Bangalore Crime: ಬೆಂಗಳೂರಲ್ಲಿ ಮೀಟರ್ ಬಡ್ಡಿಗಾಗಿ ಬೆದರಿಕೆ ಹಾಕಿದ್ದ ಫೈನಾನ್ಶಿಯರ್, ರೌಡಿ ಬಂಧನ
ಬೆಂಗಳೂರಿನಲ್ಲಿ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಹಣಕಾಸು ಹೂಡಿಕೆದಾರ ಹಾಗೂ ರೌಡಿ ಶೀಟರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.(ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು:ಪಡೆದಿದ್ದ ಸಾಲಕ್ಕೆ ಮೀಟರ್ ಬಡ್ಡಿ ನೀಡುವಂತೆ ಬೆದರಿಕೆ ಒಡ್ಡಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಫೈನಾನ್ಶಿಯರ್ ಮತ್ತು ರೌಡಿ ಸೇರಿ ಮೂವರನ್ನು
ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸಿದ ಸಿ.ಸಿ.ಬಿ (ಪಶ್ಚಿಮ) ಪೊಲೀಸರು ಮೀಟರ್ ಬಡ್ಡಿ ಸಾಲ ವಸೂಲಾತಿಗೆ ಪ್ರಯತ್ನಿಸಿದ್ದ ಓರ್ವ ಕುಖ್ಯಾತ ರೌಡಿಶೀಟರ್, ಆತನ ಸಹಚರ ಸೇರಿದಂತೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್‌ನಲ್ಲಿ ಟ್ರಾವೆಲ್ಸ್ ಮಾಲೀಕರೊಬ್ಬರು ಚಿಕ್ಕಕಲ್ಲಸಂದ್ರದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನಿಂದ 23 ಲಕ್ಷ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಈ ಸಾಲದ ಹಣಕ್ಕೆ ಬಡ್ಡಿ ಸೇರಿಸಿ ಸಾಲವನ್ನು ಹಿಂದಿರುಗಿಸಿದ್ದರು. ಆದರೂ ಸಹ, ಈ ಸಾಲದ ಹಣಕ್ಕೆ ಮೀಟರ್ ಬಡ್ಡಿ ನೀಡುವಂತೆ ಒತ್ತಾಯಿಸಿ, ಹೆಚ್ಚುವರಿಯಾಗಿ 5 ಲಕ್ಷ ಹಣ ನೀಡುವಂತೆ ಫೈನಾನ್ಶಿಯರ್ ಬೇಡಿಕೆ ಇಟ್ಟಿದ್ದ.
ಸಾಲ ಪಡೆದ ವ್ಯಕ್ತಿಯು ಮೀಟರ್ ಬಡ್ಡಿ ನೀಡಲು ನಿರಾಕರಿಸಿದಾಗ ಸಾಲ ನೀಡಿದ ಫೈನಾನ್ಶಿಯರ್ ರೌಡಿಶೀಟರ್ ವೊಬ್ಬ ಮತ್ತು ಆತನ ಸಹಚರನ ಮೂಲಕ ಪ್ರಾಣ ಬೆದರಿಕೆ ಹಾಕಿದ್ದಾನೆ.
ಈ ಮೂಲಕ ಹಣ ವಸೂಲಿ ಮಾಡಲು ಪ್ರಯತ್ನ ನಡೆಸಿದ್ದು ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ರೌಡಿ ನಸ್ರುಲ್ಲಾ ಸೆರೆ
12 ಕ್ಕೂ ಹೆಚ್ಚು ಬೆಂಗಳೂರಿನ ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿ ನಸ್ರುಲ್ಲಾ ಆಲಿಯಾಸ್ ನಸ್ರುನನ್ನು ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಈ ರೌಡಿಯು ಬೆಂಗಳೂರು ನಗರದ ಗೋವಿಂದಪುರ ಮಾದನಾಯಕನಹಳ್ಳಿ, ಬಿಡದಿ, ಹೆಚ್.ಎಸ್.ಆರ್ ಲೇ ಔಟ್, ಹೆಬ್ಬಾಳ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ಬೇಗೂರು, ಸದಾಶಿವನಗರ ಸೇರಿದಂತೆ 12ಕ್ಕೂ ಪೊಲೀಸ್ ಠಾಣೆಗಳಲ್ಲಿ 2014ನೇ ಸಾಲಿನಿಂದ ಇದುವರೆಗೆ ರೌಡಿ ಚಟುವಟಿಕೆಗಳನ್ನು ನಡೆಸುತ್ತಿದ್ದ.
ಈತ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಸಾರ್ವಜನಿಕರ ಮೇಲೆ ಮಾರಾಣಾಂತಿಕ ಹಲ್ಲೆ, ಸುಲಿಗೆ, ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಬಾಗಿಯಾಗಿದ್ದ. ಪೊಲೀಸರ ಕೈಗೆ ಸಿಗದೆ ಕಳೆದ ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ. ಈತನ ರೌಡಿ ಚಟುವಟಿಕೆಗಳ ಮೇಲೆ ನಿಗಾವಹಿಸಲು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಆದರೆ ಈತ ಒಂದು ವರ್ಷದಿಂದ ಪೊಲೀಸರ ಕಣ್ತಪ್ಪಿಸಿ ಮುಂಬೈ ಗೆ ಪಲಾಯನ ಮಾಡಿದ್ದ.
ಈತನು ಹಲವಾರು ಅಪರಾಧ ಕೃತ್ಯಗಳಲ್ಲಿ ಬಾಗಿಯಾಗಿದ್ದು, ಅನೇಕ ಪ್ರಕರಣಗಳು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ. ಆದರೂ ಈ ರೌಡಿಯು ನ್ಯಾಯಾಲಯಗಳಿಗೂ ಹಾಜರಾಗುತ್ತಿರಲಿಲ್ಲ.
ನ್ಯಾಯಾಲಯವು ಈತನ ವಿರುದ್ಧ 10 ಜಾಮೀನುರಹಿತ ಮತ್ತು ಒಂದು ಪ್ರೋಕ್ಲಮೇಷನ್ ಹೊರಡಿಸಿತ್ತು.
ರೌಡಿಶೀಟರ್ ನಸ್ರುಲ್ಲಾ ಇದೇ ರೀತಿ ಸುಪಾರಿ ಪಡೆದು ಹಣ ವಸೂಲಿ ಮಾಡುವುದನ್ನು ದಂಧೆ ಮಾಡಿಕೊಂಡಿದ್ದ. ಜತೆಗೆ, ದರೋಡೆ, ಡಕಾಯಿತಿ ಸೇರಿ 13 ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಕರ್ನಾಟಕ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಈ ರೌಡಿ ಸೆರೆ ಸಿಕ್ಕಿರಲಿಲ್ಲ.
ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡವು ಇತ್ತೀಚೆಗೆ ಮುಂಬೈ ನಗರಕ್ಕೆ ತೆರಳಿ ಈ ರೌಡಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ಮುಂದುವರೆಸಿದೆ.
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ದೇವರಾಜ್ ಮಾರ್ಗದರ್ಶನ, ಕೆ.ಜಿ.ಹಳ್ಳಿ ಉಪ ವಿಭಾಗ ಪ್ರಕಾಶ್ ರಾಠೋಡ್ ನೇತೃತ್ವದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ನಡೆಸಿ ರೌಡಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)