Bangalore News: ಬೆಂಗಳೂರಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ವಶ, ವಿದೇಶಿ ಡ್ರಗ್ ಪೆಡ್ಲರ್ ಬಂಧನ
ಡ್ರಗ್ ಮಾರಾಟದ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇದೆ. ಈ ಬಾರಿ ಬೆಂಗಳೂರು ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.(ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವಿದೇಶಿ ಮೂಲದ ವ್ಯಕ್ತಿಯನ್ನು ಬಂಧಿಸಿ 4 ಕೆ.ಜಿ ಎಂ.ಡಿ.ಎಂ.ಎ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 4 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈತ ವಿದೇಶದಲ್ಲಿ ನೆಲೆಸಿರುವ ಪರಿಚಯಸ್ಥ ಡ್ರಗ್ ಪೆಡ್ಲರ್‌ಗಳಿಂದ ಎಂ.ಡಿ.ಎಂ.ಎ ಕ್ರಿಸ್ಟೆಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ, ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸಿಕೊಂಡು, 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ಗೆ 3 ರಿಂದ 10 ಸಾವಿರ ರೂ.ಗಳಂತೆ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಐ.ಟಿ, ಬಿ.ಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಸ್ಸಾಂ ಮೂಲದ ಡ್ರಗ್ ಪೆಡ್ಲರ್ ಬಂಧನ
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಓರ್ವ ವ್ಯಕ್ತಿಯ ಮನೆಯ ಮೇಲೆ ದಾಳಿ ಮಾಡಿ 5.5 ಕೆಜಿ ತೂಕದ ಗಾಂಜಾವನ್ನು ವಶಪಡಿಕೊಳ್ಳಲಾಗಿದೆ. ಇದರ ಮೌಲ್ಯ 10 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಈತ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಪೊಲೀಸ್ ಬಾತ್ಮಿದಾರರು ಮಾಹಿತಿ ನೀಡಿದ್ದರು. ಆರೋಪಿಯಿಂದ 1 ಮೊಬೈಲ್ ಫೋನ್ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ವ್ಯಕ್ತಿಯು ಸುಮಾರು 12 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು ನಂತರ ಸ್ವಿಗ್ಗಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳ ನಂತರ ಈ ವೃತ್ತಿಯನ್ನು ಬಿಟ್ಟು
ಡ್ರಗ್ ಪೆಡ್ಲಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ.ಒರಿಸ್ಸಾದ ಬಾಲಸೂರ್‌ನಿಂದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ, ಬೆಂಗಳೂರಿನಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ.
ಹುಕ್ಕಾ ಕೇಂದ್ರಗಳ ಮೇಲೆ ಸಿಸಿಬಿ ದಾಳಿ
ರಾಜ್ಯದಲ್ಲಿ ಹುಕ್ಕಾ ಸಂಗ್ರಹಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಆದರೂ ಹುಕ್ಕಾ ಬಾರ್ ನಡೆಸುತ್ತಿದ್ದ ಬೆಂಗಳೂರಿನ ಹುಕ್ಕಾ ಕೇಂದ್ರದ ಮೇಲೆ ಸಿಸಿಬಿಯ ಸಂಘಟಿತ ಅಪರಾಧ ದಳ(ಪಶ್ಚಿಮ) ದಾಳಿ ನಡೆಸಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಹುಕ್ಕಾ ಪಾಟ್‌ಗಳು, ಪೈಪ್‌ಗಳು, ತಂಬಾಕು ಉತ್ಪನ್ನಗಳು ಮತ್ತು 21 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಹಾಲ್‌ಮಾರ್ಕ್ ಬಿಲ್ಡಿಂಗ್‌ನಲ್ಲಿ ಕಾನೂನು ಬಾಹಿರವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ್ತಿರುತ್ತದೆ. ಈ ಮಾಹಿತಿಯ ಮೇರೆಗೆ ಸಿಸಿಬಿಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಸ್ಥಳದಲ್ಲಿ ಹುಕ್ಕಾಬಾರ್ ನಡೆಸಲಾಗುತ್ತಿದೆ.
ಮೊಬೈಲ್‌ನ ವಿವಿಧ ಆಪ್ ಮತ್ತು ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಜೂಜಾಟದಲ್ಲಿ ತೊಡಗಿದ್ದರು. ಮೊಬೈಲ್ ವ್ಯಾಟ್ಸಪ್ ಮೂಲಕ ಪ್ರಮುಖ ಬುಕ್ಕಿಯೊಂದಿಗೆ ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಈ ರೀತಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಯನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಂದು ಐ-ಫೋನ್, 14 ಪ್ರೋಮ್ಯಾಕ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಬುಕ್ಕಿಯ ವಿರುದ್ಧ ಈ ಹಿಂದೆಯೂ ಬೆಂಗಳೂರಿನ ಸಿಟಿಮಾರ್ಕೆಟ್ ಮತ್ತು ಕಮರ್ಷಿಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.
ಹುಕ್ಕಾಬಾರ್ ನಡೆಸುತ್ತಿದ್ದ ಮಾಲೀಕ ಮತ್ತು ಅಲ್ಲಿನ 6 ಕೆಲಸಗಾರರು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದ 12 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹುಕ್ಕಾ ಸೇವನೆಗೆ ಬಳಸಲಾಗುತ್ತಿದ್ದ 16 ಹುಕ್ಕಾ ಚಿಲುಮೆ, 17 ಹುಕ್ಕಾ ಪೈಪುಗಳು, 9 ಹುಕ್ಕಾ ಸ್ಟ್ಯಾಂಡ್‌ಗಳು ಮತ್ತಿತರ ವಸ್ತುಗಳು, ಹುಕ್ಕಾ ಸೇವನೆ ಮಾರಾಟ ದಿಂದ ಸಂಗ್ರಹವಾದ 1,20,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)