ಪಡಿತರ ಕಾರ್ಡ್‌ದಾರರಿಗೆ ಸೂಚನೆ: ನಿಮ್ಮ ಪಡಿತರ ಕಾರ್ಡ್ ಕೆವೈಸಿ ಮಾಡಿಸಿಲ್ಲವೇ, ಆಗಸ್ಟ್ 31 ರೊಳಗೆ ಮಾಡಿಸದೇ ಇದ್ದರೆ ಕಾರ್ಡ್ ರದ್ದು
BPL Ration Card ನೀವು ಪಡಿತರ ಕಾರ್ಡ್‌ದಾರರಾಗಿದ್ದರೆ ಕೆವೈಸಿ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದವರೆಗೆ ಮುಗಿಸಿಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು: ನೀವು ಪಡಿತರ ಕಾರ್ಡ್ ಹೊಂದಿದ್ದೀರಾ, ಅದರಲ್ಲೂ ಬಿಪಿಎಲ್ ಕಾರ್ಡ್‌ದಾರರಾಗಿದ್ದೀರಾ, ಹಾಗಾದರೆ ನೀವು ಕೆವೈಸಿ ಮಾಹಿತಿಯನ್ನು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ನೀಡಲೇಬೇಕು. ಅದು ಈ ತಿಂಗಳ 31 ರೊಳಗೆ ಸಲ್ಲಿಸಬೇಕು. ಸಲ್ಲಿಸದೇ ಇದ್ದರೆ ಪಡಿತರದ ಜತೆಗೆ ಕಾರ್ಡ್ ಕೂಡ ರದ್ದಾಗಲಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ‘ಇಕೆವೈಸಿ’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ.
ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಆಗಸ್ಟ್ 31 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೂಡಲೇ ಸೂಚನೆಗಳನ್ನು ಪಾಲಿಸಿ ಮುಂದೆ ಆಗುವ ತೊಂದರೆ ತಪ್ಪಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಈಗಾಗಲೇ ಇಕೆವೈಸಿ ಕಾರ್ಯ ಕರ್ನಾಟಕದ ಬಹುತೇಕ ಭಾಗಗಳಲ್ಲಿ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಗ್ರಾಹಕರು ಕೆವೈಸಿ ಮಾಡಿಸಿದ್ದರೆ, ಇನ್ನೂ ಕೆಲವರು ಮಾಡಿಸಿಕೊಂಡಿಲ್ಲ. ಈ ಕಾರಣದಿಂದಲೇ ಸೂಚನೆಯನ್ನು ನೀಡಲಾಗಿದೆ.
ಇಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಮಾಹಿತಿಯನ್ನು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿಯೇ ಮಾಡಿಸಿಕೊಳ್ಳಬೇಕು. ಈಗಾಗಲೇ ನಿಗದಿಪಡಿಸಿದ ಆಗಸ್ಟ್ 31 ರ ಕೊನೆಯ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಎಂದು ಇಲಾಖೆ ತಿಳಿಸಿದೆ.
ಇಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ. ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟಿ ಪಡೆದುಕೊಂಡಿರುವವರು ಕೂಡಲೇ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ಹೀಗೆ ಮಾಡಿ
ನಿಮ್ಮ ಹೆಸರು ಇರುವ ನ್ಯಾಯ ಬೆಲೆ ಅಂಗಡಿಗೆ ತೆರಳಿ
ಅಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ನೋಡಿಕೊಳ್ಳಿ
ಈಗಾಗಲೇ ಕೆವೈಸಿಯನ್ನು ಮಾಡಿಸಿದ್ದರೆ ಮತ್ತೆ ಬೇಡ
ಮಾಡಿಸದೇ ಇದ್ದರೆ ನ್ಯಾಯ ಬೆಲೆ ಅಂಗಡಿಗೆ ಮಾಹಿತಿ ನೀಡಿ
ನಿಮ್ಮ ಬೆರಳಚ್ಚಿನ ದೃಢೀಕರಣವನ್ನು ಒದಗಿಸಬೇಕು.
ಅದನ್ನು ನೀಡಿದ್ದು ಖಚಿತ ಮಾಡಿಕೊಳ್ಳಿರಿ.