Bangalore Crime: ಡೇಟಿಂಗ್ ಆಪ್ ಮೂಲಕ ಯುವತಿಗೆ ಕಿರುಕುಳ ನೀಡಿದ್ದ ಬೆಂಗಳೂರು ಪಿಜಿ ಮಾಲೀಕನ ಬಂಧನ
Bangalore News ಪಿಜಿಯಲ್ಲಿ ವಾಸವಿದ್ದ ಯುವತಿಯೊಬ್ಬರು ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು ಎನ್ನುವ ಸಿಟ್ಟಿಗೆ ಯುವತಿ ಮಾಹಿತಿಯನ್ನು ಆಪ್‌ಗೆ ಆಪ್‌ಲೋಡ್ ಮಾಡಿದ್ದ ಪಿಜಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ಅವ್ಯವಸ್ಥೆ ಕುರಿತು ಅಸಮಾಧಾನ ಹಂಚಿಕೊಂಡಿದ್ದ ಯುವತಿಯ ವೈಯಕ್ತಿಕ ಮಾಹಿತಿಯನ್ನು ಡೇಟಿಂಗ್ ಆಪ್ ನಲ್ಲಿ ಹಂಚಿಕೊಂಡು ಮಾನಸಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಪಿಜಿ ಮಾಲೀಕನನ್ನು ಬೆಂಗಳೂರಿನ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಶೇಷಾದ್ರಿಪುರ ನಿವಾಸಿ ಆನಂದ್ ಶರ್ಮಾ ಬಂಧಿತ ಆರೋಪಿ. ರಾಜಸ್ಥಾನ ಮೂಲದ ಈತ ಬೆಂಗಳೂರಿನಲ್ಲಿ ಪಿಜಿ ನಡೆಸುತ್ತಿದ್ದ. ಆರೋಪಿಯನ್ನು ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. 24 ವರ್ಷದ ಯುವತಿಯೊಬ್ಬರು ಜುಲೈ 6ರಂದು ನೀಡಿದ ದೂರನ್ನು ಆಧರಿಸಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶರ್ಮಾ ಶೇಷಾದ್ರಿಪರದಲ್ಲಿ ವಿ ಸ್ಟೇಜ್ ಹೆಸರಿನಲ್ಲಿ ಪಿಜಿ ನಡೆಸುತ್ತಿದ್ದ. ಇದೇ ಪಿಜಿಯಲ್ಲಿ ದೂರು ನೀಡಿದ್ದ ಯುವತಿ ಕೆಲವು ತಿಂಗಳ ಕಾಲ ವಾಸವಾಗಿದ್ದರು. ಯಾವುದೇ ವ್ಯವಸ್ಥೆಗಳಿಲ್ಲದ ಕಾರಣಕ್ಕೆ ಪಿಜಿಯನ್ನು ತೊರೆದು ಬೇರೆ ಪಿಜಿಗೆ ಸೇರಿಕೊಂಡಿದ್ದರು. ವಿ ಸ್ಟೇಜ್ ಪಿಜಿ ಕುರಿತು ಯುವತಿಯು ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿ ಅವ್ಯವಸ್ಥೆಗಳ ಆಗರ ಎಂದು ಟೀಕಿಸಿದ್ದರು. ಇದನ್ನು ಗಮನಿಸಿದ ಶರ್ಮಾ ಯುವತಿಗೆ ಬುದ್ದಿ ಕಲಿಸಬೇಕೆಂದು ಮಾನಸಿಕ ಕಿರುಕುಳ ನೀಡುತ್ತಿದ್ದ. ಯುವತಿಯು ಪಿಜಿಗೆ ಸೇರಿಕೊಳ್ಳುವಾಗ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಪಿಜಿಗೆ ಸಲ್ಲಿಸಿದ್ದರು.
ಅದೇ ಮಾಹಿತಿಗಳನ್ನು ಇಟ್ಟುಕೊಂಡು ಆನಂದ್ ಶರ್ಮಾ ಲೋಕ್ಯಾಂಟೊ ಎಂಬ ಆಪ್ ನಲ್ಲಿ ಅಪ್ ಲೋಡ್ ಮಾಡಿ ಕಾಲ್ ಗರ್ಲ್ ಎಂದು ಬಿಂಬಿಸಿ ಯುವತಿಯ ಭಾವಚಿತ್ರವನ್ನೂ ಹಾಕಿದ್ದ. ಯುವತಿಯ ಖಾಸಗಿ ಮೊಬೈಲ್ ನಂಬರ್ ಅನ್ನು ತನ್ನ ಸ್ನೇಹಿತರೊಂದಿಗೂ ಹಂಚಿಕೊಂಡಿದ್ದ. ಆಪ್ ನಲ್ಲಿಯೂ ಯುವತಿಯ ಮೊಬೈಲ್ ನಂಬರನ್ನು ಪೋಸ್ಟ್ ಮಾಡಿದ್ದ. ಇದರಿಂದ ಯುವತಿಗೆ ಅನೇಕ ಕರೆಗಳು ಬರುತ್ತಿದ್ದವು. ಈ ಕೃತ್ಯದಿಂದ ಬೇಸತ್ತ ಯುವತಿ ಸೆನ್ ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ಸಂದರ್ಭದಲ್ಲಿ ತಪ್ಪು ಮಾಡಿರುವುದಾಗಿ ಶರ್ಮಾ ಒಪ್ಪಿಕೊಂಡಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಯನ್ನು ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.
ಮಹಿಳೆಗೆ ಮರ್ಮಾಂಗ ತೋರಿಸಿದ್ದ ವ್ಯಕ್ತಿಯ ಬಂಧನ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. 45 ವರ್ಷದ ಅಯೂಬ್ ರೆಹಮಾನ್ ಬಂಧಿತ ಆರೋಪಿ. ಈತ ಬೈಕ್ ನಲ್ಲಿ ವಿವಿಪುರಂಗೆರ ಬಂದಿದ್ದ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ತನ್ನ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದ. ಆರೋಪಿಯ ವರ್ತನೆಯನ್ನು ಅಲ್ಲಿ ನೆರೆದಿದ್ದ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದನ್ನು ಗಮನಿಸಿದ ವಿವಿಪುರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಕಲಾಸಿಪಾಳ್ಯದಲ್ಲಿ ಟೀ ಅಂಗಡಿಯನ್ನು ನಡೆಸುತ್ತಿದ್ದಾನೆ ಎಂದು ಗೊತ್ತಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಚ್.ಮಾರುತಿ, ಬೆಂಗಳೂರು.
