Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

ಬೆಂಗಳೂರಿನಲ್ಲಿ ಮುಂಗಾರು ಎದುರಿಸಲು ಈಗಾಗಲೇ ಸಿದ್ದತೆಗಳು ಶುರುವಾಗಿವೆ. ಬಿಬಿಎಂಪಿ ಅಧಿಕಾರಿಗಳು ವಲಯವಾರು ಸಿದ್ದತೆ ನಡೆಸಿದ್ದಾರೆ.ವರದಿ: ಎಚ್.ಮಾರುತಿ,ಬೆಂಗಳೂರು

ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಕಾರಣವಾದ ಚರಂಡಿ ಸ್ವಚ್ಛತೆಯಲ್ಲಿ ನಿರತ ಬಿಬಿಎಂಪಿ ಸಿಬ್ಬಂದಿ
ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಕಾರಣವಾದ ಚರಂಡಿ ಸ್ವಚ್ಛತೆಯಲ್ಲಿ ನಿರತ ಬಿಬಿಎಂಪಿ ಸಿಬ್ಬಂದಿ

ಬೆಂಗಳೂರು: ಮುಂಗಾರು ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸಿದ್ದು ಮಳೆಯಿಂದ ಉಂಟಾಗಬಹುದಾದ ಅವಘಡಗಳನ್ನು ನಿಯಂತ್ರಿಸಲು ಸಜ್ಜಾಗುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯ ಹಿನ್ನೆಲೆ ಯಲ್ಲಿ ರಾಜಕಾಲುವೆ ಸ್ವಚ್ಛಗೊಳಿಸುವ ಅಭಿಯಾನವನ್ನು ಮೇ 10 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಏಪ್ರಿಲ್ 19 ರಿಂದ ಮೇ 3 ರವರೆಗೆ ರಾಜಕಾಲುವೆ ಸ್ವಚ್ಛಗೊಳಿಸುವ ಅಭಿಯಾನವನ್ನು ಹಮ್ಮಿಕೊಂಡಿದ್ದರು.ಈಗಾಗಲೇ ಶೇ.75 ರಷ್ಟು ಸ್ವಚ್ಛತಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಮೇ ಕೊನೆಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪ್ರಮುಖ ರಾಜಕಾಲುವೆ ಮತ್ತು ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಿದೆ. ಸಮರೋಪಾದಿಯಲ್ಲಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳಿಗೆ ಸೂಚಿಸಿದ್ದಾರೆ.

ಸಾಮೂಹಿಕ ಸ್ವಚ್ಛತೆ

ಪ್ರತಿ ತಿಂಗಳು ಮೂರನೇ ವಾರ ಸಾಮೂಹಿಕ ಸ್ವಚ್ಛತೆ ನಡೆಸಲೇಬೇಕೆಂದು ಸೂಚಿಸಲಾಗಿದೆ. ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲಾಗಿದೆ. ಪಾಲಿಕೆಯ 63 ವಿಭಾಗಗಳಿಗೆ ವಾಟ್ಸ್ ಆಪ್ ಗ್ರೂಪ್ ರಚಿಸಲಾಗಿದ್ದು ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸಲು ತಿಳಿಸಲಾಗಿದೆ. ಒಟ್ಟಾರೆ ಈ ಬಾರಿ ಗಂಭೀರ ಸಮಸ್ಯೆಗಳಾಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ 859 ಕಿಮೀ ಉದ್ದದ ರಾಜಕಾಲುವೆ ಇದ್ದು 3 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ. ಕೆಲವೊಮ್ಮೆ ಕಸ ಕಡ್ಡಿ ಪ್ಲಾಸ್ಟಿಕ್ ಜೊತೆಗೆ ಬೈಕ್ ಕೂಡಾ ರಾಜಕಾಲುವೆಯಲ್ಲಿ ಸಿಕ್ಕಿದೆ. ಚರಂಡಿ ಮತ್ತು ರಾಜಕಾಲುವೆಗೆ ತ್ಯಾಜ್ಯ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಹಾಸಿಗೆಯಂತಹ ವಸ್ತುಗಳನ್ನು ಎಸೆಯದಂತೆ ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಮೇ 10 ರೊಳಗೆ ರಾಜಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದಿನ ವರ್ಷದ ಅನುಭವ

ಕಳೆದ ವರ್ಷ ಎರಡು ಮೂರನೇ ವಾರದಲ್ಲಿ ಭಾರೀ ಮಳೆಯಾಗಿ ತೀವ್ರ ತೊಂದರೆ ಉಂಟಾಗಿತ್ತು. ಮತ್ತು ಬಿಬಿಎಂಪಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಬಾರಿ ಬೆಸ್ಕಾಂ, ಜಲಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಜೊತೆ ಬಿಬಿಎಂಪಿ ಸಮನ್ವಯ ಸಾಧಿಸಿ ಮಳೆಯಿಂದಾಗುವ ಅನಾಹುತಗಳನ್ನು ನಿಯಂತ್ರಿಸಲು ಸಜ್ಜಾಗಿದೆ.

ರಸ್ತೆ ಬದಿಗಳಲ್ಲಿ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಗುತ್ತಿಗೆದಾರರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇಂತಹ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಲು ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದಾರೆ.

ಸ್ವಚ್ಛತಾ ಕಾರ್ಯಕ್ರಮದ ಛಾಯಾಚಿತ್ರಗಳು ಮತ್ತು ಸ್ವಚ್ಛತೆ ನಡೆಯುತ್ತಿರುವ ಸ್ಥಳದ ಲೋಕೇಶನ್ ಅನ್ನು ಪ್ರತಿದಿನ ಹಂಚಿಕೊಳ್ಳಬೇಕು ಎಂದು ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ.ನಾಗರಿಕ ಮೂಲಸೌಕರ್ಯಗಳನ್ನು ನಿರ್ವಹಿಸುವುದು ಬಿಬಿಎಂಪಿಯ ಸಾಮಾನ್ಯ ಜವಾಬ್ದಾರಿಯಾಗಿದೆ. ರಾಜ ಕಾಲುವೆ, ಕೆರೆ, ರಸ್ತೆ ಮತ್ತು ಒಳ ಚರಂಡಿಗಳ ಸ್ವಚ್ಛತೆಯನ್ನು ತುರ್ತು ಆದ್ಯತೆ ಎಂದು ಪರಿಗಣಿಸಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

ರಸ್ತೆ ಗುಂಡಿ ಮುಚ್ಚುವ ಕೆಲಸ

ವಾರ್ಡ್‌ಮಟ್ಟದಲ್ಲಿ ರಾಜಕಾಲುವೆಗಳ ಸಂಪರ್ಕ ಚರಂಡಿಗಳಲ್ಲಿ ಹೂಳೆತ್ತುವುದು, ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿ ಮಾಡುವುದು, ರಸ್ತೆ ಗುಂಡಿ, ಚರಂಡಿಗಳನ್ನು ದುರಸ್ತಿಪಡಿಸುವುದು,ರಾಜಕಾಲುವೆಗಳ ಸಂಪರ್ಕ ಚರಂಡಿ, ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೂಳೆತ್ತುವುದು ವಲಯ ಮುಖ್ಯ ಎಂಜಿನಿಯರ್ ರವರ ಜವಾಬ್ದಾರಿ ಎನ್ನುವುದನ್ನು ತಿಳಿಸಲಾಗಿದೆ.

ಬೃಹತ್‌ ನೀರುಗಾಲುವೆ ಮುಖ್ಯ ಎಂಜಿನಿಯರ್‌ ರವರು ರಾಜಕಾಲುವೆಗಳ ನಿರ್ವಹಣೆ, ನೀರು ಸರಾಗವಾಗಿ ಹರಿಯುವಂತೆ ಸೇತುವೆ ಮತ್ತು ಅಡಿಗಾಲುವೆಗಳನ್ನು ಸ್ವಚ್ಛಗೊಳಿಸುವುದು, ತುರ್ತು ಸಂದರ್ಭಗಳಿಗೆ ಗುತ್ತಿಗೆದಾರರು ಸರ್ವಸನ್ನದ್ಧರಾಗಿ ಇರುವಂತೆ ನಿಗಾ ವಹಿಸುವುದು, ರಾಜಕಾಲುವೆಗಳಿಗೆ ಘನತ್ಯಾಜ್ಯ ಹಾಕುತ್ತಿರುವ ಸ್ಥಳಗಳನ್ನು ಗುರುತಿಸಿ ಘನತ್ಯಾಜ್ಯ ವಿಭಾಗ ಮುಖ್ಯ ಎಂಜಿನಿಯರ್‌ ಅವರಿಗೆ ತಿಳಿಸುವುದು ಕಡ್ಡಾಯ ಎನ್ನುವುದನ್ನು ತಿಳಿಸಲಾಗಿದೆ.

( ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner