ಬಿಟ್‌ಕಾಯಿನ್: ಎಸ್‌ಐಟಿ ಅಧಿಕಾರಿಗಳಿಗೆ ಡಿವೈಎಸ್‌ಪಿ ಕಾರು ಗುದ್ದಿಸಿ, ಕೊಲೆಗೆ ಯತ್ನ ಆರೋಪ; ಪ್ರಕರಣದ ಮತ್ತೊಬ್ಬ ಆರೋಪಿ ಇನ್‌ಸ್ಪೆಕ್ಟರ್ ಸೆರೆ
ಬೆಂಗಳೂರಿನ ಬಿಟ್‌ಕಾಯಿನ್ ಪ್ರಕರಣದಲ್ಲಿ ವಿಚಾರಣೆಗೆ ಮುಂದಾಗಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಡಿವೈಎಸ್‌ಪಿಯೇ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣದಲ್ಲಿ ತನಿಖೆಗೆ ಹೊರಟಿದ್ದ ಎಸ್‌ಐಟಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ಬಿಟ್‌ಕಾಯಿನ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್ ಕೆ ಪೂಜಾರ್ ಅವರೇ ಅಧಿಕಾರಿಗಳ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಡಿವೈಎಸ್‌ಪಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಡಿವೈಎಸ್‌ಪಿ ಪೂಜಾರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸಿಐಡಿ ಘಟಕದ ವಿಶೇಷ ತನಿಖಾ ತಂಡದ ಎಎಸ್‌ಐ ಭಾಸ್ಕರ್ ಹಾಗೂ ಇನ್‌ಸ್ಪೆಕ್ಟರ್ ಜಿ. ಅನಿಲ್‌ಕುಮಾರ್ ಅವರಿಗೆ ಪ್ರಾಣ ಬೆದರಿಕೆ ಹಾಕಿ, ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಸೈಬರ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿಯ ಡಿವೈಎಸ್‌ಪಿ ಬಿ.ಬಾಲರಾಜು ಅವರ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲು ತೆರಳಿದ್ದೆವು. ಮಂಗಳವಾರ ಬೆಳಿಗ್ಗೆ ಸೆಂಟ್ರಲ್ ಕಾಲೇಜು ಬಳಿಯ ಮೆಟ್ರೊ ನಿಲ್ದಾಣದ ಸಮೀಪ ಕಾರಿನಲ್ಲಿ ತಮ್ಮ ವಕೀಲರ ಜೊತೆಗೆ ಶ್ರೀಧರ್ ಕುಳಿತಿದ್ದರು. ಅವರಿಗೆ ಠಾಣೆಗೆ ಬರುವಂತೆ ತಿಳಿಸಲಾಯಿತು. ಆಗ ನಮ್ಮನ್ನು ನಿಂದಿಸಿ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿ ಅಲ್ಲಿಂದ ಪರಾರಿಯಾದರು ಎಂದು ಭಾಸ್ಕರ್ ದೂರಿನಲ್ಲಿ ಹೇಳಿದ್ದಾರೆ.
ನಂತರ ಪೂಜಾರ್ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಕಾಫಿ ಬೋರ್ಡ್ ಸಿಗ್ನಲ್ ಬಳಿ ಕಾರು ತಡೆದು ನಿಲ್ಲಿಸಲಾಯಿತು. ನಮ್ಮೊಂದಿಗೆ ಠಾಣೆಗೆ ಬರುವಂತೆ ತಿಳಿಸಿದಾಗ ನಿಮಗೆ ಏನು ಮಾಡಬೇಕು ಗೊತ್ತಿದೆ. ಏನು ಬೇಕಾದರೂ ಮಾಡಿಕೊಳ್ಳಿ, ನಿಮಗೆ ಒಂದು ಗತಿ ಕಾಣಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಆಗ ಕಾರಿನಲ್ಲಿದ್ದ ಅವರನ್ನು ಹಿಡಿಯಲು ಮುಂದಾದಾಗ ನನ್ನ ದೇಹದ ಅರ್ಧಭಾಗ ಕಿಟಕಿಯಲ್ಲಿ ಸಿಲುಕಿಕೊಂಡಿತ್ತು. ನನ್ನನ್ನು ಕೊಲ್ಲುವ ಉದ್ದೇಶದಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆಸಲು ಪ್ರಯತ್ನಿಸಿ ನಂತರ ಸ್ಥಳದಿಂದ ಪರಾರಿಯಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭಾಸ್ಕರ್ ಅವರ ಎರಡೂ ಕೈ, ಕಾಲುಗಳಿಗೆ ಗಾಯಗಳಾಗಿದ್ದು, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಟ್‌ಕಾಯಿನ್ ಪ್ರಕರಣ; ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಬಂಧನ
ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಟ್‌ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರನ್ನು ಬುಧವಾರ (ಫೆಬ್ರವರಿ 28) ಬಂಧಿಸಲಾಗಿದೆ. ಸಿಐಡಿ ವಿಶೇಷ ತನಿಖಾದಳದ (ಎಸ್‌ಐಟಿ) ಅಧಿಕಾರಿಗಳು ಇವರನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರು ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಟ್‌ಕಾಯಿನ್ ಅಕ್ರಮದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪ ಮೇರೆಗೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಲಕ್ಷ್ಮೀಕಾಂತಯ್ಯ ಉಳಿದುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಮನೆಗೆ ತೆರಳಿ ಅವರನ್ನು ಬಂಧಿಸಿದ್ದಾರೆ. ನಂತರ ಅವರನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರನ್ನು 9 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಎಸ್‌ಐಟಿ ತಂಡದ ತನಿಖಾಧಿಕಾರಿ ಕೆ.ರವಿಶಂಕರ್ ಅವರು ನೀಡಿದ್ದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಸಿಇಒ ಕೆ.ಎಸ್.ಸಂತೋಷ್ ಕುಮಾರ್ ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ ಹಾಗೂ ಚಂದ್ರಾಧರ ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಹಾಗೂ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಹಿಂದೆಯೇ ಸಂತೋಷ್ ಹಾಗೂ ಡಿ.ಎಂ.ಪ್ರಶಾಂತ್ ಬಾಬು ಅವರನ್ನು ಬಂಧಿಸಲಾಗಿತ್ತು.
ಕಾಟನ್‌ಪೇಟೆ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖಾಧಿಕಾರಿ ಆಗಿದ್ದ ಲಕ್ಷ್ಮೀಕಾಂತಯ್ಯ ಅವರು ಪ್ರಕರಣದ ಇತರೆ ಆರೋಪಿಗಳ ಜತೆ ಸೇರಿಕೊಂಡು ಪೊಲೀಸ್ ವಶದಲ್ಲಿದ್ದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ರಾಬಿನ್ ಖಂಡೇಲ್‌ವಾಲ್‌ನನ್ನು ಅಕ್ರಮವಾಗಿ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಸಂಸ್ಥೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸಂಸ್ಥೆಯ ಸಿಇಒ ಸಂತೋಷ್ ರಾಬಿನ್ ಖಂಡೇಲ್‌ವಾಲ್‌ನ ಕ್ರಿಪ್ಟೊ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿ ತನ್ನ ಕ್ರಿಪ್ಟೊ ವ್ಯಾಲೆಟ್‌ಗಳಿಗೆ ಸುಮಾರು ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ.
ಇದಕ್ಕೆ ಲಕ್ಷ್ಮೀಕಾಂತಯ್ಯ ಹಾಗೂ ತಲೆಮರೆಸಿಕೊಂಡಿರುವ ಇನ್‌ಸ್ಪೆಕ್ಟರ್ ಚಂದ್ರಾಧರ್ ಸಹಕರಿಸಿದ್ದರು ಎಂಬ ಆರೋಪವಿದೆ. ಆರೋಪಿ ರಾಬಿನ್‌ನಿಂದ ವಶಪಡಿಸಿಕೊಂಡಿದ್ದ ಮೊಬೈಲ್ ಅನ್ನು ಲಕ್ಷ್ಮೀಕಾಂತಯ್ಯ ಅವರು ಅನಧಿಕೃತವಾಗಿ ಬಳಸಿ ಸಾಕ್ಷ್ಯ ನಾಶಪಡಿಸಿದ್ದರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಶ್ರೀಕಿಗೆ ಕಂಪ್ಯೂಟರ್ ಇಂಟರ್‌ನೆಟ್ ಸೌಲಭ್ಯ ಒದಗಿಸಿಕೊಟ್ಟು ಆತನನ್ನು ಸ್ವತಂತ್ರವಾಗಿ ಬಿಟ್ಟಿದ್ದರಿಂದ ಆತ ತನ್ನ ಸ್ನೇಹಿತೆಗೆ ಇ–ಮೇಲ್ ರವಾನಿಸಿದ್ದ. ಶ್ರೀಕಿ ವ್ಯಾಲೆಟ್‌ನಿಂದ ಸಂತೋಷ್ ಕುಮಾರ್ ವ್ಯಾಲೆಟ್‌ಗೆ ಅಕ್ರಮವಾಗಿ ಬಿಟ್‌ಕಾಯಿನ್ ವರ್ಗಾವಣೆ ಮಾಡಿಕೊಳ್ಳಲು ಲಕ್ಷ್ಮೀಕಾಂತಯ್ಯ ಸೇರಿದಂತೆ ಇತರೆ ತನಿಖಾಧಿಕಾರಿಗಳು ಅವಕಾಶ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.