ಕನ್ನಡ ಸುದ್ದಿ  /  Karnataka  /  Bangalore News Bbmp Facing Unlimited Public Calls On Water Scarcity In Bangalore Separate Helpline Started Mrt

Bangalore News: ಬಿಬಿಎಂಪಿಗೆ ನೀರಿನ ಸಮಸ್ಯೆ ಕರೆಗಳ ಸುರಿಮಳೆ, ಹೈರಾಣಾದ ಅಧಿಕಾರಿಗಳು; ಪ್ರತ್ಯೇಕ ಹೆಲ್ಪ್ ಲೈನ್ ಸಂಖ್ಯೆಯಿದು

ಬೆಂಗಳೂರಿನಲ್ಲಿ ನೀರು ಸರಬರಾಜಿಗೆ ಸಂಬಂಧಿಸಿ ಬಿಬಿಎಂಪಿಗೆ ಹೆಚ್ಚಿನ ಕರೆಗಳು ಬರುತ್ತಿದ್ದು, ಇದಕ್ಕೆ ಪೂರಕವಾಗಿ ತಂಡವಾಗಿ ಕೆಲಸ ಮಾಡಲಾಗುತ್ತಿದೆ.(ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಈ ಬಾರಿ ನೀರು ಸರಬರಾಜು ದೊಡ್ಡ ಸವಾಲು
ಬೆಂಗಳೂರಿನಲ್ಲಿ ಈ ಬಾರಿ ನೀರು ಸರಬರಾಜು ದೊಡ್ಡ ಸವಾಲು

ಬೆಂಗಳೂರು: ನೀರಿನ ಸಮಸ್ಯೆಯನ್ನು ಆಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಲ್ಪ್ ಲೈನ್ ಆರಂಭಿಸಿದ 24 ಗಂಟೆಗಳೊಳಗೆ ಕರೆಗಳ ಸುರಿಮಳೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೈರಾಣಾಗಿ ಹೋಗಿದೆ. ಬಹುತೇಕ ಕರೆಗಳು ನೀರಿನ ಬೇಡಿಕೆಗೆ ಸಂಬಂಧಿಸಿದವುಗಳೇ ಆಗಿದ್ದು ನೀರನ್ನು ಒದಗಿಸಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಹಾಯವಾಣಿ ಆರಂಭಿಸಿದ್ದು 1916 ಗೆ ಕರೆ ಮಾಡಿ ದೂರು ದಾಖಲಿಸಲು ಅವಕಾಶವಿದೆ.

ಪ್ರಮುಖ ಏರಿಯಾಗಳಿಂದಲೂ ಅಂದಾಜು 30 ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ಎಲ್ಲವೂ ನೀರಿನ ಬೇಡಿಕೆ, ಬತ್ತಿಹೋಗಿರುವ ಕೊಳವೆ ಬಾವಿಗಳು, ಟ್ಯಾಂಕರ್ ನೀರಿಗಾಗಿ ಮೊರೆ ಮತ್ತು ದುಬಾರಿ ಶುಲ್ಕಕ್ಕೆ ಸಂಬಂಧಪಟ್ಟಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಪಾರ್ಟ್ ಮೆಂಟ್ ಗಳಿಂದಲೂ ನೀರಿನ ಅಭಾವ ಕುರಿತು ಕರೆಗಳು ಬಂದಿವೆ. ನೋಂದಣಿಯನ್ನು ಕಡ್ಡಾಯ ಮಾಡಿರುವುದರಿಂದ ಖಾಸಗಿ ಟ್ಯಾಂಕರ್ ಗಳು ನೀರು ಸರಬರಾಜು ಮಾಡುತ್ತಿಲ್ಲ. ಆದ್ದರಿಂದ ಜಲ ಮಂಡಳಿ ಮುಖಾಂತರ ಟ್ಯಾಂಕರ್ ನೀರು ಪೂರೈಕೆ ಮಾಡಲು ಬೇಡಿಕೆ ಬರುತ್ತಿದೆ ಎಂದೂ ಅವರು ಹೇಳುತ್ತಾರೆ.

ಸದ್ಯಕ್ಕೆ ಬಿಬಿಎಂಪಿ ನೀರಿನ ಸಮಸ್ಯೆ ಗಂಭೀರವಾಗಿರುವ ಮತ್ತು ಕೊಳಚೆ ಪ್ರದೇಶಗಳತ್ತ ಚಿತ್ತ ಹರಿಸಿರುವ ಮಾಹಿತಿ ಲಭ್ಯವಾಗಿದೆ.ವಿಶೇಷವಾಗಿ ನಗರದ ಹೊರ ವಲಯಗಳಲ್ಲಿ ನೀರಿನ ಅಭಾವ ಕಾಡುತ್ತಿದೆ. ಈ ಭಾಗಗಳಿಂದ ಬರುತ್ತಿರುವ ಕರೆಗಳಿಗೆ ಸ್ಪಂದಿಸುವುದು ಕಷ್ಟ ಎನ್ನುತ್ತಾರೆ.

ಆರ್ ಓ ಘಟಕಗಳು ಬಂದ್

ಇನ್ನು 5 ರೂ. ನಾಣ್ಯ ಹಾಕಿ ಉಚಿತ ನೀರು ತುಂಬಿಸಿಕೊಳ್ಳುವ ಆರ್ ಓ ಘಟಕಗಳು ಈಗಾಗಲೇ ಒಂದೊಂದಾಗಿ ಬಾಗಿಲು ಹಾಕುತ್ತಿವೆ. ಬೋರ್ ವೆಲ್ ಗಳಲ್ಲಿ ನೀರಿಲ್ಲದ ಕಾರಣ ತೆರೆಯುತ್ತಿಲ್ಲ. ಅಲ್ಪ ಸ್ವಲ್ಪ ನೀರು ಇರುವ ಬೋರ್ ವೆಲ್ ಗಳ ಆರ್ ಓ ಘಟಕಗಳನ್ನು ಅಲ್ಪಾವಧಿಗೆ ತೆರೆಯಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆ ಮಾತ್ರ ನೀರು ಲಭ್ಯ ಎಂದು ಅಲ್ಲಿ ಉಸ್ತುವಾರಿ ನೋಡಿಕೊಳ್ಳುವ ಕಾರ್ಮಿಕರು ಹೇಳುತ್ತಾರೆ.

ಬಿಬಿಎಂಪಿ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿವೆ. ಖಾಸಗಿ ಟ್ಯಾಂಕರ್ ಗಳನ್ನು ನೋಂದಣಿ ಮಾಡಲು ಬಿಬಿಎಂಪಿ ಮುಂದಾಗಿದ್ದರೆ, ಆರ್ ಟಿ ಓ ನೋಂದಣಿ ಮಾಡದ ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ. ಮಹದೇವಪುರ, ಅಗರ, ಹೊರಮಾವು ಮೊದಲಾದ ಕಡೆ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಮಹದೇವಪುರದ 297 ಕೊಳವೆ ಬಾವಿಗಳ ಪೈಕಿ 50-60 ರಲ್ಲಿ ನೀರಿಲ್ಲ.

110 ಹಳ್ಳಿಗಳಲ್ಲಿ ಮತ್ತೊಂದು ರೀತಿಯ ಸಮಸ್ಯೆ

2008 ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಹೆಲ್ಪ್ ಲೈನ್ ಆರಂಭಿಸಿದೆ.ಜೊತೆಗೆ ಉಸ್ತುವಾರಿಗಾಗಿ ಕಾರ್ಯಪಾಲಕ ಇಂಜಿನಿಯರ್ ರೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಹೊರ ವಲಯದ 35 ವಾರ್ಡ್ ಗಳ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನವಾಗಿ 35 ವಾರ್ಡ್‍ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಈಗಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕೂಡ ಹಲವಾರು ಕ್ರಮಗಳನ್ನು ತೆಗೆದುಕೊಂಡು ನೀರು ಸರಬರಾಜುಗೆ ಮುಂದಾಗಿದೆ. ಇನ್ನೂ ಮೂರು ತಿಂಗಳ ಕಾಲ ಯುದ್ದೋಪಾದಿಯಲ್ಲಿಯೇ ಕೆಲಸ ಮಾಡುತ್ತೇವೆ. ಇದಕ್ಕಾಗಿ ವಲಯವಾರು ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ವಿವರಣೆ.

(ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point

ವಿಭಾಗ