Bangalore Town Ships: ಬೆಂಗಳೂರಿನಲ್ಲಿ ರೂಪುಗೊಳ್ಳಲಿವೆ ಮೂರು ಇಂಟೆಗ್ರೇಟೆಡ್ ಟೌನ್‌ಶಿಪ್; ಬಿಡದಿ, ಸೋಲೂರು, ನಂದಗುಡಿಯಲ್ಲಿ ಯೋಜನೆ
Bangalore News ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಸಮಗ್ರ ಟೌನ್ ಶಿಪ್‌ಗಳ ಯೋಜನೆಗೆ ಬಲ ನೀಡಿದೆ.
ಬೆಂಗಳೂರು: ಬೆಂಗಳೂರು ಎಲ್ಲೆ ವಿಸ್ತರಣೆಯಾಗುತ್ತಲೇ ಇದೆ. ದಶಕದ ಅವಧಿಯಲ್ಲಿಯೇ ಬೆಳವಣಿಗೆಯ ವೇಗ ಹೆಚ್ಚಿ ಬೆಂಗಳೂರು ಮಹಾ ನಗರದ ವ್ಯಾಪ್ತಿ ಹೆಚ್ಚುತ್ತಲೇ ಇದೆ. ಈ ಕಾರಣದಿಂದಲೇ ಬೆಂಗಳೂರಿನ ಸುತ್ತಮುತ್ತಲ ಮೂರು ಪ್ರದೇಶಗಳನ್ನು ಪ್ರತ್ಯೇಕ ಹಾಗೂ ಸಮಗ್ರ ಟೌನ್‌ಶಿಪ್‌ಗಳಾಗಿ ಅಭಿವೃದ್ದಿಪಡಿಸುವ ಯೋಜನೆಗೆ ಮರು ಜೀವ ಬಂದಿದೆ. ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ, ಮಾಗಡಿ ಸಮೀಪದ ಸೋಲೂರು ಹಾಗೂ ಹೊಸಕೋಟೆ ತಾಲ್ಲೂಕಿನ ನಂದಗುಡಿಯ ಮೂರು ಟೌನ್ ಶಿಪ್ ರಚನೆಗೆ ಹಸಿರು ನಿಶಾನೆ ತೋರಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (BMRDA) ಯೋಜನೆಗಳನ್ನು ರೂಪಿಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಐಟಿ ಸಿಟಿಯ ಉಪನಗರಗಳಾದ ಬಿಡದಿ, ಮಾಗಡಿ ಸಮೀಪದ ಸೋಲೂರು ಮತ್ತು ಹೊಸಕೋಟೆಯ ನಂದಗುಡಿಯಲ್ಲಿ ಸಮಗ್ರ ಪಟ್ಟಣ( Integrated TownShip) ಅಭಿವೃದ್ಧಿಪಡಿಸುವ ಎರಡು ದಶಕಗಳ ಹಿಂದಿನ ಪ್ರಸ್ತಾವನೆಯನ್ನು ಪುನರುಜ್ಜೀವನಗೊಳಿಸಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಮೂರು ಪಟ್ಟಣಗಳ ಪೈಕಿ ಬಿಡದಿಯನ್ನು ಪ್ರಾಯೋಗಿಕವಾಗಿ ಮೊದಲು ಕೈಗೆತ್ತಿಕೊಳ್ಳಲಾಗುವುದು ಎನ್ನುವುದು ಅಧಿಕಾರಿಗಳ ವಿವರಣೆ.
ಪೂರ್ವಸಿದ್ಧತಾ ಕಾರ್ಯದ ಭಾಗವಾಗಿ, ಈ ಮೂರು ಪ್ರದೇಶಗಳನ್ನು ಮೆಟ್ರೋದೊಂದಿಗೆ ಸಂಪರ್ಕಿಸುವ ಸಾಧ್ಯತೆಯನ್ನು ಅಧ್ಯಯನ ಮಾಡಲು BMRDA ನಮ್ಮ ಮೆಟ್ರೋಗೆ ಪತ್ರ ಬರೆದಿದೆ. ಪ್ರತ್ಯೇಕವಾಗಿ, ಕುಡಿಯುವ ನೀರು ಸರಬರಾಜು ಮಾಡುವ ಜತೆಗೆ ಮೂಲ ಸೌಕರ್ಯಗಳನ್ನು ರಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೂ (BWSSB) ಪತ್ರ ಬರೆದಿದೆ.
ಪ್ರಾಧಿಕಾರವು ಮೂರೂ ಕಡೆಗಳಲ್ಲಿ ಸ್ವಾಧೀನಪಡಿಸಿಕೊಳ್ಳಲು ಬೇಕಾದ ದೊಡ್ಡ ಪ್ರಮಾಣದ ಭೂಮಿಗಾಗಿ ರಾಜ್ಯ ಸರ್ಕಾರದ ಅನುಮೋದನೆಯನ್ನು ಕೋರಿದೆ. ಎರಡನೆಯದಾಗಿ, ಪ್ರಾಧಿಕಾರವು ವಿವರವಾದ ಯೋಜನಾ ವರದಿಯನ್ನು (DPR) ತಯಾರಿಸಲು ಸಜ್ಜಾಗುತ್ತಿದೆ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತವು ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನವನ್ನು ಕೈಗೊಳ್ಳಲಿದೆ. "ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಗೆ ಸಂಪರ್ಕಗೊಂಡಿರುವ ಕಾರಣ ನಾವು ಮೂರು ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ" ಎನ್ನುತ್ತಾರೆ ಪ್ರಾಧಿಕಾರದ ಮೆಟ್ರೋಪಾಲಿಟನ್ ಕಮಿಷನರ್ ರಾಜೇಂದ್ರ ಪಿ ಚೋಳನ್.
ಬಿಡದಿಯನ್ನು ಮೊದಲು ತೆಗೆದುಕೊಳ್ಳಲಾಗುವುದು. ಇದು ನಾಲ್ಕು ಹೆದ್ದಾರಿಗಳಿಂದ ಆವೃತವಾಗಿದೆ. ಅಲ್ಲಿ ನಾವು ಸಮಗ್ರ ಟೌನ್‌ಶಿಪ್ ಅನ್ನು ಯೋಜಿಸುತ್ತಿದ್ದೇವೆ, ಇದು ಲಾಜಿಸ್ಟಿಕ್ ಪಾರ್ಕ್‌ಗಳು, ಡೇಟಾ ಸೆಂಟರ್‌ಗಳು ಇತ್ಯಾದಿ ಮತ್ತು ಎತ್ತರದ ವಸತಿ ಘಟಕಗಳಂತಹ ವಾಣಿಜ್ಯ ಮಿಶ್ರಣವನ್ನು ಹೊಂದಿರುತ್ತದೆ. ಇದಲ್ಲದೇ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ನಂದಗುಡಿಯನ್ನು ಆಯ್ಕೆ ಮಾಡಲಾಗಿದೆ . ಜತೆಗೆ ನೆಲಮಂಗಲ, ಮಾಗಡಿಗೆ ಮತ್ತು ಬೆಂಗಳೂರಿಗೆ ಸಮೀಪವಿರುವ ಸೋಲೂರನ್ನು ಪಟ್ಟಿ ಮಾಡಲಾಗಿದ್ದು ಬಿಡದಿ ನಂತರ ಕೈಗೆತ್ತಿಕೊಳ್ಳಲಾಗುತ್ತದೆ ಎನ್ನುವುದು ಚೋಳನ್ ವಿವರಣೆ.
ಈ ಮೂರು ಪ್ರದೇಶಗಳು ರಾಮನಗರ ಮತ್ತು ಸಾತನೂರು ಸೇರಿದಂತೆ ಐದು ಉಪನಗರಗಳ ಭಾಗವಾಗಿದ್ದವು, 2006 ರಲ್ಲಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮಗ್ರ ಅಭಿವೃದ್ಧಿಗೆ ಪ್ರಸ್ತಾಪಿಸಲಾಯಿತು. ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಈ ಪ್ರಸ್ತಾವನೆ ಟೇಕಾಫ್ ಆಗಿರಲಿಲ್ಲ.
ಕಳೆದ ನವೆಂಬರ್‌ನಲ್ಲಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 8,000 ಚದರ ಕಿಲೋಮೀಟರ್‌ಗಳಲ್ಲಿ 12 ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಒಳಗೊಂಡಿರುವ BMRDA ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಧಿಕಾರದೊಂದಿಗೆ ಗ್ರೇಟರ್ ಬೆಂಗಳೂರು ಡೆವಲಪ್‌ಮೆಂಟ್ ಅಥಾರಿಟಿ (GBDA) ಅನ್ನು ರಚಿಸಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತೆಯೇ (ಬಿಡಿಎ), ಜಿಬಿಡಿಎಯು ಉದ್ದೇಶಿತ ಸಮಗ್ರ ಟೌನ್‌ಶಿಪ್‌ಗಳಲ್ಲಿ ಭೂಸ್ವಾಧೀನ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ಬೆಂಗಳೂರಿನ ಅಭಿವೃದ್ದಿಗಾಗಿ ಡಿ.ಕೆ.ಶಿವಕುಮಾರ್ ವಿಶೇಷ ಒತ್ತು ನೀಡುತ್ತಿರುವುದರಿಂದಲೂ ಈ ಯೋಜನೆಗಳು ಚಾಲನೆ ಪಡೆದುಕೊಂಡಿವೆ.