Bangalore Water Tariff: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಜಲಮಂಡಳಿ ಸಿದ್ದತೆ, ಸಭೆ ನಡೆಸಿದ ಡಿಕೆಶಿ, ಜುಲೈನಲ್ಲಿ ಹೊಸ ದರ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Water Tariff: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಜಲಮಂಡಳಿ ಸಿದ್ದತೆ, ಸಭೆ ನಡೆಸಿದ ಡಿಕೆಶಿ, ಜುಲೈನಲ್ಲಿ ಹೊಸ ದರ

Bangalore Water Tariff: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಜಲಮಂಡಳಿ ಸಿದ್ದತೆ, ಸಭೆ ನಡೆಸಿದ ಡಿಕೆಶಿ, ಜುಲೈನಲ್ಲಿ ಹೊಸ ದರ

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ ಜಲಮಂಡಳಿ ಮೇಲೆ ಆಗುವ ಹೊರೆ ತಪ್ಪಿಸಲು ದರ ಏರಿಕೆ ಮಾಡುವ ಪ್ರಸ್ತಾವ ನೀಡಲಾಗಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಸಲು ಜಲಮಂಡಳಿ ಸಿದ್ದತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಸಲು ಜಲಮಂಡಳಿ ಸಿದ್ದತೆ ಮಾಡಿಕೊಳ್ಳುತ್ತಿದೆ.

ಬೆಂಗಳೂರು: ಇಂಧನ ಬೆಲೆ ಏರಿಕೆಯ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಳೆದ 14 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ಈಗ ದರ ಏರಿಕೆ ಅನಿವಾರ್ಯವಾಗಿದೆ. ಬೆಂಗಳುರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಿತದೃಷ್ಟಿಯಿಂದ ನೀರಿನ ಶುಲ್ಕ ಅನಿವಾರ್ಯ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ನೀರಿನ ದರ ಏರಿಕೆ ಮಾಡದಿರುವುದು ಒಂದು ಕಡೆಯಾದರೆ ಜಲಮಂಡಳಿಯ ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಮಂಡಳಿಯ ಆರ್ಥಿಕ ನಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಜಲಮಂಡಳಿ ನೌಕರರಿಗೆ ಸಂಬಳ ಕೊಡಲು ಕಷ್ಟವಾಗುತ್ತಿದೆ ಮತ್ತು ವಿದ್ಯುತ್‌ ಬಿಲ್‌ ಕಟ್ಟಲೂ ಹಣದ ಕೊರತೆ ಉಂಟಾಗಿದೆ ಎಂದು ಶಿವಕುಮಾರ್‌ ಅಳಲು ತೋಡಿಕೊಂಡಿದ್ದಾರೆ.

ಕುಡಿಯುವ ನೀರು ಬೇಕೆಂದರೆ ದರ ಹೆಚ್ಚಳ ಮಾಡಬೇಕಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಕಾವೇರಿ 5ನೇ ಹಂತದ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಜಲ ಮಂಡಳಿ ಕೆಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಿಗೆ ಸಾಲ ನೀಡಲು ಯಾವುದೇ ಬ್ಯಾಂಕ್‌ ಮುಂದೆ ಬರುತ್ತಿಲ್ಲ. ಇಂತಹ ವಿಷಯಗಳನ್ನು ರಾಜಕೀಯಗೊಳಿಸುತ್ತಿರುವುದರಿಂದ ವಿಶ್ವಬ್ಯಾಂಕ್‌ ಸಾಲ ನೀಡಲು ಹಿಂದೇಟು ಹಾಕುತ್ತಿದೆ. ಜಪಾನ್‌ ದೇಶದ ಜೈಕಾ ಬ್ಯಾಂಕ್‌ ಜಲ ಮಂಡಲಿಯು ಕನಿಷ್ಠ ಗುರಿಯನ್ನೂ ತಲುಪಲು ವಿಫಲವಾಗಿದೆ ಎಂಬ ಕಾರಣವನ್ನು ಮುಂದೊಡ್ಡಿ ನೆರವು ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಬೆಲೆ ಏರಿಕೆ ಅನಿವಾರ್ಯ. ಸಾರ್ವಜನಿಕರು ಪಾವತಿಸುವ ನೀರಿನ ಬಿಲ್‌, ನೌಕರರ ಸಂಬಳ ಮತ್ತು ವಿದ್ಯುತ್‌ ಬಿಲ್‌ ಗೂ ಸಾಕಾಗುತ್ತಿಲ್ಲ. ಶುಲ್ಕ ಹೆಚ್ಚಳದಿಂದ ಶೇ.70 ರಷ್ಟಾದರೂ ವಿದ್ಯುತ್‌ ಬಿಲ್‌ ಮತ್ತು ಕಾರ್ಮಿಕರ ವೇತನವನ್ನು ಸರಿದೂಗಿಸಲು ಪ್ರಯ್ನಪಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಗೃಹಬಳಕೆ, ವಾಣಿಜ್ಯ ಸೇರಿದಂತೆ ಎಲ್ಲ ರೀತಿಯ ನೀರು ಪೂರೈಕೆಗೆ ಶೇ.40ರಷ್ಟು ಹೆಚ್ಚಳ ಮಾಡಲು ಜಲ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಶೇ.20-25ರಷ್ಟು ಶುಲ್ಕ ಹೆಚ್ಚಿಸುವ ಸಾಧ್ಯತೆಗಳಿವೆ. ಕಳೆದ ವರ್ಷವೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಗೃಹ ಬಳಕೆಗೆ ಶೇ.10 ಮತ್ತು ವಾಣಿಜ್ಯ ಬಳಕೆಗೆ ಶೇ.15ರಷ್ಟು ಕುಡಿಯುವ ನೀರಿನ ಶುಲ್ಕ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಸರ್ಕಾರ ಹೆಚ್ಚಳ ಮಾಡುವ ಗೋಜಿಗೆ ಹೋಗಿರಲಿಲ್ಲ.

ನೀರಿನ ಬೆಲೆ ಏರಿಕೆಗೆ ಸಾರ್ವಜನಿಕರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಬೆಲೆ ಏರಿಕೆ ಮಾಡಿದರೆ ಮಧ್ಯಮ ಮತ್ತು ಬಡವರು ಬೆಂಗಳೂರಿನಲ್ಲಿ ಬದುಕು ನಡೆಸುವುದಾದರೂ ಹೇಗೆ ಎಂದುಪ್ರಶ್ನಿಸುತ್ತಿದ್ದಾರೆ.

ಗ್ಯಾರಂಟಿಗಳ ಹೆಸರಿನಲ್ಲಿ ಸರಕಾರ ಸುಲಿಗೆ ಮಾಡಲು ಹೊರಟಿದೆ. ಒಂದು ಕಡೆ ಬೆಲೆ ಹೆಚ್ಚಿಸುತ್ತಾ ಹೋಗುವುದು, ಮತ್ತೊಂದು ಕಡೆ ಉಚಿತ ಗ್ಯಾರಂಟಿ ನೀಡುವುದದರೂ ಏಕೆ? ಬದಲಾಗಿ ಗ್ಯಾರಂಟಿಗಳನ್ನು ರದ್ದುಪಡಿಸಿ ಬೆಲೆ ಇಳಿಸಿ. ಆಗಲಾದರೂ ನೆಮ್ಮದಿಯಿಂದ ಬದುಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪರಿಷ್ಕೃತ ದರ ಯಾವಾಗಿನಿಂದ ಜಾರಿಗೆ ಬರಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಬೆಲೆ ಏರಿಕೆಯಂತೂ ನಿಶ್ಚಿತ. ಜುಲೈನಲ್ಲಿ ಇದು ಜಾರಿಯಾಗಬಹುದು ಎಂದು ಜಲ ಮಂಡಳಿ ಮೂಲಗಳು ತಿಳಿಸಿವೆ.

( ವರದಿ: ಎಚ್.ಮಾರುತಿ,ಬೆಂಗಳೂರು)

Whats_app_banner