Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ವೇಗವಾಗಿ ವಾಹನ ಚಲಾಯಿಸಿದರೆ ದಂಡ ವಿಧಿಸುವುದಾಗಿ ಬೆಂಗಳೂರು ಸಂಚಾರಿ ಪೊಲೀಸರು( Bangalore Traffic police) ಎಚ್ಚರಿಕೆ ನೀಡಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತಿ ವೇಗಕ್ಕೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಚಾಲಕರು ಅತಿಯಾದ ವೇಗದಲ್ಲಿ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅತಿಯಾದ ವೇಗವೇ ರಸ್ತೆ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿ ವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನುಹೊಂದಿವೆ. ಕಾನೂನು ಅಡಿಯಲ್ಲಿ ನಿಗದಿ ಪಡಿಸಲಾಗಿರುವ ಪ್ರತಿ ಗಂಟೆಗೆ 80 ಕಿ.ಮೀ ಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಅತಿ ವೇಗದ ಚಾಲನೆಯ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್; ಪರ್ಯಾಯ ಮಾರ್ಗ ಬಳಸಲು ಸೂಚನೆ
ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್ ಗಳನ್ನು ಅಳವಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿ.ಡಿ.ಎ) ಕಾಮಗಾರಿಯನ್ನು ಆರಂಭಿಸಿದ್ದು, ಈಗಾಗಲೇ ದಿ. 17.04.2024 ರಿಂದ ಕೆ.ಆರ್.ಪುರ ಲೂಪ್ ಸೇರುವ ಟ್ರ್ಯಾಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
2024 ಮೇ 14 ರಿಂದ ಕೆ.ಆರ್.ಪುರಂ ಕಡೆಯಿಂದ ಬರುವ ಲೂಪ್ ಹೆಬ್ಬಾಳ ಪ್ರೈಓವರ್ ನ ಮುಖ್ಯ ಟ್ರ್ಯಾಕ್‌ಗೆ ಸೇರಿಸುವ ಎರಡು ಲಿಂಕ್ ಸ್ಪ್ಯಾನ್ ಗಳನ್ನು ತೆಗೆದು ಹಾಕುತ್ತಿರುವುದರಿಂದ ರ್ಯಾಂಪ್ ಮತ್ತು ಮುಖ್ಯ ಟ್ರ್ಯಾಕ್‌ಗೆ ಸಂಪರ್ಕ ಇಲ್ಲದಾಗುವುದರಿಂದ ಯಾವುದೇ ರೀತಿಯ ವಾಹನ ಸಂಚಾರವು ಸಾಧ್ಯವಿರುವುದಿಲ್ಲ. ಆದ್ದರಿಂದ ಕಾಮಗಾರಿ ಮುಕ್ತಾಯವಾಗುವವರೆಗೆ ಸುಗಮ ಸಂಚಾರಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಮಾರ್ಗ ಹೇಗೆ
2024 ಮೇ 14 ರಿಂದ ಹೆಬ್ಬಾಳ ಫ್ಲೈ ಓವರ್‌ನ ಕೆ.ಆರ್. ಪುರಂ ಅಪ್-ರಾಂಪ್‌ನ್ನು ಮುಚ್ಚಲಾಗುತ್ತಿದ್ದು ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಮೇಲೆತುವೆ ಮೇಲೆ ನಿರ್ಬಂಧಿಸಲಾಗಿದೆ.
ಈ ರೀತಿ ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನಾಗವಾರ (ಔಟರ್ ರಿಂಗ್ ರಸ್ತೆ) ಕಡೆಯಿಂದ ಬೆಂಗಳೂರು ನಗರದೊಳಗೆ ಮೇಸ್ತ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು ಹೆಬ್ಬಾಳ ಸರ್ಕಲ್‌ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೇಹಳ್ಳಿ ಜಂಕ್ಷನ್ ಬಳಿ ಯೂಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈ ಓವರ್‌ನ ರ್ಯಾಂಪ್ ಮೂಲಕ ಬೆಂಗಳೂರು ನಗರದ ಕಡೆಗೆ ಚಲಿಸಬಹುದಾಗಿದೆ.
ಕೆ.ಆರ್. ಪುರಂ ಮತ್ತು ನಾಗವಾರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳು ಐ.ಓ.ಸಿ-ಮುಕುಂದ ಥಿಯೇಟರ್ ರಸ್ತೆ ; ಲಿಂಗರಾಜಪುರ ಮೇಲ್ಲೇತುವೆ ಮಾರ್ಗ ಮತ್ತು ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ಸಂಚರಿಸಬಹುದಾಗಿದೆ.
ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿ.ಕೆ.ವಿ.ಕೆ-ಜಕ್ಕೂರು ರಸ್ತೆ ಮೂಲಕ ಬೆಂಗಳೂರು ನಗರ ಪ್ರವೇಶಿಸಬಹುದಾಗಿದೆ. ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈ ಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್. ಸರ್ಕಲ್ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದಾಗಿದೆ.
ಕೆ.ಆರ್.ಪುರಂ, ಹೆಣ್ಣೂರು ಹೆಚ್.ಆರ್.ಬಿ.ಆರ್. ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು -ಬಾಗಲೂರು ರಸ್ತೆಯ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
(ವರದಿ:ಎಚ್. ಮಾರುತಿ. ಬೆಂಗಳೂರು)