Bangalore News: ಬೆಂಗಳೂರುಅನಧಿಕೃತ ಜಾಹೀರಾತು ಫಲಕಗಳ ಮೇಲೆ ಬಿಬಿಎಂಪಿ ಕಣ್ಗಾವಲು, ಬೀಳುತ್ತದೆ ಭಾರೀ ದಂಡ
BBMP News ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಮೇಲೆ ಬಿಬಿಎಂಪಿ ( BBMP) ಕಣ್ಣಿರಿಸಿದೆ.
ಬೆಂಗಳೂರು: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ( bbmp) ಇಚ್ಛಾಶಕ್ತಿ ಇದ್ದರೆ ಜಾಹೀರಾತು ಪ್ರದರ್ಶನದಿಂದ ನೂರಾರು ಕೋಟಿ ಆದಾಯ ಗಳಿಸಬಹುದು. ಆದರೆ ಅನಧಿಕೃತ ಜಾಹಿರಾತುಗಳ ಸಂಖ್ಯೆಯೇ ಹೆಚ್ಚು. ಅದರಲ್ಲೂ ವಾಣಿಜ್ಯ ಮತ್ತು ರಾಜಕೀಯ ಪಕ್ಷಗಳ ಜಾಹಿರಾತುಗಳನ್ನು ನಿಯಂತ್ರಿಸುವ ಧೈರ್ಯ ಬಿಬಿಎಂಪಿಗೆ ಇಲ್ಲವೇ ಇಲ್ಲ. ಇದೊಂದು ಮಾಫಿಯಾ ಕೂಡಾ. ಇದೀಗ ಬಿಬಿಎಂಪಿ ದಕ್ಷಿಣ ವಲಯ ಜಾಹೀರಾತು ನಿಯಂತ್ರಣಕ್ಕೆ ಮುಂದಾಗಿದೆ. ಕೊನೆಗೂ ಅನಧಿಕೃತ ಜಾಹಿರಾತುಗಳನ್ನು ನಿಯಂತ್ರಿಸಲು ಮತ್ತು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ಜಾಹೀರಾತು ಮುಕ್ತ ಅಭಿಯಾನ ಆರಂಭಿಸಿದೆ.
ಈ ವಲಯದಲ್ಲಿ ಯಾವುದೇ ರೀತಿಯ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳನ್ನು ಅಳವಡಿಸಿದ್ದರೆ ತಕ್ಷಣವೇ ತೆರವು ಗೊಳಿಸಲಿದೆ ಮತ್ತು ಜಾಹೀರಾತು ಪ್ರದರ್ಶಕರಿಗೆ ದಂಡ ವಿಧಿಸಲಿದೆ. ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯಿದೆ 1981 ರ ಅಡಿಯಲ್ಲಿ ಅಪರಾಧ ಎಸಗಿರುವವರ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸುವ ಜತೆಯಲ್ಲಿಯೇ ಕಾನೂನು ರೀತಿಯಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತ ಶಿವಕುಮಾರ್ ಎಚ್ಚರಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಬಿಬಿಎಂಪಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018ರ ಅನ್ವಯ
ಅಂಗಡಿಗಳ ಜಾಹೀರಾತುಗಳು ಮತ್ತು ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ ಹಾಕಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವಂತಿಲ್ಲ ಎಂಬ ನಿಯಮ ಇದೆ.
ವಾಣಿಜ್ಯ ಜಾಹೀರಾತುಗಳು, ಎಲ್ ಇ ಡಿ ಜಾಹೀರಾತುಗಳ ಪ್ರದರ್ಶನ ಹಾಗೂ ಸಾರ್ವಜನಿಕ, ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ, ಸಮಾರಂಭಗಳ ಕುರಿತ ಜಾಹೀರಾತು, ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೂ ಜಾಹಿರಾತುಗಳನ್ನು ಮತ್ತೆ ಮತ್ತೆ ಅಳವಡಿಸಿ ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಲೇ ಇದೆ. ಮೇಲಾಗಿ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಗರದ ವಸತಿ ಪ್ರದೇಶ ಮತ್ತು ಖಾಸಗಿ ಸ್ವತ್ತುಗಳಲ್ಲಿ ವಾಣಿಜ್ಯ ಜಾಹೀರಾತು ಸೇರಿದಂತೆ ಯಾವುದೇ ರೀತಿಯ ಜಾಹೀರಾತು ಅಳವಡಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪರಿಸರ(ಸಂರಕ್ಷಣೆ) ಕಾಯ್ದೆ 1986ರ ಸೆಕ್ಷನ್ 5ರ ಅಡಿಯಲ್ಲಿ 2016 ರ ಮಾರ್ಚ್ 11 ರಂದು ಸರ್ಕಾರ ಅಧಿಸೂಚನೆ ಹೊರಡಿಸಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನೂ ನಿಷೇಧಿಸಿದೆ. ಆದ್ದರಿಂದ ಜಾಹೀರಾತು ಅಥವಾ ಪ್ರಕಟಣೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದ್ದರೆ ಅದರ ವಿರುದ್ಧವೂ ದೂರನ್ನು ದಾಖಲಿಸಲಾಗುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ.
ವರದಿ: ಎಚ್. ಮಾರುತಿ,ಬೆಂಗಳೂರು
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ