ಕನ್ನಡ ಸುದ್ದಿ  /  ಕರ್ನಾಟಕ  /  Bangalore Metro: ಬೆಂಗಳೂರು ಮೆಟ್ರೋ ವಿಸ್ತರಣೆ, ಹೆಬ್ಬಾಳ- ಸರ್ಜಾಪುರ ಮಾರ್ಗ ನಿರ್ಮಾಣ ಯೋಜನಾ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್

Bangalore Metro: ಬೆಂಗಳೂರು ಮೆಟ್ರೋ ವಿಸ್ತರಣೆ, ಹೆಬ್ಬಾಳ- ಸರ್ಜಾಪುರ ಮಾರ್ಗ ನಿರ್ಮಾಣ ಯೋಜನಾ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್

Bangalore News ಬೆಂಗಳೂರು ಮೆಟ್ರೋ ವಿಸ್ತರಣೆ( Bangalore Namma Metro) ಭಾಗವಾಗಿ ಹೆಬ್ಬಾಳದಿಂದ ಸರ್ಜಾಪುರ ವರೆಗಿನ ಮಾರ್ಗ ನಿರ್ಮಾಣದ ವಿಸ್ತೃತ ವರದಿಯನ್ನು ಕರ್ನಾಟಕ ಸರ್ಕಾರಕ್ಕ ಬಿಎಂಆರ್‌ಸಿಎಲ್‌( BMRCL) ಸಲ್ಲಿಸಿದೆ.

ಹೆಬ್ಬಾಳ ಸರ್ಜಾಪುರ ಮೆಟ್ರೋ ಮಾರ್ಗದ ಯೋಜನಾ ವರದಿ ಸಲ್ಲಿಕೆಯಾಗಿದೆ.
ಹೆಬ್ಬಾಳ ಸರ್ಜಾಪುರ ಮೆಟ್ರೋ ಮಾರ್ಗದ ಯೋಜನಾ ವರದಿ ಸಲ್ಲಿಕೆಯಾಗಿದೆ.

ಬೆಂಗಳೂರು: ಬೆಂಗಳೂರಿನ ಬಹು ನಿರೀಕ್ಷಿತ ಹಾಗೂ ಹಳೆಯ ಯೋಜನೆಗಳಲ್ಲಿ ಒಂದಾದ ಹೆಬ್ಬಾಳದಿಂದ ಸರ್ಜಾಪುರವರೆಗೆ ಬೆಂಗಳೂರು ನಮ್ಮ ಮೆಟ್ರೋ ವಿಸ್ತರಿಸುವ ವಿಸ್ತೃತ ವರದಿಯನ್ನು ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌( BMRCL) ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ. ಇದರಿಂದ ಬಹು ದಿನಗಳಿಂದಲೇ ಈ ಮಾರ್ಗ ಆಗಲೇಬೇಕು ಎನ್ನುವ ಬೇಡಿಕೆಗೆ ಈಗ ಜೀವ ಬಂದಂತಾಗಿದೆ. ಸುಮಾರು 37 ಕಿ.ಮಿ ಉದ್ದದ ಈ ಮಾರ್ಗದ ಯೋಜನಾ ವೆಚ್ಚ 28,405 ಕೋಟಿ ರೂ. ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಸಲ್ಲಿಸಿರುವ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಇದಕ್ಕೆ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಅನುಮತಿ ದೊರೆತ ನಂತರ ಹೆಬ್ಬಾಳದಿಂದ ಸರ್ಜಾಪುರವರೆಗಿನ ಮೆಟ್ರೋ ರೈಲು ಮಾರ್ಗ ಕಾಮಗಾರಿ ಆರಂಭವಾಗಲಿದೆ.

ಇದು ಪ್ರಮುಖ ಕಾರಿಡಾರ್‌ಗಳಲ್ಲಿ ಒಂದು. ಬೆಂಗಳೂರಿನ ಹೃದಯ ಹಾಗೂ ಮುಖ್ಯ ವಹಿವಾಟು ಪ್ರದೇಶ ಹಾಗೂ ಕೋರಮಂಗಲ ಭಾಗವನ್ನು ದಾಟಿಕೊಂಡು ಹೆಬ್ಬಾಳ ಸರ್ಜಾಪುರ ಮಾರ್ಗ ಹೋಗಲಿದೆ. ಈ ಕಾರಣದಿಂದಲೂ ಈ ಮಾರ್ಗ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಯೋಜನೆಗೆ ಬೇಕಾದ ಭೂಸ್ವಾಧೀನ ಹಾಗೂ ಜಾರಿಗೆ ಸೇರಿ ಒಟ್ಟು 28,405 ಕೋಟಿ ರೂ. ಬೇಕಾದಬಹುದು. ಈ ಮಾರ್ಗದಲ್ಲಿ ಒಟ್ಟು 28 ಮೆಟ್ರೋ ನಿಲ್ದಾಣಗಳು ಹಾಗೂ 17 ಮೇಲ್ಸೇತುವೆ ಮಾರ್ಗ ಹಾಗೂ 11 ಅಂಡರ್ ಗ್ರೌಂಡ್‌ ನಿಲ್ದಾಣಗಳು ಬರಲಿವೆ.

ಟ್ರೆಂಡಿಂಗ್​ ಸುದ್ದಿ

ಸರ್ಕಾರಕ್ಕೆ ಒಂದು ವಾರದ ಹಿಂದೆ ಸಂಪೂರ್ಣ ಯೋಜನೆಯ ವರದಿಯನ್ನು ಸಲ್ಲಿಸಲಾಗಿದೆ. ಒಮ್ಮೆ ರಾಜ್ಯ ಸರ್ಕಾರ ಅನುಮತಿ ನೀಡಿದರೆ ಇದು ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆ ಹೋಗಲಿದೆ. ಆ ಮೂಲಕ ಯೋಜನೆ ಜಾರಿಗೆ ಬೇಕಾದ ಅನುಮತಿ ಸಿಕ್ಕ ಹಾಗಾಗಲಿದೆ ಎನ್ನುವುದು ಅಧಿಕಾರಿಯೊಬ್ಬರ ವಿವರಣೆ.

ಈ ಮಾರ್ಗದಲ್ಲಿ ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಂಪುರ, ದೊಮ್ಮಸಂದ್ರ, ಮುತ್ತಾನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲರಂ, ದೊಡ್ಡಕನ್ನೆಲ್ಲಿ, ಕೈಕೊಂಡ್ರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಶಾಂತಿನಗರ, ಡೈರಿ ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೆಕ್ರಿ ಸರ್ಕಲ್, ವೆಟರ್ನರಿ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳ ನಿಲ್ದಾಣಗಳು ಬರಲಿವೆ.

ಯೋಜನಾ ವರದಿ ಪ್ರಕಾರ ಸರ್ಜಾಪುರದಿಂದ ಕೋರಮಂಗಲ ಮೂರನೇ ಬ್ಲಾಕ್‌ ವರೆಗೂ ಒಟ್ಟು ಹದಿನೈದು ಮೇಲ್ಸೇತುವೆ ನಿಲ್ದಾಣ ನಿರ್ಮಾಣವಾಗಲಿವೆ. ಕೋರಮಂಗಲದಿಂದ ಪಶುವೈದ್ಯಕಾಲೇಜಿನವರೆಗೂ ಅಂಡರ್‌ಗ್ರೌಂಡ್‌ ನಿಲ್ದಾಣಗಳು ಬರಲಿವೆ. ಗಂಗಾನಗರ ಹಾಗೂ ಹೆಬ್ಬಾಳ ಮೆಟ್ರೋ ನಿಲ್ದಾಣಗಳು ಮತ್ತೆ ಮೇಲ್ಸುತುವೆ ಮೇಲೆಯೆ ಇರಲಿವೆ. ಈ ಮಾರ್ಗದ ಡಿಪೋ ಸರ್ಜಾಪುರದಲ್ಲಿಯೇ ಇರಲಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಗೆ ಅನುಮತಿ ನೀಡಿದ ನಂತರ ಸಣ್ಣಪುಟ್ಟ ಬದಲಾವಣೆಗಳು ಆಗಬಹುದು ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ.

ಈ ಮಾರ್ಗದಲ್ಲಿ ಇಬ್ಬಲೂರು, ಡೈರಿ ಸರ್ಕಲ್‌, ಕೆಆರ್‌ ಸರ್ಕಲ್‌, ಹೆಬ್ಬಾಳದಲ್ಲಿ ಮಾರ್ಗ ಬದಲಾವಣೆಗೆ ಅವಕಾಶ ಇರಲಿದೆ. ಇದರಿಂದ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಬಹುಬೇಗನೇ ತಲುಪವರಿಗೆ ಇನ್ನು ಮುಂದೆ ಸಹಕಾರಿಯಾಗಲಿದೆ.

ಈ ಯೋಜನೆಯನ್ನು ಎರಡು ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಸುಮಾರು 15,000 ಕೋಟಿ ರೂ. ಯೋಜನೆಯನ್ನು ಸರ್ಜಾಪುರ ಹಾಗೂ ಹೆಬ್ಬಾಳ ಕಾರಿಡಾರ್‌ ಅಡಿ ಘೋಷಿಸಿದ್ದರು. ಆದರೆ ಯಾವುದೇ ಬೆಳವಣಿಗೆಗಳು ಆನಂತರ ಆಗಿರಲಿಲ್ಲ. ಈಗ ಸರ್ಕಾರಕ್ಕೆ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಅನುಮತಿಗೆ ಇನ್ನೂ ಸಮಯ ಹಿಡಿಯಲಿದೆ.