ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

ಬೆಂಗಳೂರು ಪೊಲೀಸರಿಗೆ ಬಿಟ್‌ ಕಾಯಿನ್‌ ವಹಿವಾಟು ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಶ್ರೀಕಿಯನ್ನು ಬಂಧಿಸಲಾಗಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ ಬಂಧಿತನಾದ ಶ್ರೀಕಿ
ಬೆಂಗಳೂರಿನಲ್ಲಿ ಬಂಧಿತನಾದ ಶ್ರೀಕಿ

ಬೆಂಗಳೂರು: ರಾಜ್ಯಾದ್ಯಂತ ಪೊಲೀಸ್ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ. ಹಾಲಿ ಮಾರುಕಟ್ಟೆ ದರದಲ್ಲಿ 32.48 ಕೋಟಿ ರೂಪಾಯಿ ಮೌಲ್ಯದ 60.6 ಬಿಟ್ ಕಾಯಿನ್ ಕಳವು ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ. ತುಮಕೂರು ಸೆನ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ತುಮಕೂರಿನ ಯೂನೋ ಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು 2027ರ ಮಾರ್ಚ್ 26 ರಂದು ಶ್ರೀಕಿ ವಿರುದ್ಧ ದೂರು ನೀಡಿದ್ದರು. ತಮ್ಮ ಕಂಪನಿಯ ಬಿಟ್ ಕಾಯಿನ್ ಎಕ್ಸ್ ಚೇಂಜ್ ಕಂಪನಿಯ ಸರ್ವರ್ ನ ಡಾಟಾ ಬೇಸ್ ಅನ್ನು ಹ್ಯಾಕ್ ಮಾಡಿ ಅದರಲ್ಲಿದ್ದ ವಿವಿಧ ಗ್ರಾಹಕರಿಗೆ ಸೇರಿದ 60.6 ಬಿಟ್ ಕಾಯಿನ್ ಗಳನ್ನು ಕಾನೂನು ಬಾಹಿರವಾಗಿ ಕೆಲವರು ತಮ್ಮ ವ್ಯಾಲೆಟ್ ಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ನಂತರ ಪ್ರಕರಣ ಕೋಲಾಹ ಎಬ್ಬಿಸುತ್ತಿದ್ದಂತೆ ರಾಜ್ಯ ಸರ್ಕಾರ 2023 ಜುಲೈ 18 ರಂದು ಈ ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಎಸ್ ಐ ಟಿ ಗೆ ವಹಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಎಸ್ ಐ ಟಿ ಅಧಿಕಾರಿಗಳು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಯಿಂದ ವಶಪಡಿಸಿಕೊಂಡ ಲ್ಯಾಪ್ ಟಾಪ್ ಅನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಅದರಲ್ಲಿ ರಹಸ್ಯವಾಗಿ ಅಡಗಿಸಿಟ್ಟಿದ್ದ ಕ್ರಿಪ್ಟೋ ವಿಳಾಸಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಶ್ರೀಕಿ ಎಸಗಿದ ಆರೋಪ ಈ ಮೂಲಕ ಸಾಬೀತಾಗಿತ್ತು.

ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ

ಬಿಟ್ ಕಾಯಿನ್ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ಶ್ರೀಕಿ ತನಗೆ ಮತ್ತು ತನ್ನ ಪೋಷಕರಿಗೆ ಆರೋಗ್ಯ ಸರಿ ಇಲ್ಲ ಎಂಬ ಹುಷಾರಿಲ್ಲ, ತನ್ನ ತಾಯಿ-ತಂದೆಗೆ ಹುಷಾರಿಲ್ಲ ಎಂಬ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದ. 29 ವರ್ಷದ ಶ್ರೀಕಿ ಬಿನ್ ಗೋಪಾಲ್ ರಮೇಶ್ ನನ್ನು ಇಂದು ಬೆಳಗಿನ ಜಾವ ಬಳ್ಳಾರಿ ರಸ್ತೆಯ ಫೋರ್ ಸೀಸನ್ ಹೋಟೆಲ್ ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಶ್ರೀ ಕಿ ಗೈರು ಹಾಜರಾಗಿದ್ದ. ಇದೇ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

2015ರಲ್ಲಿ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಮಾದಕವಸ್ತು ಪ್ರಕರಣವೊಂದರ ಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು.

ಹ್ಯಾಕಿಂಗ್‌ ತಜ್ಞ ಶ್ರೀಕಿ

ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದ್ದ ಶ್ರೀಕಿ ಹಲವು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಕಂಪನಿಗಳ ಸರ್ವರ್ ನ ಡಾಟಾ ಬೇಸ್ ಅನ್ನು ಹ್ಯಾಕ್ ಮಾಡಿ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿರುತ್ತಾನೆ. ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣವನ್ನೇ ಹ್ಯಾಕ್ ಮಾಡಿದ್ದ ಚಾಲಾಕಿ ಈತ.

ಕಾಟನ್ ಪೇಟೆ, ಕೆಂಪೇಗೌಡನಗರ, ಅಶೋಕನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎಂಟು ಪ್ರಕರಣಗಳನ್ನು ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.

ಈ ಹಗರಣದಲ್ಲಿ ಅನೇಕ ರಾಜಕಾರಣಿಗಳ ಕುಟುಂಬದವರು ಮತ್ತು ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಎಲ್ಲಾ ಆಯಾಮದಲ್ಲೂ ಎಸ್‌ಐಟಿ ತನಿಖೆ ನಡೆಸುತ್ತಲೇ ಇದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

 

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

 

IPL_Entry_Point