Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಆಟೋ ಚಾಲಕರ ಮೇಲೆ ಆಕ್ರೋಶ; ಈ 2 ಕಾರಣಗಳಿಗೆ ಆಟೋ ಚಾಲಕರ ವಿರುದ್ಧ ದೂರುಗಳ ಸುರಿಮಳೆ-bangalore news bangalore police getting more complaints against auto drivers for misconduct with passengers mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಆಟೋ ಚಾಲಕರ ಮೇಲೆ ಆಕ್ರೋಶ; ಈ 2 ಕಾರಣಗಳಿಗೆ ಆಟೋ ಚಾಲಕರ ವಿರುದ್ಧ ದೂರುಗಳ ಸುರಿಮಳೆ

Bangalore News: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಆಟೋ ಚಾಲಕರ ಮೇಲೆ ಆಕ್ರೋಶ; ಈ 2 ಕಾರಣಗಳಿಗೆ ಆಟೋ ಚಾಲಕರ ವಿರುದ್ಧ ದೂರುಗಳ ಸುರಿಮಳೆ

Banglore Auto Riksha ಬೆಂಗಳೂರಿನಲ್ಲಿ ಆಟೋರಿಕ್ಷಾಗಳ ಚಾಲಕರ ವಿರುದ್ದ ದುರ್ನಡತೆ ಸಹಿತ ಹಲವು ಆರೋಪಗಳ ಮೇಲೆ ದೂರು ದಾಖಲಾಗುತ್ತಲೇ ಇರುತ್ತವೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಆಟೋಚಾಲಕರ ವಿರುದ್ದ ದೂರುಗಳು ಕೇಳಿ ಬರುತ್ತವೆ ಇವೆ.
ಬೆಂಗಳೂರಿನಲ್ಲಿ ಆಟೋಚಾಲಕರ ವಿರುದ್ದ ದೂರುಗಳು ಕೇಳಿ ಬರುತ್ತವೆ ಇವೆ.

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ಗ್ರಾಹಕರ ನಡುವೆ ಘರ್ಷಣೆ ನಡೆಯದ ದಿನವೇ ಇಲ್ಲ ಎನ್ನಬಹುದು. ಒಂದಿಲ್ಲೊಂದು ಭಾಗದಲ್ಲಿ ಇಂತಹ ಗಲಾಟೆಗಳು ನಡೆಯುತ್ತಿದ್ದು ಪೊಲೀಸರಿಗೆ ದೂರುಗಳು ಬರುತ್ತಿರುತ್ತವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಟೋ ಚಾಲಕರ ವರ್ತನೆ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಮೀಟರ್‌ ಗಿಂತ ದುಪ್ಪಟ್ಟು ದರ ಕೇಳುವುದು, ಕರೆದಲ್ಲಿಗೆ ಬರುವುದಿಲ್ಲ ಎನ್ನುವುದು ಸಾಮಾನ್ಯ ದೂರುಗಳಲ್ಲಿ ಪ್ರಮುಖವಾಗಿವೆ. ಆಟೋ ಚಾಲಕರ ವಿರುದ್ಧ ಪ್ರತಿದಿನ ಕನಿಷ್ಠ 20-25 ದೂರುಗಳು ಬರುತ್ತವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಹೇಳುತ್ತಾರೆ.

ಕರೆದಲ್ಲಿಗೆ ಬರುವುದಿಲ್ಲ ಎಂಬ ಕಾರಣಕ್ಕೆ 2,586 ಮತ್ತು ಹೆಚ್ಚಿನ ಬಾಡಿಗೆ ಕೇಳಿದ್ದಕ್ಕೆ 2,582 ಪ್ರಕರಣಗಳನ್ನು ಆಟೋ ಚಾಲಕರ ವಿರುದ್ಧ ಈ ವರ್ಷದಲ್ಲಿ ಅಂದರೆ 2024ರ ಜುಲೈ 31ರ ವರೆಗೆ ದಾಖಲಿಸಲಾಗಿದೆ. ಈ ದೂರುಗಳ ಸಂಖ್ಯೆ 2022 ಮತ್ತು 2023ರ ಇಡೀ ವರ್ಷದಲ್ಲಿ ದಾಖಲಾದ ದೂರುಗಳಿಗಿಂತ ಹೆಚ್ಚು ಎಂದು ಪೊಲೀಸರು ಹೇಳುತ್ತಾರೆ.

2022ರಲ್ಲಿ ಕರೆದಲ್ಲಿಗೆ ಬರುವುದಿಲ್ಲ ಎಂಬ ಕಾರಣಕ್ಕೆ 2,183 ಮತ್ತು ಹೆಚ್ಚಿನ ಬಾಡಿಗೆ ಕೇಳಿದ್ದಕ್ಕೆ 2,179 ದೂರುಗಳನ್ನು ದಾಖಲಿಸಲಾಗಿದೆ. 2023ರಲ್ಲಿ ಕರೆದಲ್ಲಿಗೆ ಬರುವುದಿಲ್ಲ ಎಂಬ ಕಾರಣಕ್ಕೆ 1,537 ಮತ್ತು ಹೆಚ್ಚಿನ ಬಾಡಿಗೆ ಕೇಳಿದ್ದಕ್ಕೆ 1,599 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರತಿದಿನ ಒಂದಿಲ್ಲೊಂದು ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದ್ದೇವೆ. ಅದರಲ್ಲೂ ಈ ವಿಶೇಷ ಕಾರ್ಯಾಚರಣೆ ಆಟೋ ಚಾಲಕರ ವಿರುದ್ದವೇ ಆಗಿರುತ್ತದೆ. ಆಟೋ ಚಾಲಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್.‌ ಆಸ್ಪತ್ರೆ, ಮೆಟ್ರೋ ನಿಲ್ದಾಣಗಳ ಬಳಿಯೇ ಇರುತ್ತಾರೆ. ಇಂತಹ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಬಾಡಿಗೆ ಕೇಳುವುದು ಸಾಮಾನ್ಯವಾಗಿದೆ.

ಸಾರ್ವಜನಿಕರಲ್ಲಿ ದೂರು ನೀಡುವ ಅರಿವು ಹೆಚ್ಚುತ್ತಿದ್ದು ದೂರುಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. 112 ನಂಬರ್‌ ಗೂ ದೂರುಗಳು ಬರುತ್ತವೆ ಎಂದು ಸಂಚಾರಿ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆಟೋ ಚಾಲಕರು ತಮ್ಮದೇ ಆದ ವಾದವನ್ನು ಮಂಡಿಸುತ್ತಾರೆ. ನಿಗದಿತ ದರಕ್ಕೆ ಸೇವೆ ಒದಗಿಸುವುದು ಅಸಾಧ್ಯ. 2013ರಲ್ಲಿ ದರ ಪರಿಷ್ಕರಣೆ ಆಗಿದ್ದು ಬಿಟ್ಟರೆ 2021ರವರೆಗೆ ದರ ಪರಿಷ್ಕರಣೆ ಆಗಿರಲಿಲ್ಲ. ಅನೇಕ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಕಾಲ ಕಾಲಕ್ಕೆ ದರ ಪರಿಷ್ಕರಣೆ ಆಗುತ್ತೇ ಇದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಆಗುತ್ತಿಲ್ಲ ಎಂದು ಆಟೋಚಾಲಕರ ಸಂಘದ ಪದಾಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ದಶಕದ ಹಿಂದೆ ಒಂದು ಆಟೋ ಬೆಲೆ 1.5 ಲಕ್ಷ ರೂ ಇದ್ದದ್ದು, ಈಗ 3 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಬಿಡಿ ಭಾಗಗಳ ಬೆಲೆಯೂ ದುಪ್ಪಟ್ಟಾಗಿದೆ. ಬುಧವಾರವಷ್ಟೇ ಗ್ಯಾಸ್‌ ಬೆಲೆ ಪ್ರತಿ ಲೀಟರ್‌ ಗೆ 2 ರೂ ಏರಿಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕಾಲ ಕಾಲಕ್ಕೆ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುತ್ತಿದ್ದರೆ ಹೆಚ್ಚಿನ ದರಕ್ಕೆ ಬೇಡಿಕೆ ಇರಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಆದರೆ ಯಾರೊಬ್ಬರೂ ಪರಿಹಾರ ರೂಪಿಸಲು ಮುಂದಾಗುತ್ತಿಲ್ಲ ಎಂದು ಹೇಳುತ್ತಾರೆ.

ಬೆಂಗಳೂರು ಸಂಚಾರಿ ಪೊಲೀಸರು 18 ಪ್ರೀ ಪೇಯ್ಡ್‌ ಆಟೋ ರಿಕ್ಷಾ ಕೌಂಟರ್‌ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಈ ಕೌಂಟರ್‌ ಗಳನ್ನು ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ. ನಂತರ ರಾತ್ರಿಯಿಡೀ ಆಟೋ ಚಾಲಕರ ಶೋಷಣೆ ಮುಂದುವರೆಯುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ.

ರಾತ್ರಿ ವೇಳೆ ಒಂದೂವರೆ ಪಟ್ಟು ಮಾತ್ರ ಹೆಚ್ಚಿಗೆ ಪ್ರಯಾಣ ದರ ವಿಧಿಸಬೇಕು. ಆದರೆ ಎರಡು ಮೂರು ಪಟ್ಟು ಹೆಚ್ಚಿಗೆ ಕೇಳುತ್ತಾರೆ ಎಂದೂ ಆರೋಪಿಸುತ್ತಾರೆ.

(ವರದಿ: ಎಚ್.ಮಾರುತಿ, ಬೆಂಗಳೂರು)