BBMP Property Tax: ನೀವಿನ್ನೂ ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿಸಿಲ್ಲವೇ, ನಿಮ್ಮ ಬ್ಯಾಂಕ್‌ ಖಾತೆಗೆ ನೇರ ಜೋಡಣೆ ಮಾಡಲಿದೆ ಬಿಬಿಎಂಪಿ-bangalore news bbmp starting linking with bank accounts of property tax defaulters in bangalore to recover arrears kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bbmp Property Tax: ನೀವಿನ್ನೂ ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿಸಿಲ್ಲವೇ, ನಿಮ್ಮ ಬ್ಯಾಂಕ್‌ ಖಾತೆಗೆ ನೇರ ಜೋಡಣೆ ಮಾಡಲಿದೆ ಬಿಬಿಎಂಪಿ

BBMP Property Tax: ನೀವಿನ್ನೂ ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿಸಿಲ್ಲವೇ, ನಿಮ್ಮ ಬ್ಯಾಂಕ್‌ ಖಾತೆಗೆ ನೇರ ಜೋಡಣೆ ಮಾಡಲಿದೆ ಬಿಬಿಎಂಪಿ

BBMP News ಬೆಟ್ಟದಷ್ಟು ಉಳಿದಿರುವ ಆಸ್ತಿ ತೆರಿಗೆ( Bangalore Property Tax) ವಸೂಲಿಗೆ ಬಿಬಿಎಂಪಿ( BBMP ) ಹೊಸ ಅಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. ಇಲ್ಲಿದೆ ವಿವರ.

BBMP Updates  ಬಿಬಿಎಂಪಿಯು ತೆರಿಗೆ ಆಸ್ತಿ ವಸೂಲಿಗೆ ಬ್ಯಾಂಕ್‌ ಅಸ್ತ್ರ ಬಳಕೆ ಮಾಡುತ್ತಿದೆ.
BBMP Updates ಬಿಬಿಎಂಪಿಯು ತೆರಿಗೆ ಆಸ್ತಿ ವಸೂಲಿಗೆ ಬ್ಯಾಂಕ್‌ ಅಸ್ತ್ರ ಬಳಕೆ ಮಾಡುತ್ತಿದೆ.

ಬೆಂಗಳೂರು: ಬೃಹತ್‌ ಬೆಂಗಳೂರು ನಗರ ಪಾಲಿಕೆಯು ಆಸ್ತಿ ತೆರಿಗೆಯ ವಸೂಲಿಗೆ ನಾನಾ ಮಾರ್ಗಗಳನ್ನು ಅನುಸರಿಸುತ್ತಲೇ ಇದೆ. ರಿಯಾಯಿತಿ ಘೋಷಿಸಿಯೂ ಆಗಿದೆ. ನೊಟೀಸ್‌ ನೀಡಿಯೂ ಆಗಿದೆ. ಹಲವಾರು ಮಾದರಿಯ ಸೌಲಭ್ಯಗಳನ್ನು ಕೊಟ್ಟಿದೆ. ಆದರೂ ಕೆಲವರು ತಮ್ಮ ಆಸ್ತಿಗಳ ತೆರಿಗೆ ಬಾಕಿ ಪಾವತಿಸಲು ಹಿಂದೇಟು ಹಾಕುತ್ತಲೇ ಇದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಮನೆಗಳಿಗೆ ಎಡತಾಕಿದರೂ ಬಾಕಿ ಹಾಗೆಯೇ ಇದೆ. ವರ್ಷದಿಂದ ವರ್ಷಕ್ಕೆ ಆಸ್ತಿ ತೆರಿಗೆ ಬಾಕಿ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಬಿಬಿಎಂಪಿ ಭಿನ್ನ ರೀತಿಯ ಕಾರ್ಯಾಚರಣೆಗೆ ಮುಂದಾಗಿದೆ. ಈ ಬಾರಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡು ಅಲ್ಲಿಂದಲೇ ಕಡಿತ ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ.

ಈ ಕುರಿತಾಗಿ ಬಿಬಿಎಂಪಿ ಅಧಿಸೂಚನೆಯನ್ನು ಮೂರು ದಿನದ ಹಿಂದೆಯೇ ಹೊರಡಿಸಿದೆ. ಆಸ್ತಿ ಬಾಕಿ ಉಳಿಸಿಕೊಂಡವರು ಕೂಡಲೇ ಬಾಕಿ ಪಾವತಿಸಬೇಕು. ಇಲ್ಲದೇ ಇದ್ದರೆ ಬ್ಯಾಂಕ್‌ ಮೂಲಕವೇ ನಿಮ್ಮ ಖಾತೆಯಿಂದ ತೆರಿಗೆ ಪಾವತಿ ಅನಿವಾರ್ಯವಾಗಲಿದೆ ಎನ್ನುವುದು ಬಿಬಿಎಂಪಿ ನೀಡಿರುವ ಎಚ್ಚರಿಕೆ.

ಹೆಚ್ಚಿದ ತೆರಿಗೆ ಬಾಕಿ

ಕಳೆದ ಬಾರಿ 2,287 ಕೋಟಿ ರೂ. ಆಸ್ತಿ ತೆರಿಗೆಯನ್ನು ಸಂಗ್ರಹಿಸಿದ್ದ ಬಿಬಿಎಂಪಿ ಆಸ್ತಿ ತೆರಿಗೆ ಪ್ರಮಾಣದಲ್ಲಿ ಈ ವರ್ಷದಲ್ಲಿ ಕುಸಿತ ಕಂಡಿದೆ. ಈ ಬಾರಿ 1,646 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದ್ದು, ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಭಾರೀ ಇಳಿಕೆಯಾಗಿದೆ. ಸುಮಾರು 600 ಕೋಟಿ ರೂ. ಖೋತಾ ಆಗಿದೆ. ಇದು ಬಿಬಿಎಂಪಿ ಅಧಿಕಾರಿಗಳ ಆತಂಕದ ಮೂಲ.

ಇದಲ್ಲದೇ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಸ್ತಿ ತೆರಿಗೆ ಸಂಗ್ರಹ ಕಡಿಮೆಯಾಗಿದ್ದಕ್ಕೆ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕಂದಾಯ ವಿಭಾಗದವರು ಏನು ಮಾಡುತ್ತಿದ್ದಾರೆ. ತೆರಿಗೆ ವಸೂಲಿ ನಿಮ್ಮ ಜವಾಬ್ದಾರಿ. ಇದಕ್ಕೆ ಕ್ರಮ ತೆಗೆದುಕೊಳ್ಳದೇ ಇದ್ದೆ ಹೇಗೆ, ಹೀಗೆಯೇ ಆದರೆ ಅಧಿಕಾರಿಗಳ ವಿರುದ್ದ ಕ್ರಮ ಖಚಿತ ಎನ್ನುವ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ.

ಈ ಕಾರಣದಿಂದ ಬಿಬಿಎಂಪಿ ಎಚ್ಚೆತ್ತುಕೊಂಡು ಕೊಂಚ ಕಠಿಣ ಮಾರ್ಗೋಪಾಯಗಳನ್ನೇ ಕಂಡುಕೊಳ್ಳುತ್ತಿದೆ. ಅದರಲ್ಲೂ ಬೆಂಗಳೂರು ನಗರಾದ್ಯಂತ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 3 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ನೊಟೀಸ್‌ ಅನ್ನು ಜಾರಿಗೊಳಿಸುತ್ತಿದೆ. ಆಸ್ತಿ ತೆರಿಗೆ ವಸೂಲಿ ಹಾಗೂ ನಿರ್ವಹಣಾ ನಿಯಮವನ್ನು ಮಾರ್ಪಡಿಸಿರುವ ಬಿಬಿಎಂಪಿ ಆಸ್ತಿ ತೆರಿಗೆದಾರರ ಬ್ಯಾಂಕ್‌ ಖಾತೆಗಳೊಂದಿಗೆ ನೇರ ಆರ್ಥಿಕ ವಹಿವಾಟು ಮಾಡಲಿದೆ.

ಹೇಗಿರಲಿದೆ ಕ್ರಮ

ಬಿಬಿಎಂಪಿಯಲ್ಲಿ ಸದ್ಯ ಇರುವ ಕಾನೂನುಗಳ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿರುವರ ವಿರುದ್ಧ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದರು. ಜೊತೆಯಲ್ಲೇ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನೂ ಹೊಂದಿದ್ದರು. ಇದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ನಾನಾ ಕಾರಣಗಳನ್ನು ನೀಡಿ ಆಸ್ತಿದಾರರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದು ಆಸ್ತಿ ತೆರಿಗೆ ಕಟ್ಟುವುದರಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಕಾನೂನು ವ್ಯಾಜ್ಯದ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದೇನೂ ಮಾಡಲಾಗದೇ ಸುಮ್ಮನಾಗದೇ ಕಾನೂನು ಹೋರಾಟ ನಡೆಸಬೇಕಿತ್ತು. ಈಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಬ್ಯಾಂಕ್ ಖಾತೆಯನ್ನೇ ನೇರವಾಗಿ ಬಿಬಿಎಂಪಿಯೊಂದಿಗೆ ಲಿಂಕ್ ಮಾಡಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ, ಬಾಕಿದಾರರ ಸ್ಥಿರಾಸ್ತಿಯನ್ನೂಕೂಡ ಇದರೊದಿಗೆ ಲಿಂಕ್ ಮಾಡಲು ಮುಂದಾಗಿದೆ. ಆಸ್ತಿ ತೆರಿಗೆ ಬಾಕಿದಾರರ ಬ್ಯಾಂಕ್ ಮಾಹಿತಿಗಳನ್ನು ಸಂಗ್ರಹಿಸುವ ಬಿಬಿಎಂಪಿ, ಫಾರ್ಮ್‌ 16 ಜೊತೆಯಲ್ಲೇ ಬ್ಯಾಂಕ್‌ಗಳಿಗೆ ವಾರಂಟ್ ರವಾನೆ ಮಾಡಲಿದೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ.

ಬ್ಯಾಂಕ್‌ಗಳ ವಿರುದ್ದವೂ ಕ್ರಮ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಬ್ಯಾಂಕ್‌ಗಳು ಬಿಬಿಎಂಪಿಗೆ ನೀಡುವುದೂ ಅನಿವಾರ್ಯವಾಗಲಿದೆ. ಎಸ್‌ಬಿ ಖಾತೆ ಮಾತ್ರವಲ್ಲ, ಗ್ರಾಹಕರ ನಿಶ್ಚಿತ ಠೇವಣಿ ಸೇರಿದಂತೆ ಹಲವು ಮಾಹಿತಿಗಳನ್ನು ಬಿಬಿಎಂಪಿ ಸಂಗ್ರಹಿಸಲು ಮುಂದಾಗಿದೆ.

ಒಂದು ವೇಳೆ ಬ್ಯಾಂಕ್‌ಗಳು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ತಮ್ಮ ಹಣ ಹಿಂಪಡೆಯಲು ನೆರವು ನೀಡಿದರೆ ಬಿಬಿಎಂಪಿಯು ಬ್ಯಾಂಕ್ ವಿರುದ್ಧ ಪ್ರಕರಣ ದಾಖಲು ಮಾಡಲು ಯೋಚಿಸುತ್ತಿದೆ. 2023ರ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 222ರ ಪ್ರಕಾರ ಬ್ಯಾಂಕ್‌ ವಿರುದ್ದ ಕ್ರಮಕ್ಕೆ ಅವಕಾಶವಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.