ಬೆಂಗಳೂರಿನಲ್ಲಿ ಕೋಲೆ ಬಸವ ಗುದ್ದಿದ ಒಂದೇ ಏಟಿಗೆ ಲಾರಿಯಡಿ ಬಿದ್ದ ಬೈಕ್ ಸವಾರ, ಉಳಿದಿದ್ದೇ ಪವಾಡ; ವಿಡಿಯೊ ವೈರಲ್
ಬೈಕ್ ಸವಾರನ ಮೇಲೆ ಕೋಲೆ ಬಸವ ಅನಿರೀಕ್ಷಿತವಾಗಿ ದಾಳಿ ನಡೆಸಿದೆ. ಗೂಳಿ ಗುದ್ದಿದ ರಭಸಕ್ಕೆ ಬೈಕ್ ಸವಾರ ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದರೂ ಪವಾಡ ಎನ್ನುವ ರೀತಿಯಲ್ಲಿ ಬದುಕುಳಿದಿದ್ದಾನೆ. ಬೆಂಗಳೂರಿನ ಘಟನೆಯ ವಿಡಿಯೊ ವೈರಲ್ ಆಗಿದೆ.
ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಗೂಳಿ ಗುದ್ದಿದ ರಭಸಕ್ಕೆ ಸವಾರ ಮುಂದೆ ಬರುತ್ತಿದ್ದ ಲಾರಿಯ ಕೆಳಗೆ ಬಿದ್ದರೂ ಪವಾಡ ಎಂಬಂತೆ ಸಾವಿನಿಂದ ಪಾರಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮೈ ಜುಮ್ ಎನಿಸುವಂತಿದೆ.
ನಗರದ ಮಹಾಲಕ್ಷ್ಮಿ ಲೇಔಟ್ ಈಜುಕೊಳ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಕೋಲೆ ಬಸವನನ್ನು ಹಿಡಿದುಕೊಂಡು ಮಹಿಳೆಯೊಬ್ಬರು ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್ ಸವಾರನ್ನು ನೋಡುತ್ತಿದ್ದಂತೆ ಕೋಲೆ ಬಸವ ಕೂಡಲೇ ಆತನ ಮೇಲೆ ದಾಳಿ ಮಾಡಿ ಗುದ್ದಿ ಅಲ್ಲಿಂದ ಓಡಿ ಹೋಗಿದೆ. ಸವಾರ ಕೂಡಲೇ ಪಕ್ಕದಲ್ಲೇ ಚಲಿಸುತ್ತಿದ್ದ ಲಾರಿಯ ಕೆಳಗೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಸಿಮೆಂಟ್ ಇಟ್ಟಿಗೆ ತುಂಬಿದ್ದ ಲಾರಿಯ ಚಾಲಕನ ಸಮಯ ಪ್ರಜ್ಞೆಯಿಂದ ಬೈಕ್ ಸವಾರ ಪ್ರಾಣ ಉಳಿದಿದೆ.
ಬೈಕ್ ಸವಾರ ಲಾರಿಯ ಕೆಳಗೆ ಬಿಳುತ್ತಿದ್ದಂತೆ ಚಾಲಕ ಬ್ರೇಕ್ ತುಳಿದಿದ್ದಾನೆ. ಲಾರಿಯ ಹಿಂಬದಿಯ ಚಕ್ರಗಳು ಬೈಕ್ ಸವಾರ ತಲೆಯ ಸಮೀಪಕ್ಕೆ ಬಂದು ನಿಂತಿವೆ. ಒಂದೇ ಒಂದು ಕ್ಷಣ ಲಾರಿ ಚಾಲಕ ಬ್ರೇಕ್ ತುಳಿಯದೇ ಇದ್ದಿದ್ದರೆ ಬೈಕ್ ಸವಾರ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದ. ಬಳಿಕ ಸವಾರ ಎದ್ದು ನಿಂತು ಏನಾಯ್ತು ಎಂದು ಯೋಚಿಸುತ್ತಿರುವಾಗಲೇ ಸುತ್ತುವರಿದ ಜನರು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಅನ್ನು ಮೇಲೆತ್ತಿದ್ದಾರೆ. ಕೋಲೆ ಬಸವನನ್ನು ಹಿಡಿದುಕೊಂಡು ಬರುತ್ತಿದ್ದ ಮಹಿಳೆ ಕೂಡ ಒಂದು ಕ್ಷಣ ಅಘಾತಕ್ಕೆ ಒಳಗಾಗಿದ್ದು ಬಳಿಕ ಅಲ್ಲಿಂದ ಎಸ್ಕೇಪ್ ಆಗುವುದನ್ನು ವಿಡಿಯೊದಲ್ಲಿ ಕಾಣಬಹುದು. ಕೋಲೆ ಬಸವ ದಾಳಿಯ ವಿಡಿಯೊವನ್ನು ನೋಡಿ.
ಇಟ್ಟಿಗೆ ತುಂಬಿದ ಲಾರಿ ಚಾಲಕನ ಸಮಯ ಪ್ರಜ್ಞೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಗೂಳಿಗಳು ಕೆಂಪು ಬಟ್ಟೆಯನ್ನು ನೋಡಿದಾಗ ದಾಳಿ ಮಾಡಲು ಮುಂದಾಗುತ್ತವೆ. ಆದರೆ ಇಲ್ಲಿ ಬೈಕ್ ಸವಾರ ಕಪ್ಪು ಬಟ್ಟೆಯನ್ನು ಧರಿಸಿದ್ದ. ಕೋಲೆ ಬಸವ ಯಾರ ಮೇಲೂ ದಾಳಿ ಮಾಡುವುದಿಲ್ಲ. ಹೀಗೆ ಮಾಡುವುದು ತುಂಬಾ ಅಪರೂಪ ಅಂತಲೇ ಹೇಳಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ ನಿಜಕ್ಕೂ ಅಚ್ಚರಿ ಮೂಡಿಸಿದೆ.