Bangalore News: ನೀರಿನ ಸೋರಿಕೆ ತಡೆಯಲು ಕಾಮಗಾರಿ, ಹಳೆಯ ಪೈಪ್‌ಲೈನ್ ಬದಲಾವಣೆಗೆ ವರದಿ ನೀಡಲು ಜಲಮಂಡಳಿ ಅಧ್ಯಕ್ಷರ ಸೂಚನೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿರುವ ಸೋರಿಕೆ ತಡೆಗಟ್ಟುವಿಕೆ ಹಾಗೂ ಹಳೆ ಪೈಪ್‌ಲೈನ್ ಬದಲಾವಣೆಗೆ ಸಂಬಂಧಿಸಿದಂತೆ ಜಲಮಂಡಳಿ ಅಧ್ಯಕ್ಷರು ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುವಾಗ ಉಂಟಾಗುವ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನೀರಿನ ಕೊರತೆಗೆ ಸೋರಿಕೆಯೂ ಕಾರಣವಾಗಿದ್ದು, ಸೋರಿಕೆಯನ್ನು ತಡೆಗಟ್ಟಿದರೆ ಭಾರಿ ಪ್ರಮಾಣದಲ್ಲಿ ನೀರಿನ ಉಳಿತಾಯ ಆಗಲಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ಅಧ್ಯಕ್ಷರು ಅಧಿಕಾರಿಗಳು ಮತ್ತು ಇಂಜಿನಿಯರ್ ಗಳ ಜೊತೆ ಸಭೆ ನಡೆಸಿದರು.
ನೀರು ಸೋರಿಕೆ ಕುರಿತು ಏಪ್ರಿಲ್ 10, ಬುಧವಾರದಂದು ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು ಸೋರಿಕೆಯನ್ನು ತಡೆಯಲು ಅಗತ್ಯ ಇರುವ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಲಮಂಡಳಿಯಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಆಗುವ ಯಾವ ಮಾರ್ಗಗಳಲ್ಲಿ ಸೋರಿಕೆ ಇದೆ. ಇದಕ್ಕೆ ಕಾರಣಗಳೇನು, ಸೋರಿಕೆ ತಡೆಗಟ್ಟಲು ಕೈಗೊಂಡ ಕ್ರಮಗಳೇನು. ಸೋರಿಕೆ ತಡೆಗಟ್ಟಲು ಏನೇನು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ವರದಿಯನ್ನು ನೀಡಬೇಕು. ಇದಕ್ಕೆ ತಗುಲುವ ವೆಚ್ಚದ ವಿವರಗಳನ್ನು ವರದಿಯಲ್ಲಿ ಒದಗಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.
ಜಲಮಂಡಳಿಯ ಪೈಪ್‌ಲೈನ್ ನಲ್ಲಿ ಈಗ ಆಗುತ್ತಿರುವ ಸೋರಿಕೆಯ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು.
ಈಗಾಗಲೇ ಜಲಮಂಡಳಿಯ ವತಿಯಿಂದ ಸಮಸ್ಯೆ ಇರುವಂತಹ ಪೈಪ್‌ಲೈನ್ ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಪೈಪ್‌ಲೈನ್‌ಗಳನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲದಷ್ಟು ಕಟ್ಟಡಗಳ ನಿರ್ಮಾಣವಾಗಿದೆ. ಇನ್ನು ಕೆಲವೆಡೆ ಪೈಪ್‌ಗಳು ತುಂಬಾ ಹಳೆಯದಾಗಿದ್ದು ಅವುಗಳನ್ನು ಬದಲಾಯಿಸಲು ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಅಲ್ಲದೇ ವಿವರವಾದ ವರದಿಯನ್ನೂ ಸಲ್ಲಿಸುವುದಾಗಿ ಹೇಳಿದರು.
ಹಾಳಾಗಿರುವ ಪೈಪ್‌ಲೈನ್‌ಗಳಿಂದ ನೀರು ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನೀರು ತಡೆಗಟ್ಟಬಹುದಾದ ಕಾಮಗಾರಿಗಳನ್ನು ಕೈಗೊಂಡು ಬುಧವಾರ ವರದಿ ನೀಡುವಂತೆ ಸೂಚನೆ ನೀಡಿದರು.
ಗ್ರಾಹಕರಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡುವುದು ಜಲಮಂಡಳಿಯ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜಲಮಂಡಳಿ ತಗೆದುಕೊಳ್ಳುತ್ತಿದೆ. ಯಾವುದೇ ಭಾಗದಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಜಲಮಂಡಳಿಗೆ ದೂರು ನೀಡಿದರೆ ಕ್ಷಿಪ್ರವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ಮತ್ತೊಮ್ಮೆ ಭರವಸೆ ನೀಡಿದರು.
(ವರದಿ: ಎಚ್.ಮಾರುತಿ. ಬೆಂಗಳೂರು)
ವಿಭಾಗ