Bangalore News:ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ರಾಜೀನಾಮೆ, ಬಿಜೆಪಿಗೂ ವಿದಾಯ, ಕಾಂಗ್ರೆಸ್ ಸೇರುವ ಸಾಧ್ಯತೆ
ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದೇ ಇದ್ದುದರಿಂದ ಬೇಸರಗೊಂಡ ತೇಜಸ್ವಿನಿ ರಮೇಶ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೂ ವಿದಾಯ ಹೇಳಿ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು: ಲೋಕಸಭೆ ಚುನಾವಣೆಯ ತಯಾರಿಯ ನಡುವೆ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಬಿಜೆಪಿಗೆ ವಿದಾಯ ಹೇಳಿದ್ದು, ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಲೋಕಸಭೆ ಚುನಾವಣೆ ಚುನಾವಣೆಗೆ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ಅವರು ಪಕ್ಷ ಬಿಡುವ ಕುರಿತು ಸುಳಿವು ನೀಡಿದ್ದರು. ಇದರ ಮುಂದುವರೆದ ಭಾಗವಾಗಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ಗೆ ಸದ್ಯವೇ ಮರಳಿದ್ದಾರೆ.
ಪತ್ರಕರ್ತೆಯಾಗಿದ್ದ ತೇಜಸ್ವಿನಿ ರಮೇಶ್ ಅವರು ಕಾಂಗ್ರೆಸ್‌ನಿಂದ ರಾಜಕೀಯ ಜೀವನವನ್ನು ಎರಡು ದಶಕದ ಹಿಂದೆಯೇ ಆರಂಭಿಸಿದ್ದರು. ಕಾಂಗ್ರೆಸ್‌ನಿಂದ 2004 ರ ಕನಕಪುರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿಯ ರಾಮಚಂದ್ರಗೌಡ ಅವರನ್ನು ಮಣಿಸಿದ್ದರು. ಆ ಚುನಾವಣೆಯಲ್ಲಿ ದೇವೇಗೌಡರು ಕನಕಪುರದಲ್ಲಿ ಮೂರನೇ ಸ್ಥಾನ ಪಡೆದರೆ, ಹಾಸನದಿಂದ ಗೆದ್ದಿದ್ದರು. 2009ರಲ್ಲಿ ಕನಕಪುರ ಕ್ಷೇತ್ರ ಬೆಂಗಳೂರು ಕ್ಷೇತ್ರವಾಗಿ ಬದಲಾಗಿತ್ತು. ಆಗ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಕನಕಪುರದಿಂದ ಗೆದ್ದಿದ್ದರು. ಇದಾದ ಬಳಿಕ ಕಾಂಗ್ರೆಸ್‌ನಲ್ಲಿಯೇ ಉಳಿದಿದ್ದ ತೇಜಸ್ವಿನಿ 2014 ರಲ್ಲಿ ಬಿಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದಲೇ ಅವರನ್ನು ವಿಧಾನಪರಿಷತ್ ಸದಸ್ಯೆಯಾಗಿ ನೇಮಿಸಲಾಗಿತ್ತು.
ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಅವರಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಬಿಜೆಪಿ ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪಸಿಂಹ ಅವರನ್ನು ಬದಲಾಯಿಸಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಬೇಸರಗೊಂಡ ತೇಜಸ್ವಿನಿ ರಮೇಶ್ ಪಕ್ಷ ತೊರೆದಿದ್ದಾರೆ.
ಬೆಂಗಳೂರು ಉತ್ತರ ಇಲ್ಲವೇ ಮೈಸೂರು- ಕೊಡಗು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರಲ್ಲಿ ಕೋರಿಕೊಂಡಿದ್ದೆ. ಎಲ್ಲಿಯಾದರೂ ಒಂದು ಕಡೆ ಅವಕಾಶ ಮಾಡಿಕೊಡುವುದಾಗಿ ಭರವಸ ನೀಡಿದ್ದರು. ಆದರೆ ಅವಕಾಶ ಸಿಗಲಿಲ್ಲ. ಈ ಕಾರಣದಿಂದ ಪಕ್ಷ ತೊರೆಯುವುದು ಅನಿವಾರ್ಯವಾಗಿದೆ ಎನ್ನುವ ಅಭಿಪ್ರಾಯವನ್ನು ತೇಜಸ್ವಿನಿ ರಮೇಶ್ ಆಪ್ತರ ಬಳಿ ಹೇಳಿಕೊಂಡಿದ್ದರು. ಈಗ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಪಕ್ಷಕ್ಕೂ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಬುಧವಾರವೇ ವಿಧಾನಸೌಧದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದ ತೇಜಸ್ವಿನಿ ಅವರು ಅಧಿಕೃತವಾಗಿಯೇ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ತೇಜಸ್ವಿನಿ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವು ಕ್ರಮಬದ್ದವಾಗಿರುವುದರಿಂದ ಅದನ್ನು ಅಂಗೀಕರಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.
ಸಭಾಪತಿಗಳ ಕಚೇರಿಗೆ ಆಗಮಿಸಿದ ತೇಜಸ್ವಿನಿ ರಮೇಶ್ ಅವರಿಗೆ ಸಮಯ ನೀಡಿದ್ದೆ. ಆದರೆ ಅವರು ತಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿದ್ದರಿಂದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.