Namma Metro: ಸುಮ್ಮನೇ ಮೆಟ್ರೋ ತುರ್ತು ಬಟನ್ ಒತ್ತಿದ ಪ್ರಯಾಣಿಕ; ಬಿತ್ತು ಬರೋಬ್ಬರಿ 5 ಸಾವಿರ ರೂ ದಂಡ
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಹೇಮಂತ್ ಎಂಬುವವರು ಸಕಾರಣವಿಲ್ಲದೇ ತುರ್ತು ಬಟನ್ ಒತ್ತಿ 5 ಸಾವಿರ ರೂ ದಂಡವನ್ನು ಪಾವತಿಸಿದ ಘಟನೆ ನಡೆದಿದೆ.
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವವರು ಕೆಲವೊಮ್ಮೆ ತಲೆಹರಟೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದು ಕ್ಷಣದ ಅನುಭವಕ್ಕಾಗಿ ದಂಡವನ್ನೂ ತೆರುತ್ತಾರೆ. ಅಂತಹುದೇ ಘಟನೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದಿದೆ. 21 ವರ್ಷದ ಯುವಕನೊಬ್ಬ ಮೆಟ್ರೋ ರೈಲಿನಲ್ಲಿ ತುರ್ತು ಟ್ರಿಪ್ ಸಿಸ್ಟಮ್ (ETS) ಒತ್ತಿದ ಪರಿಣಾಮ ನೇರಳೆ ಮಾರ್ಗದಲ್ಲಿ 10 ನಿಮಿಷಗಳ ಕಾಲ ವ್ಯತ್ಯಯ ಉಂಟಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನಮ್ಮ ಮೆಟ್ರೋ ಸಿಬ್ಬಂದಿ ಯುವಕನನ್ನು ಗುರುತಿಸಿ ಯಾವುದೇ ಕಾರಣವಿಲ್ಲದೆ ಮಾಡಿದ್ದಕ್ಕಾಗಿ 5000 ರೂ.ಗಳ ದಂಡ ವಿಧಿಸಿದ್ದಾರೆ.
ವರದಿಗಳ ಪ್ರಕಾರ, ವಿವೇಕ್ ನಗರ ನಿವಾಸಿ ಹೇಮಂತ್ ಕುಮಾರ್ ಎಂಜಿ ರಸ್ತೆ ನಿಲ್ದಾಣದಲ್ಲಿ ಇಟಿಎಸ್ ಒತ್ತಿದ್ದಾರೆ. ಇದರಿಂದಾಗಿ ಟ್ರಿನಿಟಿ ನಿಲ್ದಾಣದಿಂದ ಬರುತ್ತಿದ್ದ ರೈಲನ್ನು ಎಂಜಿ ರಸ್ತೆ ಮೆಟ್ರೋದಲ್ಲಿ 10 ನಿಮಿಷಗಳ ಕಾಲ ನಿಲ್ಲಿಸಲಾಯಿತು.
ಈ ಕಾರಣಕ್ಕಾಗಿ ನೇರಳೆ ಮಾರ್ಗದಲ್ಲಿನ ಎಲ್ಲಾ ಸೇವೆಗಳಿಗೆ ಅಡ್ಡಿಯಾಯಿತು. ರೈಲು ಪುನರಾರಂಭಗೊಂಡ ನಂತರ ಅವರು ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಳಿದಿದ್ದಾರೆ.
ಕೂಡಲೇ ಮೆಟ್ರೋ ಸಿಬ್ಬಂದಿ ಸಿಸಿಟಿವಿ ಮೂಲಕ ಹೇಮಂತ್ ಅವರನ್ನು ಗುರುತಿಸಿ ಹಿಂಬಾಲಿಸಿದರು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಇಳಿದ ನಂತರ ಸಿಬ್ಬಂದಿ ಮಧ್ಯಪ್ರವೇಶಿಸಿ ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಆದಾಗ್ಯೂ ತುರ್ತು ಟ್ರಿಪ್ ಸಿಸ್ಟಮ್ ಮೋಜಿಗಾಗಿ ಒತ್ತಿರುವುದಾಗಿ ಹೇಮಂತ್ ಒಪ್ಪಿಕೊಂಡರು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಸಿಬ್ಬಂದಿಯೊಬ್ಬರ ಪ್ರಕಾರ, "ಯಾವುದೇ ಉದ್ದೇಶವಿಲ್ಲದೆ ಇಟಿಎಸ್ ಬಳಸಿದರೆ, 5000 ರೂ.ಗಳ ದಂಡ ವಿಧಿಸಬೇಕು ಎಂದು ನಿಯಮ ಹೇಳುತ್ತದೆ. ದಂಡವನ್ನು ಪಾವತಿಸುವಂತೆ ನಾವು ಆ ವ್ಯಕ್ತಿಯನ್ನು ಕೇಳಿದಾಗ, ಅವರ ಬಳಿ ಹಣವಿಲ್ಲ ಎಂದು ಹೇಳಿದರು. ಘಟನೆಯ ಬಗ್ಗೆ ನಾವು ಅವನ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಪೋಷಕರೂ ಕೂಡಲೇ ನಿಲ್ದಾಣಕ್ಕೆ ಬಂದರು. ಅವರು ದಂಡವನ್ನು ಪಾವತಿಸಿ ತಮ್ಮ ಮಗನನ್ನು ತಮ್ಮೊಂದಿಗೆ ಕರೆದೊಯ್ದರು.
ಮೆಟ್ರೋದಲ್ಲಿ ಇಟಿಎಸ್ ಅನ್ನು ಸಾಮಾನ್ಯವಾಗಿ ಯಾರಾದರೂ ಆಕಸ್ಮಿಕವಾಗಿ ಮೆಟ್ರೋ ಟ್ರ್ಯಾಕ್ ಮೇಲೆ ಜಾರಿ ಬಿದ್ದಾಗ ಅಥವಾ ಜಿಗಿದಾಗ ಬಳಸಲಾಗುತ್ತದೆ. ಇದು ಇಡೀ ಟ್ರ್ಯಾಕ್ ಗೆ ವಿದ್ಯುತ್ ಸರಬರಾಜನ್ನು ನಿಲ್ಲಿಸುತ್ತದೆ. ಮೆಟ್ರೋ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತದೆ.
ಈ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗಿದೆ. ಫಲಕಗಳನ್ನೂ ರೈಲು ಹಾಗೂ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಹೀಗಿದ್ದರೂ ಇಂತಹ ಅಚಾತುರ್ಯಗಳು ಆಗುತ್ತವೆ. ಈ ಬಗ್ಗೆ ಪ್ರಯಾಣಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಇದಕ್ಕೂ ಮುನ್ನ 19 ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಅತ್ತಿಗುಪ್ಪೆ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಹಳಿಗಳ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಮೆಟ್ರೋದ ಅನೇಕ ನಿಲ್ದಾಣಗಳಲ್ಲಿ ಇತ್ತೀಚೆಗೆ ಇಂತಹ ಹಲವಾರು ನಿದರ್ಶನಗಳನ್ನು ಗಮನಿಸಲಾಗಿದೆ. ಇಂತಹ ಘಟನೆಗಳಿಂದ ಪ್ರಯಾಣಿಕರನ್ನು ರಕ್ಷಿಸಲು ನಗರದ ಎಲ್ಲಾ ಪ್ಲಾಟ್ ಫಾರ್ಮ್ ಗಳಲ್ಲಿ ಪರದೆಗಳನ್ನು ಅಳವಡಿಸಬೇಕೆಂಬ ಬೇಡಿಕೆ ಇದೆ. ಇದನ್ನು ಪರಿಶೀಲಿಸಲಾಗುತ್ತಿದೆ ಎನ್ನುವುದು ಮೆಟ್ರೋ ವಿವರಣೆ.