Bangalore Crime: ಬೆಂಗಳೂರಿನಲ್ಲಿ 120 ರೌಡಿಗಳ ಮನೆಗಳ ಮೇಲೆ ದಾಳಿ, ಮಂಚದಲ್ಲಿ ಲಾಂಗ್ ಬಚ್ಚಿಟ್ಟಿದ್ದ ರೌಡಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ 120 ರೌಡಿಗಳ ಮನೆಗಳ ಮೇಲೆ ದಾಳಿ, ಮಂಚದಲ್ಲಿ ಲಾಂಗ್ ಬಚ್ಚಿಟ್ಟಿದ್ದ ರೌಡಿ ಬಂಧನ

Bangalore Crime: ಬೆಂಗಳೂರಿನಲ್ಲಿ 120 ರೌಡಿಗಳ ಮನೆಗಳ ಮೇಲೆ ದಾಳಿ, ಮಂಚದಲ್ಲಿ ಲಾಂಗ್ ಬಚ್ಚಿಟ್ಟಿದ್ದ ರೌಡಿ ಬಂಧನ

Bangalore Police ಬೆಂಗಳೂರಿನ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಲಾಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ವರದಿ:ಎಚ್.ಮಾರುತಿ,ಬೆಂಗಳೂರು

ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸ್‌ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸ್‌ ದಾಳಿ ನಡೆದಿದೆ.

ಬೆಂಗಳೂರು: ಬೆಂಗಳೂರಿನ ಈಶಾನ್ಯ ವಿಭಾಗದ ಯಲಹಂಕ ಮತ್ತು ದೇವನಹಳ್ಳಿ ಉಪ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ರೌಡಿಗಳ ಮನೆಗಳ ಮೇಲೆ ಮಂಗಳವಾರ ಮುಂಜಾನೆ ಪೊಲೀಸರು ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ರೌಡಿಯೊಬ್ಬನ ಮನೆಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಕು ಹರಿಯುವ ಮುನ್ನವೇ ಪೊಲೀಸರ ದಿಢೀರ್ ದಾಳಿಯಿಂದ ರೌಡಿಗಳು ಮತ್ತು ಅವರ ಕುಟುಂಬದ ಸದಸ್ಯರು ಬೆಚ್ಚಿಬಿದ್ದರು ಎಂದು ತಿಳಿದು ಬಂದಿದೆ.

ಅಮೃತಹಳ್ಳಿ, ಯಲಹಂಕ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ 5 ಗಂಟೆ ಸುಮಾರಿಗೆ 120ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರಣ್ಯಪುರದ ಶ್ರೀನಿಧಿ ಲೇಔಟ್ ರೌಡಿ ಶಾಹಿಲ್ ಎಂಬಾತ ಮಂಚದ ಕೆಳಗೆ ಮಾರಕಾಸ್ತ್ರವನ್ನು ಬಚ್ಚಿಟ್ಟಿದ್ದ. ಪೊಲೀಸರು ಅದನ್ನು ಜಪ್ತಿ ಮಾಡಿ ಶಾಹಿಲ್ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಇದೇ ಠಾಣೆಯ ವ್ಯಾಪ್ತಿಯಲಿ 10ಕೂ ಹೆಚ್ಚು ರೌಡಿಗಳ ಮನೆಗಳಲ್ಲಿ ತಪಾಸಣೆ ನಡೆಸಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ , ಯಲಹಂಕ ನ್ಯೂಟೌನ್, ಕಟ್ಟಿಗೆಹಳ್ಳಿ ಮತ್ತು ಪಾಲನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ 20ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಆದರೆ ಯಲಹಂಕ ವ್ಯಾಪ್ತಿಯ ರೌಡಿಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

ಅಪರಾಧ ಹಿನ್ನೆಲೆಯುಳ್ಳವರ ವಾಸಸ್ಥಳ, ವಿಳಾಸ, ಆದಾಯದ ಮೂಲ ಮತ್ತಿತರ ಮಾಹಿತಿಯನ್ನು ರೌಡಿ ಗಳಿಂದಲೇ ಸಂಗ್ರಹಿಸಲಾಗಿದೆ. ಮತ್ತೆ ಕೆಲವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಸಣ್ಣಪುಟ್ಟ ಗಲಾಟೆಯಲ್ಲಿ ಭಾಗಿ

ಇತ್ತೀಚೆಗೆ ಕೆಲವು ರೌಡಿಗಳು ಸಣ್ಣಪುಟ್ಟ ಗಲಾಟೆ ಹಾಗೂ ಹಣ ಸುಲಿಗೆ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಕೆಲವು ರೌಡಿಗಳು ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ರೌಡಿ ಚಟುವಟಿಕೆಗಳನ್ನು ನಿಯಂತ್ರಣಕ್ಕೆತರುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಲು ಈ ಕ್ರಮ ಅನುಸರಿಸಲಾಗಿದೆ.

ವಾಹನ ಚಾಲನೆ ಮಾಡುತ್ತಿದ್ದ ಬಾಲಕನ ಪೋಷಕರು, ಮಾಲೀಕರ ವಿರುದ್ಧ ಪ್ರಕರಣ

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಬಾಲಾಪರಾಧಿ ನ್ಯಾಯ ಕಾಯಿದೆ ( ಜೆಜೆ ಕಾಯಿದೆ) ಅಡಿಯಲ್ಲಿ ಗೇರ್ ಲೆಸ್ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಬಾಲಕನ ಪೋಷಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹತ್ತನೇ ತರಗತಿ ಓದುತ್ತಿರುವ ತಮ್ಮ ಮಗನ ವಿರುದ್ದ ಉದಾಸೀನತೆ ತೋರಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ವಾಹನದ ಮಾಲೀಕರಾದ ಮಹಿಳೆಯ ವಿರುದ್ಧವೂ ಜೆಜೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆ ವಾಹನವನ್ನು ಬಾಲಕನ ತಂದೆಗೆ ಮಾರಾಟ ಮಾಡಿದ್ದರೂ ದಾಖಲೆಗಳನ್ನು ವರ್ಗಾಯಿಸಿರಲಿಲ್ಲ.

ಕೆ ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಅಪ್ರಾಪ್ತ ಬಾಲಕ ತನ್ನ ಜತೆಗೆ ಇನ್ನೂ ಮೂವರು ಸಹಪಾಠಿಗಳನ್ನು ಕೂರಿಸಿಕೊಂಡು ವಾಹನ ಚಲಾಯಿಸುತ್ತಿದ್ದ. ಈ ಚಿತ್ರವನ್ನು ಕ್ಲಿಕ್ಕಿಸಿದ ಒಬ್ಬರು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು. ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಜೆಜೆ ಕಾಯಿದೆ ಅಡಿಯಲ್ಲಿ ವಾಹನ ಚಾಲನೆ ಮಾಡುವ ಅಪ್ರಾಪ್ತ ವಯಸ್ಸಿನವರ ಪೊಷಕರು ಮತ್ತು ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇತರೆ ಮೂವರು ಹುಡುಗರ ಪೋಷಕರನ್ನು ಕರೆಸಿ ತಿಳಿ ಹೇಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner