Bangalore News: ಬೆಂಗಳೂರು ಉದ್ಯಮಿ ಪುತ್ರಿ ಪ್ರೇಮಕಥನ; ಮನೆಯಲ್ಲಿದ್ದ1 ಕೋಟಿ ರೂ. ಜತೆ ಪರಾರಿ
ಬೆಂಗಳೂರಿನಲ್ಲಿ ಉದ್ಯಮಿ ಪುತ್ರಿ ಪ್ರೇಮಿ ಜತೆಗೆ ಪರಾರಿಯಾಗುವಾಗ ಒಂದು ಕೋಟಿ ರೂ. ನಗದು ಹಣ ತೆಗೆದುಕೊಂಡು ಹೋಗಿರುವ ಕುರಿತು ದೂರು ದಾಖಲಾಗಿದೆ.ವರದೊ: ಎಚ್. ಮಾರುತಿ. ಬೆಂಗಳೂರು
ಬೆಂಗಳೂರು: ತಮ್ಮ ಪುತ್ರಿ ತನ್ನ ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಹೋಗುವುದಕ್ಕೂ ಮುನ್ನ ಮನೆಯಲ್ಲಿದ್ದ ಸುಮಾರು 1 ಕೋಟಿ ರೂಪಾಯಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಬೆಂಗಳೂರಿನ ಜವಳಿ ಉದ್ಯಮಿ ರಾಮಮೂತಿ(ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಪುತ್ರಿ 19 ವರ್ಷದ ನೇತ್ರಾ (ಹೆಸರು ಬದಲಾಯಿಸಲಾಗಿದೆ) ತನ್ನ ಪ್ರಿಯಕರ 29 ವಷದ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಜೊತೆ ಓಡಿ ಹೋಗುವಾಗ ಮನೆಯಲ್ಲಿದ್ದ 1 ಕೋಟಿ ರೂ.ಗಳನ್ನು ತೆಗದುಕೊಂಡು ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 21 ರಂದು ರಾತ್ರಿ ನೇತ್ರಾ ಮಲಗಲು ತನ್ನ ಕೋಣೆಗೆ ಹೋಗಿದ್ದೇ ಕೊನೆ. ಮರು ದಿನ ಬೆಳಗ್ಗೆ 5 ಗಂಟೆಯ ವೇಳೆಗೆ ಆಕೆ ಮನೆಯಲ್ಲಿ ಇಲ್ಲ ಎನ್ನುವುದು ಖಚಿತವಾಗಿತ್ತು. ಎಲ್ಲಾ ಕಡೆ ಹುಡುಕಿದರೂ ತಮ್ಮ ಪುತ್ರಿಯ ಸುಳಿವು ಪತ್ತೆಯಾಗಲಿಲ್ಲ.
ಸಂಬಂಧಿಕರು ಮತ್ತು ಸ್ನೇಹಿತರ ಮನೆಗೂ ಹೋಗಿರಲಿಲ್ಲ. ಆಕೆಯ ಸಹಪಾಠಿಗಳ ಬಳಿ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಅದೇ ದಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಕೆ ತನ್ನ ಪ್ರಿಯಕರ ರಾಜೇಶ್ ಜೊತೆ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮನೆಯಲ್ಲಿದ್ದ ನಗದು ಅಥವಾ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಪೋಷಕರನ್ನು ವಿಚಾರಿಸಿದರು. ಆದರೆ ಮನೆಯಲ್ಲಿದ್ದ ಚಿನ್ನಾಭರಣಗಳೆಲ್ಲವೂ ಹಾಗೆಯೇ ಇದ್ದವು. ರಾಜೇಶ್ ಜೊತೆ ನೇತ್ರಾ ವಿವಾಹವಾಗಿರುವುದಾಗಿ ಪೊಲೀಸರು ಖಚಿತಪಡಿಸಿದ್ದರು. ಆಕೆಗೆ 19 ವರ್ಷಗಳಾಗಿದ್ದು ವಿವಾಹ ಮಾಡಿಕೊಳ್ಳುವುದು ಆಕೆಯ ಸ್ವತಂತ್ರ ನಿರ್ಧಾರವಾಗಿದ್ದು ತಾವೇನೂ ಮಾಡುವ ಹಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ರಾಜೇಶ್ ನನ್ನು ಬಿಟ್ಟು ಬರುವಂತೆ ಆಕೆಗೆ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಪೋಷಕರಿಗೆ ತಿಳಿಸಿದ್ದರು. ಉದ್ಯಮಿ ರಾಮಮೂರ್ತಿ ಅವರು ತಮ್ಮ ಪುತ್ರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಮತ್ತು ಆಕೆಗೆ ಒಂದಿಷ್ಟೂ ಆಸ್ತಿ ನೀಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಅಗತ್ಯ ಬಿದ್ದಾಗ ಬಂದು ಸಹಿ ಮಾಡಬೇಕು ಎಂದು ಪೋಷಕರು ಹಾಕಿದ್ದ ಷರತ್ತಿಗೆ ಪುತ್ರಿ ನೇತ್ರಾ ಒಪ್ಪಿಕೊಂಡಿದ್ದರು.
ಏಪ್ರಿಲ್ 23ರಂದು ರಾಮಮೂರ್ತಿ ಅವರ ತಾಯಿಗೆ ಅರೋಗ್ಯ ಕೈ ಕೊಟ್ಟಿತ್ತು. ಆದ್ದರಿಂದ ಊರಿಗೆ ಹೋಗಲು ನಿಧರಿಸಿದ್ದರು. ಬಟ್ಟೆಗಳನ್ನು ಜೋಡಿಸಿಕೊಳ್ಳುವಾಗ ಮನೆಯ ಅಲ್ಮೇರಾದಲ್ಲಿದ್ದ 1 ಕೋಟಿ ರೂ. ಕಾಣೆಯಾಗಿತ್ತು. ಊರಿನಿಂದ ಮರಳಿದ ರಾಮಮೂರ್ತಿ ದಂಪತಿಗಳು ಪೊಲೀಸರಿಗೆ 1 ಕೋಟಿ ರೂಪಾಯಿ ನಾಪತ್ತೆಯಾಗಿದೆ. ಮಗಳು ನೇತ್ರಾ ತೆಗೆದುಕೊಂಡು ಹೋಗಿದ್ದಾಳೆ ಎಂದು ಮತ್ತೊಂದು ದೂರು ಸಲ್ಲಿಸಿದ್ದಾರೆ.
ಅಷ್ಟೊಂದು ಹಣವನ್ನು ಮನೆಯಲ್ಲಿಟ್ಟು ಕೊಳ್ಳುವುದು ಅಪರಾಧ ಎಂದು ಪೊಲೀಸರು ಹೇಳಿದಾಗ ಆಸ್ತಿಯೊಂದನ್ನು ಖರೀದಿ ಮಾಡಲು ಈ ಹಣವನ್ನು ಮನೆಯಲ್ಲಿಟ್ಟು ಕೋಮಡಿದ್ದಾಗಿ ರಾಮಮೂರ್ತಿ ಹೇಳಿದ್ದಾರೆ. ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)