರೆ. ಆಗ ದರೋಡೆ ನಡೆದಿರುವುದು ತಿಳಿದು ಬಂದಿದೆ. ಕೂಡಲೇ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಉತ್ತರ ಪ್ರದೇಶ ಮೂಲದ ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು ಈ ದರೋಡೆ ಮಾಡಿರುವ ಅನುಮಾನವಿದ್ದು ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ 500 ಗ್ರಾಂ ತೂಕದ ಚಿನ್ನಾಭರಣ, 20 ಲಕ್ಷ ರೂಪಾಯಿ ನಗದು ಮತ್ತು ಬೆಲೆಬಾಳುವ 6 ಕೈ ಗಡಿಯಾರಗಳನ್ನು ದೋಚಿದ್ದಾರೆ ಎಂದು ಉಮಾಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point