Bangalore Crime: 4 ವರ್ಷದ ಮಗುವನ್ನು ಕೂಡಿ ಹಾಕಿ ಹಿಂಸಿಸಿದ ಪ್ರಕರಣ, ತಾಯಿ ಪ್ರಿಯಕರನ ಬಂಧನ
ಬೆಂಗಳೂರಿನಲ್ಲಿ ಮಗು ಕೂಡಿ ಹಾಕಿ ಹಿಂಸೆ ನೀಡಿದ ಆರೋಪದ ಮೇಲೆ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.ವರದಿ:ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ನಾಲ್ಕು ವರ್ಷದ ಮಗುವನ್ನು ಮನೆಯಲ್ಲೇ ಕೂಡಿ ಹಾಕಿ ಹಲ್ಲೆ ನಡೆಸಿದ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಗಿರಿನಗರ ಪೊಲೀಸರ ಸಹಕಾರದೊಂದಿಗೆ ಮಗುವನ್ನು ರಕ್ಷಿಸಿದ್ದಾರೆ. ತಾಯಿ 26 ವರ್ಷದ ಶಾರಿನ್ ಹಾಗೂ ಆಕೆಯ ಪ್ರಿಯಕರ 30 ವರ್ಷದ ದಿನೇಶ್ ಈ ಕೃತ್ಯ ಎಸಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಾರಿನ್ ತನ್ನ ಪತಿಯ ಜೊತೆಗೆ ವಾಸಿಸುತ್ತಿರಲಿಲ್ಲ. ಗಿರಿನಗರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಮಗುವಿನ ಸ್ಥಿತಿಯನ್ನು ಅರಿತ ನೆರೆಹೊರೆಯವರು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.
ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ದ ಸೆಕ್ಷನ್ 75 ರ ಅಡಿಯಲ್ಲಿ ಮಕ್ಕಳ ವಿರುದ್ದ ದೌರ್ಜನ್ಯ ಎಸಗಿದ ಪ್ರಕರಣ ದಾಖಲಿಸಲಾಗಿದೆ.
ಆರಂಭದಲ್ಲಿ ಮಗು ಶಾರಿಂ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿತ್ತು. ಒಂದು ತಿಂಗಳ ಹಿಂದೆಯಷ್ಟೇ ಶಾರೀನ್ ಮಗುವನ್ನು ಕರೆದುಕೊಂಡು ಬಂದಿದ್ದರು. ಕೆಲಸ ಸಿಗುವವರೆಗೂ ಮಗುವಿನ ಜೊತೆ ಇರುತ್ತಿದ್ದ ಆಕೆ ಉದ್ಯೋಗ ಸಿಕ್ಕ ನಂತರ ಮಗುವನ್ನು ಮನೆಯಲ್ಲಿ ಕೂಡಿಹಾಕಿ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಜೊತೆಗೆ ಇರುವಂತೆ ಮಗು ಅಳುತ್ತಿತ್ತು. ಇದರಿಂದ ಬೇಸತ್ತ ಶಾರೀನ್ ಮಗುವನ್ನು ಹೊಡೆಯುತ್ತಿದ್ದರು. ಒಂದು ತಿಂಗಳಿನಿಂದ ಮಗುವನ್ನು ಕೊಠಡಿಯಲ್ಲಿ ಕೂಡಿ ಹಾಕುತ್ತಿದ್ದರು ಎಂಬ ವದಂತಿ ಹರಿದಾಡುತ್ತಿದೆ. ಆದರೆ ಆಕೆ ಒಂದೆರಡು ದಿನಗಳಿಂದ ಮಾತ್ರ ಕೂಡಿ ಹಾಕಿರಬಹುದು ಎಂದು ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗುವನ್ನು ಹೊಡೆಯಲು ಸಹಕಾರ ಮತ್ತು ಬೆಂಬಲ ನೀಡುತ್ತಿದ್ದ ಕಾರಣಕ್ಕೆ ಆಕೆಯ ಸಂಗಾತಿ ದಿನೇಶ್ ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ
ಸದ್ಯಕ್ಕೆ ಮಗು ಸಮಿತಿಯ ಆರೈಕೆಯಲ್ಲಿ ಇದೆ. ತಾಯಿಯನ್ನು ಕೌನ್ಸೆಲಿಂಗ್ ಗಾಗಿ ಕಳುಹಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ರಕ್ಷಿಸಿ ಅಗತ್ಯ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದರು.
ಚಲಿಸುತ್ತಿದ್ದ ರೈಲಿನಿಂದ ಕಾರಿನ ಮೇಲೆ ಬಿದ್ದುಸಾವು
ಚಲಿಸುತ್ತಿದ್ದ ರೈಲಿನಿಂದ ಕಾರಿನ ಮೇಲೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ತಾರಾ ಹೋಟೆಲ್ ಬಳಿ ನಡೆದಿದೆ. ಮೃತ ಯುವಕನನ್ನು 21 ವರ್ಷದ ವೇಣು ಎಂದು ಗುರುತಿಸಲಾಗಿದೆ.
ಈ ಪ್ರಕರಣ ಕೆಲ ಕಾಲ ಆತಂಕ ಸೃಷ್ಟಿಸಿ ವಾಹನ ದಟ್ಟಣೆಗೆ ಕಾರಣವಾಗಿತ್ತು. ಘಟನೆ ಕುರಿತು ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಯುವಕ ಕಾರಿನ ಮೇಲೆ ಬೀಳುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿದಿಲ್ಲ. ಈ ಯುವಕ ಕಿಯಾ ಕಂಪನಿಯ ಸಾನೆಟ್ ಕಾರಿನ ಮೇಲೆ ಬಿದ್ದಿದ್ದಾನೆ. ಈ ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು. ಕಾರಿಗೆ ಹಾನಿ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ಮೊಬೈಲ್ ನಲ್ಲಿ ಮಾತನಾಡುತ್ತಾ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದೂ ಹೇಳಲಾಗುತ್ತಿದೆ. ಏಕೆಂದರೆ ಈ ಯುವಕ ಮೆಜೆಸ್ಟಿಕ್ ನಲ್ಲಿ ರೈಲು ಹತ್ತುವುದಕ್ಕೂ ಮುನ್ನ ತನ್ನ ಸಹೋದರನಿಗೆ ಕರೆ ಮಾಡಿದ್ದ ಎಂದು ತನಿಖೆ ಕೈಗೊಂಡಿರುವ ಪೊಲೀಸರು ತಿಳಿಸಿದ್ದಾರೆ.