ಕನ್ನಡ ಸುದ್ದಿ  /  Karnataka  /  Bangalore News Bangalore Summer Water Tanker Mafia Dcm Dk Shivakumar To Hold Officials Meeting On Monday Mrt

Bangalore Water Issue: ಬೆಂಗಳೂರು ಟ್ಯಾಂಕರ್‌ ಮಾಫಿಯಾಕ್ಕೆ ಕಡಿವಾಣ, ಡಿಸಿಎಂ ಡಿಕೆಶಿ ಸಭೆ ಇಂದು

ಬೆಂಗಳೂರಿಗೆ ಬೇಸಿಗೆ ಮುನ್ನವೇ ನೀರಿನ ಬವಣೆ ಹೆಚ್ಚುವ ಹಿಂದೆ ಹಲವಾರು ಕಾರಣಗಳಿವೆ. ಅದರಲ್ಲೂ ಮಾಫಿಯಾ ನಿಯಂತ್ರಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದಾರೆ.(ವರದಿ:ಎಚ್.ಮಾರುತಿ, ಬೆಂಗಳೂರು)

ನೀರು ನಿರ್ವಹಣೆಗೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್‌ ಸೋಮವಾರ ಸಭೆ ಕರೆದಿದ್ದಾರೆ.
ನೀರು ನಿರ್ವಹಣೆಗೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್‌ ಸೋಮವಾರ ಸಭೆ ಕರೆದಿದ್ದಾರೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತದೆ. ನಗರದ ಒಂದು ಕೋಟಿ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡಿರುವ ಹಾಗಿದೆ. ತೀವ್ರಗೊಳ್ಳಲು ಟ್ಯಾಂಕರ್ ಮಾಫಿಯಾದ ಕೈವಾಡ ಇದೆ ಎಂಬ ಆರೋಪಿಗಳು ಕೇಳಿ ಬರುತ್ತಿವೆ. ಕೆಲವು ಪ್ರದೇಶಗಳ ಟ್ಯಾಂಕರ್ ನೀರಿನ ದರ ಕೇಳಿದರೆ ಇದು ನಿಜ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ವಿಚಾರದಲ್ಲಿ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿರುವ ಹಾಗಿದ್ದು, ಟ್ಯಾಂಕರ್ ಗಳನ್ನು ಮತ್ತಷ್ಟು ನಿಯಂತ್ರಣಕ್ಕೆ ಒಳಪಡಿಸಲು ಮುಂದಾಗಿದೆ.

ಬೆಂಗಳೂರಿನ ನೀರಿನ ಅಭಾವ ನೀಗಿಸಲು ಕೊಳವೆ ಬಾವಿಗಳಿಂದ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಡಿಕೆಶಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಸಂಬಂಧ ಪಟ್ಟ ಇಲಾಖೆಗಳ ಸಭೆ ಕರೆದಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ)ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಪ್ರತಿದಿನ ಸಭೆ ನಡೆಸುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಕುಡಿಯುವ ನೀರಿನ ಮಾಫಿಯಾ

ನಿಯಂತ್ರಿಸಲು ಕೊಳವೆ ಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳು ಮಾ.7ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವ ನೀಗಿಸುವುದಾಗಿ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಉಪ ಮುಖ್ಯಮಂತ್ರಿಗಳ ಅನುದಾನದಿಂದ ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ. ಒಂದು ವೇಳೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ.

ಬೆಂಗಳೂರಿನಲ್ಲಿ ಈ ಮಟ್ಟಕ್ಕೆ ನೀರಿನ ಸಮಸ್ಯೆ ಉಂಟಾಗಲು ನೀರಿನ ಜೀವಸೆಲೆಗಳಾದ ಕೆರೆಗಳನ್ನು ನುಂಗಿ ನೀರು ಕುಡಿದಿರುವುದು ಮೊದಲ ಕಾರಣ.

ಕೆರೆ ಒತ್ತುವರಿ

ಕೆರೆಗಳನ್ನು ಒತ್ತುವರಿ ಮಾಡುವಲ್ಲಿ ಬಿಬಿಎಂಪಿ, ಬಿಡಿಎ ಸೇರಿದಂತೆ ಸರ್ಕಾರವೇ ಮೊದಲ ಸ್ಥಾನದಲ್ಲಿದೆ. ಸರ್ಕಾರದ ಪರೋಕ್ಷ ಬೆಂಬಲದಿಂದ ಭೂಗಳ್ಳರು ಎರಡನೇ ಸ್ಥಾನದಲ್ಲಿದ್ದಾರೆ. ಹತ್ತಲ್ಲ, ಇಪ್ಪತ್ತಲ್ಲ, ನೂರಾರು ಕೆರೆಗಳನ್ನು ಇಲ್ಲವಾಗಿಸಿ ಲೇ ಔಟ್ ಮತ್ತು ಗಗನಚುಂಬಿ ಅಪಾರ್ಟ್ ಮೆಂಟ್ ಗಳು ತಲೆ ಎತ್ತಿವೆ. ಇದೇ ಕಾರಣಕ್ಕೆ ಅಂತರ್ಜಲ ಮಟ್ಟ ಕುಸಿದಿದೆ.

ಇದುವರೆಗೂ ಬಿಬಿಎಂಪಿ ಕೆರೆಗಳ ಪುನರುಜ್ಜೀವನಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಿಂದ ಬೆರಳೆಣಿಕೆಯಷ್ಟು ಕೆರೆಗಳನ್ನು ಸಂರಕ್ಷಿಸುವ ಪ್ರಯತ್ನ ಮಾಡಲಾಗಿದೆ ಯಾದರೂ ಅದು ಅವೈಜ್ಞಾನಿಕ ರೀತಿಯಲ್ಲಿದ್ದು ತಂತಿ ಬೇಲಿ ಹಾಕಲು ಮಾತ್ರ ಸೀಮಿತವಾಗಿದೆ. ಕೆರೆಗಳ ಉದ್ದೇಶ ಏನು ಎನ್ನುವುದೇ ಸರ್ಕಾರಕ್ಕೆ ಅರ್ಥವಾಗಿಲ್ಲ. ಮಳೆ ನೀರು ಕೊಯ್ಲು, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಪ್ರವಾಹ ನಿಯಂತ್ರಣ ಆಗಬೇಕು. ಆದರೆ ಕೆರೆಗಳು ಎಂದರೆ ಮನರಂಜನೆಯ ತಾಣವಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕೋಟಿ ಕೋಟಿ ಖರ್ಚು ಮಾಡಿದರೂ ಯಾವುದೇ ಕೆರೆಯು ತನ್ನ ಮೂಲ ಸ್ವರೂಪಕ್ಕೆ ಬಂದಿಲ್ಲ. ಕೊಳಚೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯುತ್ತಿರುವುದು ಅಂತರ್ಜಲ ಮಟ್ಟ ಹೆಚ್ಚದಿರಲು ಪ್ರಮುಖ ಕಾರಣವಾಗಿದೆ ಎನ್ನುವ ಮಾಹಿತಿ ಇದ್ದು, ಇದಕ್ಕೆ ದೀರ್ಘಕಾಲಿನ ಪರಿಹಾರಗಳನ್ನು ರೂಪಿಸಬೇಕಿದೆಎನ್ನುವುದು ತಜ್ಞರ ಸಲಹೆ.

(ವರದಿ:ಎಚ್.ಮಾರುತಿ, ಬೆಂಗಳೂರು)

ವಿಭಾಗ