ಕನ್ನಡ ಸುದ್ದಿ  /  Karnataka  /  Bangalore News Bangalore Uber India Give 1crore Bill For Travel Of Just 6 Km Hyderabad Passenger Post Viral Mrt

Viral News: ಬೆಂಗಳೂರು ಉಬರ್‌ ಆಟೋದ ಪ್ರಯಾಣಕ್ಕೆ ಬಂದ ಬಿಲ್‌ ಎಷ್ಟಿರಬಹುದು, 1 ಕೋಟಿ ರೂ. !

Bangalore Uber: ಉಬರ್‌ ಆಟೋ ಬಳಸಿ ಬೆಂಗಳೂರಿನಲ್ಲಿ ಪ್ರಯಾಣಿಸಿದ ಹೈದ್ರಾಬಾದ್‌ ಮೂಲದ ವ್ಯಕ್ತಿಯೊಬ್ಬರಿಗೆ ಬಂದ ಬಿಲ್‌ ನೋಡಿ ಶಾಕ್‌ ಆಗುವ ಸನ್ನಿವೇಶ. ಅದರ ವಿವರ ಇಲ್ಲಿದೆವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿಉಬರ್‌ ಆಟೋ ಬಿಲ್‌ ಮೊತ್ತ ನೋಡಿ ಪ್ರಯಾಣಿಕರಿಗೆ ಶಾಕ್‌.
ಬೆಂಗಳೂರಿನಲ್ಲಿಉಬರ್‌ ಆಟೋ ಬಿಲ್‌ ಮೊತ್ತ ನೋಡಿ ಪ್ರಯಾಣಿಕರಿಗೆ ಶಾಕ್‌.

ಬೆಂಗಳೂರು: ಆಟೋದಲ್ಲಿ ಇಡೀ ಬೆಂಗಳೂರು ಸುತ್ತಿದರೆ ಕೆಲವು ಸಾವಿರ ರೂಪಾಯಿಗಳಾಗಬಹುದು. ದಿನವಿಡೀ ಆಟೋದಲ್ಲಿ ಬೆಂಗಳೂರು ಮಹಾನಗರವನ್ನು ಸುತ್ತಿದರೂ ಲಕ್ಷ ರೂ. ಕೂಡ ದಾಟುವುದಿಲ್ಲ. ಆದರೆ ಐದಾರು ಕಿಮೀ ಆಟೋ ಪ್ರಯಾಣಕ್ಕೆ ಉಬರ್( Uber) ವಿಧಿಸಿ ಬಿಲ್‌ ಎಷ್ಟಿರಬಹುದು ಎಂದು ಒಮ್ಮೆ ಊಹಿಸಿ. ಅದು ಬರೋಬ್ಬರಿ 1 ಕೋಟಿ ರೂ. ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರ 200 ರೂ.ಗಳ ಆಟೋ ಪ್ರಯಾಣಕ್ಕೆ ಉಬರ್ 1 ಕೋಟಿ ರೂಪಾಯಿ ಬಿಲ್ ನೀಡಿ ಅಚ್ಚರಿಗೆ ದೂಡಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ. ಅಷ್ಟೇ ಅಲ್ಲದೇ ನೆಟ್ಟಿಗರು ಇಂತಯ ಅಚಾತುರ್ಯಕ್ಕೆ ತಮ್ಮದೇ ರೀತಿಯಲ್ಲಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ನೊಯ್ಡಾದಲ್ಲಿ ಆಟೋ ಪ್ರಯಾಣಕ್ಕೆ 7 ಕೋಟಿ ರೂಪಾಯಿ ಬಿಲ್ ಮಾಡಿದ್ದ ಘಟನೆ ಮರೆಯುವ ಮುನ್ನವೇ ಬೆಂಗಳೂರಿನಲ್ಲಿಯೂ ಅಂತಹುದೇ ಪ್ರಕರಣವೊಂದು ವರದಿಯಾಗಿದೆ. ಉಬರ್ ಈ ಬೃಹತ್ ಮತ್ತು ದುಬಾರಿ ದರವನ್ನು ವಿಧಿಸಿದೆ ಎಂದು ಬ್ಲಾಗರ್ ಒಬ್ಬರು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

ಇದು ಹೈದರಾಬಾದ್ ಮೂಲದ ಶ್ರೀರಾಜ್ ನಿಲೇಶ್ ಅವರು ಈ ದುಬಾರಿ ದರದ ಕಥೆಯ ವ್ಯಥೆಯನ್ನು ಇನ್ ಸ್ಟಾಗ್ರಾಂ ನಲ್ಲಿ ಬರದುಕೊಂಡಿದ್ದಾರೆ. ನಾನು ಮತ್ತು ನನ್ನ ಪತ್ನಿ ಬೆಂಗಳೂರಿಗೆ ಆಗಮಿಸಿದ್ದೆವು. ಉಬರ್ ಆಪ್ ಮೂಲಕ ಆಟೋ ಬುಕ್ ಮಾಡಿದ್ದೆವು. ಅದೇನೂ ದೂರದ ಪ್ರಯಾಣವಲ್ಲ. ಕೆ.ಆರ್.ಪುರಂನ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲದವರೆಗೆ ಮಾತ್ರ!

ಆರಂಭದಲ್ಲಿ ಕೇವಲ 207 ರೂಪಾಯಿ ಮಾತ್ರ ಎಂದು ಬಿಲ್ ನಲ್ಲಿ ತೋರಿಸಲಾಗಿತ್ತು. ನಮ್ಮ ಸ್ಥಳವನ್ನು ತಲುಪಿದ ನಂತರ ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸಲು ಹೋದಾಗ 1,03.11,055 ರೂಪಾಯಿಗಳ ಬಿಲ್ ನಮ್ಮನ್ನು ತಲುಪಿತ್ತು ಎಂದು ಅಲವತ್ತುಕೊಂಡಿದ್ದಾರೆ.

ತಂತ್ರಜ್ಞಾನ ಸಾಕಷ್ಟು ಅಭಿವೃದ್ದಿ ಹೊಂದಿರುವ ಆಧುನಿಕ ಯುಗದಲ್ಲಿ ಇದೆಂತಹ ಬಿಲ್ ವ್ಯವಸ್ಥೆ! ಗ್ರಾಹಕರ ಸೇವಾ ನಂಬರ್ ಗೆ ಕರೆ ಮಾಡಿದರೆ ಅಲ್ಲಿ ಯಾರೂ ಸ್ಪಂದಿಸಲಿಲ್ಲ. ಎರಡು ಗಂಟೆಯ ಕಾಲ ಆಟೋ ನಿಲ್ಲಿಸಿಕೊಂಡು ಪ್ರಯತ್ನ ಮಾಡಿದರೂ ಉಬರ್ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಇಷ್ಟೊಂದು ಬಿಲ್ ಕಳುಹಿಸಲಾಗಿದೆ ಎಂದರೆ ಯಾರೂ ನಂಬುವುದಿಲ್ಲ. ಹಾಗಾಗಿ ನಾನು ಈ ವಿಡಿಯೋ ಅಪ್ ಲೋಡ್ ಮಾಡುತ್ತಿರುವುದಾಗಿ ಶ್ರೀರಾಜ್ ನಿಲೇಶ್ ಹೇಳಿದ್ದಾರೆ. ಕಂಪನಿಗಳ ಇಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಅವರು ಆಕ್ರೋಶವನ್ನು ಹೊರಹಾಕಿದ್ದಾರೆ.

ಬೆಂಗಳೂರಿನ ಈ ಘಟನೆಗೂ ಮುನ್ನ ನೊಯ್ಡಾದಲ್ಲಿಯೂ ಇಂತಹುದೇ ಪ್ರಕರಣವೊಂದು ವರದಿಯಾಗಿತ್ತು. ದೀಪಕ್ ತೆಂಗೂರಿಯಾ ಎಂಬುವರು ತಮಗಾದ ಕೆಟ್ಟ ಅನುಭವವನ್ನು

ಹಂಚಿಕೊಂಡಿದ್ದರು. ನಮಗೆ ಕೆಲವೇ ನಿಮಿಷಗಳ ಪ್ರಯಾಣಕ್ಕೆ ಬರೋಬ್ಬರಿ 7.66 ಕೋಟಿ ರೂಪಾಯಿ ಬಿಲ್ ತಲುಪಿತ್ತು. ಜೊತೆಗೆ ಕಾಯುವಿಕೆ ಚಾರ್ಜ್ ಎಂದು 5,99,09,189 ರೂಪಾಯಿ ಬಿಲ್ ಕಳುಹಿಸಿತ್ತು. ಇನ್ನು ನೋಡಿ ಶಾಕ್ ಗೆ ಒಳಗಾಗಿದ್ದಾಗಿ ಅವರು ಬರೆದುಕೊಂಡಿದ್ದರು. ಈ ಪ್ರಯಾಣಕ್ಕೆ ಹೆಚ್ಚೆಂದರೆ 62 ರೂಪಾಯಿ ತಗುಲುತ್ತದೆ. ಆದರೆ ಕೋಟಿ ಕೋಟಿ ರೂಪಾಯಿ ಬಿಲ್ ನೀಡಿದರೆ ಪರಿಸ್ಥಿತಿ ಹೇಗಿರಬೇಡ ಎಂದು ಅವರು ಪ್ರಶ್ನಿಸಿದ್ದರು. ಅವರ ಈ ಕೆಟ್ಟ ಅನುಭವನ್ನು ದೀಪಕ್ ಅವರ ಸ್ನೇಹಿತ ಆಶಿಶ್ ಮಿಶ್ರಾ ಎಕ್ಸ್ ನಲ್ಲಿ ಹಂಚಿಕೊಂಡಿದ್ದರು.

ಇದನ್ನು ವೀಕ್ಷಿಸಿದ ಹಲವರು ಉಬರ್‌ನ ಈ ನಡೆಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಹೀಗೆ ಕೋಟಿಗಟ್ಟಲೇ ಬಿಲ್‌ ನೀಡುವುದು ಎಂದರೆ ಹೇಗೆ, ಯಾಕೆ ಹೀಗೆ ಮಾಡುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಜತೆಗೆ ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಆದರೆ ಈ ವಿಚಾರದಲ್ಲಿ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ಉಬರ್ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಮತ್ತು ಗ್ರಾಹಕರ ಕೆಟ್ಟ ಅನುಭವಗಳು ವೈರಲ್ ಆದ ನಂತರ ಕ್ಷಮೆ ಯಾಚಿಸಿದೆ. ಉಬರ್ ನ ಗ್ರಾಹಕರ ಸೇವಾ ವಿಭಾಗ ಈ ಅಚಾತುರ್ಯಕ್ಕೆ ಕ್ಷಮೆ ಯಾಚಿಸಿದ್ದು, ಇದು ಹೇಗೆ ಸಂಭವಿಸಿತು ಎಂದು ತನಿಖೆ ನಡೆಸಿ ತಪ್ಪನ್ನು ಸರಿಪಡಿಸುವುದಾಗಿ ತಿಳಿಸಿದೆ.

(ವರದಿ: ಎಚ್‌.ಮಾರುತಿ, ಬೆಂಗಳೂರು)