ಕನ್ನಡ ಸುದ್ದಿ  /  Karnataka  /  Bangalore News Bangalore Water Crisis Industrialist Anand Mahindra Shares Video Of Ac Water Harvesting Tips Pyg

AC Water Harvesting: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿಗೆ ಎಸಿ ನೀರು ಕೊಯ್ಲು ಹೇಗೆ?, ಉದ್ಯಮಿ ಆನಂದ್ ಮಹೀಂದ್ರಾ ನೀಡಿದ್ದಾರೆ ಸಲಹೆ

ನೀರು ಅತ್ಯಮೂಲ್ಯ. ಹಲವು ರೂಪದಲ್ಲಿ ನಾವು ನೀರು ಉಳಿಸಬಹುದು. ಹವಾ ನಿಯಂತ್ರಣ ಯಂತ್ರದಲ್ಲಿನ ನೀರನ್ನು ಕೊಯ್ಲು ಮಾಡುವ ಕುರಿತು ಉದ್ಯಮಿ ಆನಂದ್‌ ಮಹೀಂದ್ರ ಸಲಹೆ ನೀಡಿದ್ದಾರೆ.(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)

ಆನಂದ್‌ ಮಹೀಂದ್ರ ಅವರು ಎಸಿ ಕೊಯ್ಲಿನ ಕುರಿತು ಸಲಹೆ ಕೊಟ್ಟಿದ್ದಾರೆ.
ಆನಂದ್‌ ಮಹೀಂದ್ರ ಅವರು ಎಸಿ ಕೊಯ್ಲಿನ ಕುರಿತು ಸಲಹೆ ಕೊಟ್ಟಿದ್ದಾರೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಮಿತಿ ಮೀಗಿ ಹೋಗಿರುವುದು ತಿಳಿದಿರುವ ವಿಚಾರ. ನೀರಿನ ಅಭಾವ ಎದುರಾಗುತ್ತಿದ್ದಂತೆ ಜನರು ಪರ್ಯಾಯ ಮಾರ್ಗಗಳ ಬಗ್ಗೆ ಜನ ಈಗ ಚಿಂತಿಸುತ್ತಿದ್ದಾರೆ. ನೀರಿನ ಮರುಬಳಕೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತದೆ. ಇದೀಗ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹವಾನಿಯಂತ್ರಣ ಯಂತ್ರಗಳಿಂದ ನೀರು ಮರುಸಂಸ್ಕರಿಸುವ ಬಗೆಗಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಹಲವರು ಈ ಮಾದರಿಯನ್ನು ಅಳವಡಿಸಿಕೊಳ್ಳುವ ಕುರಿತಾಗಿಯೂ ಪ್ರತಿಕ್ರಿಯೆಗಳನ್ನು ನೀಡಿದಾರೆ.

ಆನಂದ್ ಮಹೀಂದ್ರಾ ಅವರು ಎಕ್ಸ್ ನಲ್ಲಿ ಸಕ್ರಿಯರಾಗಿದ್ದಾರೆ. ಉಪಯುಕ್ತ, ಮಾಹಿತಿ ಇರುವಂತಹ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇಂಥದ್ದೇ ಒಂದು ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ನೀರು ಅತ್ಯಮೂಲ್ಯ ಸಂಪತ್ತು. ಅದನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಬರೆದು ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಎಸಿ ಕಂಡೆನ್ಸರ್‌ಗೆ ಸಂಪರ್ಕ ಹೊಂದಿರುವ ಪೈಪ್ ಮೂಲಕ ನೀರು ಹೊರಬರುತ್ತದೆ. ಇದನ್ನು ಗಿಡಗಳಿಗೆ ನೀರು ಸಿಂಪಡಿಸಲು, ಮನೆ ಒರೆಸಲು, ವಾಹನಗಳನ್ನು ತೊಳೆಯಲು ಮುಂತಾದವುಗಳಿಗೆ ಬಳಸಬಹುದು. ಹೀಗಾಗಿ ಎಸಿ ನೀರಿನ ಮರುಬಳಕೆ ಬಗ್ಗೆ ವಿಡಿಯೋದಲ್ಲಿ ಪ್ರಮುಖ ಸಂದೇಶವನ್ನು ಕೊಡಲಾಗಿದೆ.

ನೀರಿನ ಕೊರತೆಯಿರುವ ಬೆಂಗಳೂರಿನ ಜನರಿಗೆ ಇದು ಬಹಳ ಮುಖ್ಯವಾದ ಸಂದೇಶವಾಗಿದೆ. ಎಸಿ ನೀರನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದ್ದು, ಇದೊಂದು ವಿಶಿಷ್ಟ ವಿಧಾನವಾಗಿದೆ. ಈ ರೀತಿಯಾಗಿ ಮಾಡುವ ಮೂಲಕ ಸುಮಾರು 100 ಲೀಟರ್ ಎಸಿ ನೀರನ್ನು ಪೈಪ್‌ನಲ್ಲಿ ಸಂಗ್ರಹಿಸಬಹುದು ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.

ತಾಪಮಾನ ಏರಿಕೆಯಾಗಿರುವುದರಿಂದ ಸಹಜವಾಗಿ ಜನರು ಹವಾನಿಯಂತ್ರಣದತ್ತ ಮೊರೆ ಹೋಗುತ್ತಾರೆ. ಇದಕ್ಕೆ ಬಳಸುವ ನೀರನ್ನು ವ್ಯರ್ಥ ಮಾಡದೆ ಮರುಬಳಕೆ ಮಾಡಬಹುದು. ಹವಾನಿಯಂತ್ರಣದ ನೀರು ಬಟ್ಟಿ ಇಳಿಸಿದ ನೀರಿನಂತೆಯೇ ಇರುತ್ತದೆ. ನಗರದಲ್ಲಿ ಹನಿ ನೀರಿಗೂ ತತ್ವಾರವಿರುವುದರಿಂದ ನೀರನ್ನು ಮರುಸಂಸ್ಕರಿಸುವುದು ಉಪಯುಕ್ತವಾಗಿದೆ. ಹೀಗಾಗಿ ನೀರನ್ನು ಸಂಗ್ರಹಿಸಿ ಮರುಬಳಕೆ ಮಾಡಬಹುದು.ದೇಶದಲ್ಲಿ ಯಾರೆಲ್ಲಾ ಹವಾ ನಿಯಂತ್ರಣಗಳನ್ನು ಬಳಸುತ್ತಾರೋ ಅಲ್ಲೆಲ್ಲಾ ಇದು ಪ್ರಮಾಣಿತ ಸಾಧನವಾಗಬೇಕಾಗಿದೆ. ನೀರು ಅತ್ಯಮೂಲ್ಯ ಸಂಪತ್ತು. ಅದನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು ಎಂದು ಬರೆದಿದ್ದಾರೆ.

ಕರ್ನಾಟಕದ ರಾಜಧಾನಿ ಬೆಂಗಳೂರು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ದಶಕಗಳಲ್ಲಿ ಕಂಡೂ ಕೇಳರಿಯದ ಭೀಕರ ನೀರಿನ ಅಭಾವ ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಜನರು ನೀರಿನ ಕೊರತೆಯನ್ನು ನೀಗಿಸಲು ಮನೆಯಿಂದಲೇ ಕೆಲಸ ಮಾಡುವುದು, ಮಾಲ್‌ಗಳಲ್ಲಿ ಶೌಚಾಲಯಗಳನ್ನು ಬಳಸುವುದು, ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಮತ್ತು ಪರ್ಯಾಯ ದಿನಗಳಲ್ಲಿ ಸ್ನಾನ ಮಾಡುವುದು ಮುಂತಾದ ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ.\

ಸಂಕಷ್ಟ ತೋಡಿಕೊಂಡ ನಿವಾಸಿಗಳು

ನಮಗೆ ದಿನಕ್ಕೆ ನಾಲ್ಕು ಟ್ಯಾಂಕರ್‌ ನೀರು ಬೇಕಾಗುತ್ತವೆ. ಆದರೆ, ನಮಗೆ ಸಿಗುತ್ತಿರುವುದು ಒಂದು ಅಥವಾ ಎರಡು ಟ್ಯಾಂಕರ್ ಮಾತ್ರ. ಕಳೆದ ಎರಡು ಮೂರು ತಿಂಗಳಿಂದ ನಾವು ದೊಡ್ಡ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಬೆಂಗಳೂರಿನ ನಿವಾಸಿಯೊಬ್ಬರು ತಿಳಿಸಿದ್ದಾಗಿ ಎನ್ಡಿಟಿವಿ ವರದಿ ತಿಳಿಸಿದೆ.

ನಮಗೆ ಮಗುವಿದೆ. ದಿನನಿತ್ಯದ ಬಳಕೆಗೂ ನೀರು ಸಿಗದೇ ಇರುವುದು ತ್ರಾಸದಾಯಕವಾಗಿದೆ. ಟ್ಯಾಂಕರ್‌ಗಳು ಬರುತ್ತಿಲ್ಲ. ಸರಕಾರ ಬೆಲೆ ಇಳಿಸಿದರೂ ಬರುತ್ತಿಲ್ಲ. ಒಂದು ವೇಳೆ ಬಂದರೂ ಆ ನೀರು ಸಾಕಾಗುತ್ತಿಲ್ಲ. ಇದಕ್ಕೆ ಯಾವಾಗ ಪರಿಹಾರ ಸಿಗುತ್ತದೆ? ನಾವು ಸಾಮಾನ್ಯ ಜೀವನಕ್ಕೆ ಯಾವಾಗ ಮರಳುತ್ತೇವೆ ಎಂದು ತಮಗೆ ತೋಚದಂತಾಗಿದೆ ಎಂದು ಮತ್ತೊಬ್ಬರು ಬೆಂಗಳೂರು ನಿವಾಸಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)

ವಿಭಾಗ