Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ
ಬಿರುಬಿಸಿಲಿನಿಂದ ಬಳಲಿದ್ದ ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಸುರಿದ ಮಳೆ ಕೊಂಚ ನಿರಾಳತೆ ತಂದಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಬಹಳ ಅಪರೂಪಕ್ಕೆ ಗುಡುಗು ಸಿಡಿಲಿನ ಅಬ್ಬರ ಬೆಂಗಳೂರಿನ ಜನರ ಕಿವಿಗೆ ಬಿದ್ದಿದೆ. 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ಮಳೆಯಾಗಿಲ್ಲ. ಇದರ ಜೊತೆಗೆ ಬಿಸಿ ಗಾಳಿ ಜನರನ್ನು ಮತ್ತಷ್ಟು ಕಂಗೆಡಿಸಿತ್ತು. ಇಡೀ ವಾರ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇತ್ತು. ಹಗಲು ಮಾತ್ರವಲ್ಲ, ರಾತ್ರಿ ವೇಳೆಯೂ ತಾಪಮಾನ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ಹೆಚ್ಚೇ ಇದೆ. ಉದ್ಯಾನ ನಗರಿಯಲ್ಲಿ ಸಂಜೆ 6 ಗಂಟೆಗೆ ಅಲ್ಲಲ್ಲಿ ಮಳೆ ಆರಂಭವಾಯಿತು. ನಗರದ ಉತ್ತರ ಮತ್ತು ಕೇಂದ್ರ ಭಾಗದ ಪ್ರದೇಶಗಳಲ್ಲಿ ಮಳೆಯಾಗಿದೆ.
ಕಾದು ಕೆಂಡದಂತಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೆ ಕೊನೆಗೂ ವರುಣ ಕೃಪೆ ತೋರಿದ್ದಾನೆ. ಮೆಜೆಸ್ಟಿಕ್, ವೈಟ್ ಫೀಲ್ಡ್, ಕಲ್ಯಾಣ ನಗರ, ರಾಜರಾಜೇಶ್ವರಿ ನಗರ, ವಸಂತಪುರ, ಕುಮಾರಸ್ವಾಮಿ ಲೇಔಟ್, ಶ್ರೀನಗರ, ಗಿರಿನಗರ, ವಿಜಯನಗರ, ಟಿನ್ ಫ್ಯಾಕ್ಟರಿ, ಕೆ.ಆರ್‌ಪುರಂ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿದೆ.
ದಿಢೀರ್ ಮಳೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ನಗರದ ಇನ್ನೂ ಹಲವು ಕಡೆ ಮೋಡ ಕವಿದ ವಾತಾವರಣವಿದ್ದು, ಮತ್ತಷ್ಟು ಮಳೆಯಾಗುವ ಸೂಚನೆ ಇದೆ. ಬೆಂಗಳೂರಿನಲ್ಲಿ ಸತತ 160 ದಿನಗಳ ನಂತರ ಮಳೆಯಾಗಿದೆ.
ಸತತ ಐದು ತಿಂಗಳಿಂದ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಇಂದಿನ ಮಳೆ ಒಂದಿಷ್ಟು ನೆಮ್ಮದಿ ಮೂಡಿಸಿದೆ. ಕೆಲವು ಕಡೆ ಬಿರುಸಾಗಿ ಮಳೆಯಾಗಿದ್ದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಇದರಿಂದ ಬೆಂಗಳೂರು ಸ್ವಲ್ಪ ಮಟ್ಟಿಗೆ ಕೂಲ್ ಆಗಿದೆ.
ರಾತ್ರಿಯಾಗುತ್ತಿದ್ದಂತೆ ದಟ್ಟವಾದ ಮೋಡಗಳು ಆವರಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ರಾತ್ರಿ ವೇಳೆಗೆ ಜೋರು ಮಳೆಯಾಗುವ ಸಾಧ್ಯತೆಯಿದೆ. ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ಉಷ್ಣಾಂಶ 35 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಮೊದಲ ಮಳೆಗೆ ಯೋಗಾಸನ ಪಟು ಜಯರಾಮ್ ಕೃಷ್ಣನ್ ಎಂಬುವರು ಮಳೆಯಲ್ಲಿ ಯೋಗಾಸನ ಮಾಡಿ ಸ್ವಾಗತ ಕೋರಿದ್ದಾರೆ.
"ಎಲ್ಲಿ ಓಡುವಿರಿ ನಿಲ್ಲಿ ಮೊಡಗಳೇ ನಾಲ್ಕು ಹನಿಯ ಚೆಲ್ಲಿ; ದಿನ ದಿನವೂ ಕಾದೆ ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ" ಎಂದು ಜಿ ಎಸ್ ಎಸ್ ಅವರ ಪದ್ಯದ ಮೂಲಕ ಮಳೆಗೆ ಮತ್ತೊಮ್ಮೆ ನಾವೂ ಸ್ವಾಗತ ಕೋರಬೇಕಷ್ಟೇ ಎನ್ನುವುದು ಸ್ಥಳೀಯರ ನುಡಿ.
ಬೆಂಗಳೂರಿನಲ್ಲಿ 2024ರ ಏಪ್ರಿಲ್ ತಿಂಗಳು ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಶುಷ್ಕ ಏಪ್ರಿಲ್ ಎಂದು ಗುರುತಿಸಲ್ಪಟ್ಟಿದೆ. ಏಕೆಂದರೆ ನಗರದ ಭಾರತೀಯ ಹವಾಮಾನ ವೀಕ್ಷಣಾಲಯ (ಐಎಂಡಿ) ನಗರದಲ್ಲಿ ಯಾವುದೇ ಮಳೆಯನ್ನು ಕಂಡಿಲ್ಲ. ನಗರದಲ್ಲಿ ಹಿಂದಿನ ಏಪ್ರಿಲ್ ತಿಂಗಳಲ್ಲಿ ಶೂನ್ಯ ಮಳೆಯಾಗಿದೆ. ಎಂದು ಐಎಂಡಿ ಹಿರಿಯ ವಿಜ್ಞಾನಿ ಎ ಪ್ರಸಾದ್ ಹೇಳಿದ್ದರು.
ಇದಲ್ಲದೇ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಮೊದಲ ಬಾರಿಗೆ ಸೋಮವಾರ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ದಾಖಲಿಸಿದರೆ, ಉದ್ಯಾನನಗರಿ ಬೆಂಗಳೂರಿನಲ್ಲೂ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೇ ಏರಿಕೆಯಾಗುತ್ತಲೇ ಇದೆ. ಮೂರು ದಿನದಿಂದ ಗರಿಷ್ಠ ಉಷ್ಣಾಂಶದ ಪ್ರಮಾಣ 38.5 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಸೋಮವಾರವೂ ಇದೇ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳ ಅತಿ ಹೆಚ್ಚಿನ ಉಷ್ಣಾಂಶ ಇದಾಗಿದೆ. ಅಲ್ಲದೇ ಇತಿಹಾಸದಲ್ಲಿಯೇ ಮೂರನೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ದಿನ ಎಂದೂ ಹೇಳಲಾಗಿತ್ತು. ಇಂತಹ ವಾತಾವರಣದ ನಡುವೆ ಮಳೆಯಾಗಿರುವುದು ತುಸು ನೆಮ್ಮದಿ ತಂದಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)