Bangalore News: ಆನ್‌ಲೈನ್ ಹೂಡಿಕೆ ಹುಷಾರು, ಬೆಂಗಳೂರಲ್ಲಿ ಹಿರಿಯ ನಾಗರೀಕರೊಬ್ಬರು ಬರೋಬ್ಬರಿ 4.50 ಕೋಟಿ ರೂ ಕಳೆದುಕೊಂಡರು !
Online Fraud ಬೆಂಗಳೂರಿನ ಹಿರಿಯ ನಾಗರೀಕರೊಬ್ಬರು ಆನ್‌ಲೈನ್ ವಹಿವಾಟಿಗೆ ಹೋಗಿ ಭಾರೀ ಮೊತ್ತವನ್ನು ಕಳೆದುಕೊಂಡಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಬೆಂಗಳೂರಿನ ಹಿರಿಯ ನಾಗರಿಕರೊಬ್ಬರು ತಮ್ಮ ಜೀವಮಾನದ ದುಡಿಮೆ ಸುಮಾರು 4.50 ಕೋಟಿ ರೂಪಾಯಿ ಹಣವನ್ನು ಷೇರು ಮಾರುಕಟ್ಟೆಯ ನಕಲಿ ಆಪ್ ನಲ್ ಹೂಡಿಕೆ ಮಾಡಿಕಳೆದುಕೊಂಡಿದ್ದಾರೆ. ಇತ್ತೀಚೆಗೆ ಇಡೀ ದೇಶಾದ್ಯಂತ ಇಂತಹ ನಕಲಿ ಆಪ್ ಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಸರ್ವೇ ಸಾಮಾನ್ಯವಾಗಿದೆ. ಬೆಂಗಳೂರಿನ ರಾಜಾಜಿನಗರದ ನಿವಾಸಿಯಾಗಿರುವ ಈ ಹಿರಿಯ ನಾಗರಕರು ಬೆಂಗಳೂರು ಉತ್ತರ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಹಣ ವರ್ಗಾವಣೆಯನ್ನು ತಡೆಯಲು ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟುಹಣ ಗಳಿಸಬಹುದಾಗಿದೆ. ಹಣ ಹೂಡಿಕೆ ಕುರಿತು ತರಬೇತಿಯನ್ನೂ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿರಿಯ ನಾಗರೀಕರು ದುಷ್ಕರ್ಮಿಗಳ ಆಮಿಷಕ್ಕೆ ಬಲಿಯಾಗಿ ಷೇರು ಮಾರುಕಟ್ಟೆಯ ವಾಟ್ಸ್ ಆಪ್ ಗ್ರೂಪ್ ಸೇರಿಕೊಳ್ಳುತ್ತಾರೆ. ಈ ಗ್ರೂಪ್ ನ ಅಡ್ಮಿನ್ ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ಹಣ ಹೂಡಿಕೆ ಕುರಿತು ಆನ್ ಲೈನ್ ಮೂಲಕ ತರಬೇತಿ ನೀಡುತ್ತಿದ್ದರು. ಸರಿಯಾದ ಸಮಯದಲ್ಲಿ ಹಣ ಹೂಡಿಕೆ ಮಾಡುವುದು ಸೇರಿದಂತೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಕುರಿತು ಮಾರ್ಗದರ್ಶನ ನೀಡುತ್ತಿದ್ದರು ಎಂದೂ ತಿಳಿಸಿದ್ದಾರೆ.
ತರಬೇತಿ ನೀಡಿದ ಕೆಲವು ದಿನಗಳ ನಂತರ ಆರೋಪಿಯು ಶೇ.40 ರಷ್ಟು ರಿಯಾಯಿತಿಯಲ್ಲಿ ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸಲು ಸಲಹೆ ನೀಡಿ ಲಿಂಕ್ ಕಳುಹಿಸುತ್ತಾನೆ. ಈ ಮೋಸಕ್ಕೆ ಬಲಿಯಾದ ಹಿರಿಯ ನಾಗರೀಕರು ಬರೋಬ್ಬರಿ 3.6 ಕೋಟಿ ರೂಪಾಯಿ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸುತ್ತಾರೆ. ಕೆಲವೇ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಅವರು ಹೂಡಿಕೆ ಮಾಡಿದ ಹಣ ರೂ.5.7 ಕೋಟಿಗಳಷ್ಟಾಗಿದೆ ಎಂದು ತೋರಿಸುತ್ತದೆ.
ಅವರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ 70 ಲಕ್ಷ ರೂ ಕಮೀಷನ್ ಹಣವನ್ನು ಪಾವತಿಸುವಂತೆ ಮೆಸೇಜ್ ಬರುತ್ತದೆ. ಕಮೀಷನ್ ಹಣವನ್ನು ವರ್ಗಾಯಿಸಿದರೂ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಸೈಬರ್ ಅಪರಾಧ ಇಲಾಖೆಯ ಬೆಂಗಳೂರು ದಕ್ಷಿಣ ವಿಭಾಗದಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ಇಂತಹುದೇ ಆಪ್ ನಲ್ಲಿ 2 ಕೋಟಿ ರೂ.ಗಳನ್ನು ಕಳೆದು ಕೊಂಡಿದ್ದರು.
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ, ಹಣ ವಸೂಲಿ
ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರದು ಅವರ ಸ್ನೇಹಿತರಿಂದ 3 ಲಕ್ಷ ರೂ. ಹಣ ವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ವಿಭಾಗದಲ್ಲಿ ದೂರು ದಾಖಲಿಸಿದ್ದು ಅಪರಾಧಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ಐಟಿ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ನಿಮ್ಮ ಭಾಸ್ಕರ್ ರಾವ್ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಭಾಸ್ಕರ್ ರಾವ್ ಅವರ ಸ್ನೇಹಿತರಿಗೆಲ್ಲಾ ರಿಕ್ವೆಸ್ಟ್ ಕಳುಹಿಸಿದ್ದಾರೆ. ನಂತರ ಆರೋಪಿಗಳು ತಮ್ಮ ಮನೆಯ ಸೋಫಾ ವನ್ನು ಮಾರಾಟಕ್ಕಿಟ್ಟಿರುವುದಾಗಿ ಭಾಸ್ಕರ್ ರಾವ್ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಾರೆ. ಕೆಲವರು ನಂಬಿ ಹಣ ಕಳುಹಿಸುತ್ತಾರೆ. ಈ ರೀತಿ ಸುಮಾರು 3 ಲಕ್ಷರೂ.ಗಳನ್ನು ವಂಚಿಸಿದ್ದಾರೆ.
ಅವರ ಸ್ನೇಹಿತರು ಸಂಶಯಗೊಂಡು ಭಾಸ್ಕರ್ ರಾವ್ ಅವರಿಗೆ ಕರೆ ಮಾಡಿದ್ದಾರೆ. ಆ ನಂತರ ಭಾಸ್ಕರ್ ರಾವ್ ಅವರು ದೂರು ದಾಖಲಿಸಿದ್ದಾರೆ. ಅನ್ ಲೈನ್ ವಹಿವಾಟು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಈ ಹಿಂದೆ ಮಾರ್ಚ್ 2021ರಲ್ಲಿಯೂ ಭಾಸ್ಕರ್ ರಾವ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣ ಕೀಳುವ ಪ್ರಯತ್ನ ಮಾಡಿದ್ದರು.
(ವರದಿ: ಎಚ್.ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
