ಕನ್ನಡ ಸುದ್ದಿ  /  Karnataka  /  Bangalore News Bangalore Police Have Beat At Hoysala Vehicle Should Carry Gun With Them For Security Reasons Prk

Bangalore News: ಬೆಂಗಳೂರಲ್ಲಿ ಗಸ್ತು ತಿರುಗುವ ಹೊಯ್ಸಳ ಪೊಲೀಸರಿಗೆ ಇನ್ಮುಂದೆ ಬಂದೂಕು ಕಡ್ಡಾಯ

ಬೆಂಗಳೂರಲ್ಲಿ ಹೊಯ್ಸಳ ವಾಹನದ ಜತೆಯಲ್ಲಿ ಹೋಗುವ ಎಎಸ್‌ಐ ದರ್ಜೆಯ ಸಿಬ್ಬಂದಿ ಕಡ್ಡಾಯವಾಗಿ ಬಂದೂಕು ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.ವರದಿ: ಪ್ರಿಯಾಂಕಗೌಡ , ಬೆಂಗಳೂರು.

ಬೆಂಗಳೂರಿನಲ್ಲಿ ಹೊಯ್ಸಳ ವಾಹನದೊಂದಿಗೆ ಹೋಗುವವರಿಗೆ ಬಂದೂಕು ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ಹೊಯ್ಸಳ ವಾಹನದೊಂದಿಗೆ ಹೋಗುವವರಿಗೆ ಬಂದೂಕು ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಹೊಯ್ಸಳ ಪೊಲೀಸ್ ಸಿಬ್ಬಂದಿ ಪ್ರತಿನಿತ್ಯ ಗಸ್ತು ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಯಾವುದೇ ಅಪರಾಧ ಕೃತ್ಯ ಮುಂತಾದವು ಸಂಭವಿಸಿದರೆ, ಅಲ್ಲಿಗೆ ಮೊದಲು ತೆರಳುವುದೇ ಹೊಯ್ಸಳ ಪೊಲೀಸ್ ಸಿಬ್ಬಂದಿ. ಇದೀಗ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ಮತ್ತಷ್ಟು ಶಕ್ತಿ ತುಂಬಲಾಗಿದೆ.ನಗರದಲ್ಲಿ ಏನಾದರೂ ಅಪರಾಧ ಕೃತ್ಯ ಸಂಭವಿಸಿದಾಗ ಸ್ಥಳಕ್ಕೆ ಮೊದಲು ತಲುಪುವುದೇ ಗಸ್ತು ತಿರುಗುವ ಹೊಯ್ಸಳ ಪೊಲೀಸರು. ಒಂದುವೇಳೆ ಅಪರಾಧಿಗಳ ಕೈಯಲ್ಲಿ ಮಾರಕಾಸ್ತ್ರಗಳು ಅಥವಾ ಬಂದೂಕುಗಳು ಇದ್ದರೆ ಅವರನ್ನು ಎದುರಿಸುವುದು ಕಷ್ಟವೇ ಸರಿ. ಕೆಲವೊಂದು ಘಟನೆಗಳಲ್ಲಿ ಪೊಲೀಸರ ಮೇಲೆ ದಾಳಿ ಮಾಡಿರುವಂತಹ ನಿದರ್ಶನಗಳು ಸಹ ಇವೆ. ಇದರಿಂದ ಬಲಿಪಶುಗಳನ್ನು ರಕ್ಷಿಸಲು ಹೋಗಿ ಪೊಲೀಸರೇ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಬಂದೂಕು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಅಷ್ಟೇ ಅಲ್ಲದೆ, ಇದೀಗ ಹೊಯ್ಸಳ ತಂಡದಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್ಐ) ನೇತೃತ್ವದಲ್ಲಿ ಗಸ್ತು ಕೈಗೊಳ್ಳಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಎಎಸ್‌ಐ ಲಭ್ಯವಿಲ್ಲದಿದ್ದರೆ, ತಂಡವು ಸಬ್ ಇನ್‌ಸ್ಪೆಕ್ಟರ್ ಅಥವಾ ಉನ್ನತ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ. ಇನ್ಮುಂದೆ ಮುಖ್ಯಪೇದೆಗಳು ತಂಡವನ್ನು ಮುನ್ನಡೆಸುವಂತಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.

ಏನಿದು ಬದಲಾವಣೆ

ಇನ್ನು ಶಸ್ತ್ರಾಸ್ತ್ರಗಳನ್ನು ನೀಡುವ ಮೊದಲು ಎಲ್ಲಾ ಎಎಸ್‌ಐಗಳಿಗೆ ಸಾಕಷ್ಟು ತರಬೇತಿ ನೀಡಲಾಗಿದೆ. ಹೊಯ್ಸಳ ಗಸ್ತು ತಂಡದ ಎಲ್ಲ ಸದಸ್ಯರು ತಮ್ಮ ಎದೆಭಾಗದಲ್ಲಿ ಪೊಲೀಸರು ಧರಿಸುವ ಕ್ಯಾಮರಾವನ್ನು ಕಡ್ಡಾಯವಾಗಿ ಬಳಸಬೇಕು. ರಾತ್ರಿ ವೇಳೆ ಪ್ರತಿಫಲಿಸುವ ಜಾಕೆಟ್ ಗಳನ್ನೇ ಧರಿಸುವಂತೆ ಸಹ ಆದೇಶಿಸಲಾಗಿದೆ. ಅಲ್ಲದೆ, ಪೊಲೀಸ್ ಠಾಣೆಯ ರಾತ್ರಿ ಪಾಳಿಯ ಗಸ್ತು ತಿರುಗುವ ಸಿಬ್ಬಂದಿ 12-ಬೋರ್ ಪಂಪ್ ಆಕ್ಷನ್ ಗನ್‌ಗಳನ್ನೇ ಒಯ್ಯಬೇಕು

ಇತ್ತೀಚೆಗಷ್ಟೇ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಹೊಯ್ಸಳ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ರಾತ್ರಿ ಪಾಳಿ ಸಿಬ್ಬಂದಿ ಗಸ್ತು ಕಾರ್ಯಾಚರಣೆ ಕೈಗೊಳ್ಳುವಾಗ ಅಗತ್ಯವಾಗಿ ಬಂದೂಕು ಒಯ್ಯಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇನ್ನು ಹೊಯ್ಸಳ ಫ್ಲೀಟ್ 241 ವಾಹನಗಳನ್ನು ಹೊಂದಿದ್ದು, ನಿರ್ದಿಷ್ಟ ನಿಲ್ದಾಣಕ್ಕೆ ಎರಡರಿಂದ ಮೂರು ವಾಹನಗಳನ್ನು ನಿಯೋಜಿಸಲಾಗುತ್ತದೆ. ಹೊಯ್ಸಳ ಗಸ್ತು ಸಿಬ್ಬಂದಿ ಪ್ರತಿ 30 ನಿಮಿಷಗಳಿಗೊಮ್ಮೆ ತಮ್ಮ ಸ್ಥಳವನ್ನು ಬದಲಾಯಿಸುತ್ತಾರೆ.

ಏನಾದರೂ ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಿದಾಗ, ಗಸ್ತು ಸಿಬ್ಬಂದಿ ತಮ್ಮ ವೈರ್‌ಲೆಸ್ ಸಾಧನದ ಮೂಲಕ ಹೊಯ್ಸಳ ನಿಯಂತ್ರಣ ಕೊಠಡಿಗೆ ಕೂಡಲೇ ಮಾಹಿತಿ ರವಾನಿಸಬೇಕು. ಗಸ್ತು ಸಿಬ್ಬಂದಿ ಹಂಚಿಕೊಂಡ ಅಪರಾಧ ಮಾಹಿತಿಯನ್ನು ಕಂಟ್ರೋಲ್ ರೂಮ್ ಮೂಲಕ ಇತರೆ ಗಸ್ತು ಸಿಬ್ಬಂದಿಯನ್ನು ಎಚ್ಚರಿಸುತ್ತದೆ ಇದು ಅಪರಾಧಿಗಳನ್ನು ಹಿಡಿಯಲು ಸಹಾಯ ಮಾಡುತ್ತದೆ ಎಂದು ಎನ್ನುವುದು ಪೊಲೀಸ್‌ ಆಯುಕ್ತರ ವಿವರಣೆ.

ಬದಲಾವಣೆಗಳಿಗೆ ಕಾರಣವೇನು?

ಸುಮಾರು ಮೂರು ತಿಂಗಳ ಹಿಂದೆ, ನಗರದಲ್ಲಿ ದರೋಡೆ ಪ್ರಕರಣವೊಂದು ನಡೆದಿತ್ತು. ಈ ವೇಳೆ ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಆರೋಪಿಗಳ ಕೈಯಲ್ಲಿ ಮಾರಕಾಸ್ತ್ರಗಳಿದ್ದವು. ಹೀಗಾಗಿ ಗಸ್ತು ಸಿಬ್ಬಂದಿ, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಬದಲು, ಸ್ಥಳೀಯ ಪೊಲೀಸರಿಗೆ ಕಾಯುವಂತಹ ಪರಿಸ್ಥಿತಿ ಬಂದಿತ್ತು. ಇಲ್ಲದಿದ್ದಲ್ಲಿ ದರೋಡೆಕೋರರು ಗಸ್ತು ಸಿಬ್ಬಂದಿ ಮೇಲೆಯೇ ದಾಳಿ ಮಾಡುವ ಸಾಧ್ಯತೆ ಇತ್ತು. ಈ ಘಟನೆ ಪೊಲೀಸರಲ್ಲಿ ಜಾಗೃತಿ ಮೂಡಲು ಕಾರಣವಾಗಿದೆ. ನಂತರ ಪೊಲೀಸ್ ಆಯುಕ್ತರು ಬಂದೂಕು ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ.

ಗಸ್ತು ಸಿಬ್ಬಂದಿ ಕಮಾಂಡ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು, ಉಸ್ತುವಾರಿ ವಹಿಸಿರುವ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ), ಹೊಯ್ಸಳ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಅಲ್ಲದೆ ಪ್ರತಿ ವಾರ ಅವರು ಗಸ್ತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ ಎಂಬುದು ದಯಾನಂದ್‌ ನೀಡುವ ಸ್ಪಷ್ಟನೆ.

ಮುಖ್ಯವಾಗಿ ಇನ್ಮುಂದೆ ಹೊಯ್ಸಳ ಪೊಲೀಸರ ಬಳಿ ಬಂದೂಕು, ವೈರ್‌ಲೆಸ್ ಸಾಧನಗಳು, ದೇಹಕ್ಕೆ ಧರಿಸಲಾಗುವ ಕ್ಯಾಮರಾಗಳು, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳು, ಪ್ರಥಮ ಚಿಕಿತ್ಸಾ ಕಿಟ್‌ಗಳು, ಪ್ರತಿಫಲಿತ ಜಾಕೆಟ್‌ಗಳು ಮುಂತಾದವುಗಳನ್ನು ಹೊಂದಿರುತ್ತಾರೆ. ಈ ಮೂಲಕ ಹೊಯ್ಸಳ ಪೊಲೀಸರ ಶಕ್ತಿ ಮತ್ತಷ್ಟು ಹೆಚ್ಚಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)

IPL_Entry_Point