ಕನ್ನಡ ಸುದ್ದಿ  /  ಕರ್ನಾಟಕ  /  ದೇಶದಲ್ಲೇ ಮೊದಲು; ಬೃಹತ್ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಪೂರೈಕೆಗೆ ಬೆಂಗಳೂರು ಜಲಮಂಡಳಿ ಚಿಂತನೆ

ದೇಶದಲ್ಲೇ ಮೊದಲು; ಬೃಹತ್ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಪೂರೈಕೆಗೆ ಬೆಂಗಳೂರು ಜಲಮಂಡಳಿ ಚಿಂತನೆ

ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಲ ಮಂಡಳಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ಮಾಡಲು ಮುಂದಾಗಿದೆ. (ವರದಿ: ಎಚ್ ಮಾರುತಿ)

ಬೆಂಗಳೂರು ವ್ಯಾಪ್ತಿಯ ಬೃಹತ್ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ಜಲಮಂಡಳಿ ಮುಂದಾಗಿದೆ.
ಬೆಂಗಳೂರು ವ್ಯಾಪ್ತಿಯ ಬೃಹತ್ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ಜಲಮಂಡಳಿ ಮುಂದಾಗಿದೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕಳೆದೊಂದು ತಿಂಗಳಿಂದ ನೀರಿಗೆ ಭಾರಿ ಸಮಸ್ಯೆ ಉಂಟಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಶ್ವಾಶ್ವತ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಇದರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಸರಬರಾಜು ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ. ಸಂಸ್ಕರಿಸಿದ ನೀರಿನ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಯೋಜನೆಗೆ ಮುಂದಾಗಿದೆ.

ಟ್ರೆಂಡಿಂಗ್​ ಸುದ್ದಿ

ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಸ್ಥೆಗಳಾದ ಪೀಣ್ಯ ಕೈಗಾರಿಕಾ ಸಂಸ್ಥೆ, ಎಫ್‌ಕೆಸಿಸಿಐ, ಕಾಸಿಯಾ ಪದಾಧಿಕಾರಿಗಳು, ಎಂಎಸ್‌ಎಂಇ ನಿರ್ದೇಶಕರಾದ ಡಾ. ವಿಜಯಮಹಾಂತೇಶ್‌, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ನಿರ್ದೇಶಕ ಕುಮಾರ್‌ ಅವರೊಂದಿಗೆ ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್‌ ಪ್ರಸಾತ್‌ ಮನೋಹರ್‌ ಸಭೆ ನಡೆಸಿ ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ.

ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಕೈಗಾರಿಕೆಗಳಿಗೆ ಸಂಸ್ಕರಿದ ನೀರು

ಬೆಂಗಳೂರಿನಲ್ಲಿ 1,480 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ 1,212 ಎಂಎಲ್‌ಡಿ ನೀರನ್ನು ಶುದ್ದೀಕರಿಸಲಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿ ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಜಲಮಂಡಳಿ ಉದ್ದೇಶವಾಗಿದೆ.

ಈ ಹಿನ್ನಲೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಇದು ದೇಶದಲ್ಲೇ ಮೊದಲು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. ಅಂತರ್ಜಲ ಕುಸಿತದಿಂದ ಎದುರಾಗಿರುವ ನೀರಿನ ಕೊರತೆಯ ನಡುವೆಯೂ ಪೀಣ್ಯ ಸೇರಿದಂತೆ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಸುತ್ತಿರುವ ಜಲಮಂಡಳಿಯ ಶ್ರಮಕ್ಕೆ ಕೈಗಾರಿಕಾ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿದರು.

ಕೈಗಾರಿಕೆಗಳು ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ನೀರು ಪೂರೈಸಲು ಜಲಮಂಡಳಿ ಬದ್ದ

ಬೆಂಗಳೂರು ನಗರದಲ್ಲಿರುವಂತಹ ಕೈಗಾರಿಕೆಗಳು ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ನೀರು ಪೂರೈಸಲು ಜಲಮಂಡಳಿ ಸಿದ್ದವಿದೆ. ಅದರಲ್ಲೂ, ಜಲಮಂಡಳಿಯ ಬಳಿ ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಿದೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪ್ರಮಾಣೀಕೃತವಾದ ಸಂಸ್ಕರಿಸಿದ ನೀರನ್ನ ಕಡಿಯಲು ಹೊರತುಪಡಿಸಿ ಸ್ವಚ್ಚತೆ ಸೇರಿದಂತೆ ಬಹಳಷ್ಟು ಕಾರ್ಯಗಳಿಗೆ ಉಪಯೋಗಿಸಬಹುದಾಗಿದೆ. ಇದರ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದ್ದು, ಕೈಗಾರಿಕಾ ಸಂಸ್ಥೆಗಳು ಇದರ ಬಗ್ಗೆ ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಾ. ವಿ ರಾಮ್‌ ಪ್ರಸಾತ್‌ ಮನೋಹರ್ ಕರೆ ನೀಡಿದರು.

ಗ್ರೀನ್‌ ಸ್ಟಾರ್‌ ಸವಾಲು ಸ್ವೀಕರಿಸಿದ ಕೈಗಾರಿಕೋದ್ಯಮಿಗಳು

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಾಂದೋಲನದಲ್ಲಿ ಭಾಗಿಯಾಗುವುದಾಗಿ ಕೈಗಾರಿಕೋದ್ಯಮಿಗಳು ಭರವಸೆ ನೀಡಿದ್ದಾರೆ. ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರಿಫ್‌ ಹೆಚ್‌.ಎಂ ಪ್ರತಿಕ್ರಿಯಿಸಿ ನಮ್ಮಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಇದಲ್ಲಿ ಹೆಚ್ಚು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿವೆ. ಮಾರ್ಚ್‌ ತಿಂಗಳ ಮೊದಲ ವಾರದಲ್ಲೇ ಜಲಮಂಡಳಿ ವತಿಯಿಂದ ಅಧಿಕಾರಿಗಳು ಪೀಣ್ಯ ಕೈಗಾರಿಕಾ ಸಂಘದ ಜೊತೆ ಸಭೆ ನಡೆಸಿ ಅಗತ್ಯ ಪೂರೈಕೆಗೆ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದರು. (ವರದಿ: ಎಚ್ ಮಾರುತಿ)

IPL_Entry_Point