ಮಕ್ಕಳನ್ನು ಸ್ಕೂಲ್ ಬಸ್‍ನಲ್ಲಿ ಕಳುಹಿಸುವ ಮುನ್ನ ಇರಲಿ ಎಚ್ಚರ: ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿದ ಶಾಲಾ ಬಸ್ ಚಾಲಕರ ವಿರುದ್ಧ ಕೇಸ್
ಕನ್ನಡ ಸುದ್ದಿ  /  ಕರ್ನಾಟಕ  /  ಮಕ್ಕಳನ್ನು ಸ್ಕೂಲ್ ಬಸ್‍ನಲ್ಲಿ ಕಳುಹಿಸುವ ಮುನ್ನ ಇರಲಿ ಎಚ್ಚರ: ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿದ ಶಾಲಾ ಬಸ್ ಚಾಲಕರ ವಿರುದ್ಧ ಕೇಸ್

ಮಕ್ಕಳನ್ನು ಸ್ಕೂಲ್ ಬಸ್‍ನಲ್ಲಿ ಕಳುಹಿಸುವ ಮುನ್ನ ಇರಲಿ ಎಚ್ಚರ: ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿದ ಶಾಲಾ ಬಸ್ ಚಾಲಕರ ವಿರುದ್ಧ ಕೇಸ್

School news ಬೆಂಗಳೂರಿನಲ್ಲಿ ಬಹುತೇಕ ಗಂಡ-ಹೆಂಡತಿ ತಮ್ಮ ಕೆಲಸದ ಒತ್ತಡಗಳ ಕಾರಣ ಮಕ್ಕಳನ್ನು ಶಾಲಾ ಬಸ್‍ಗಳಲ್ಲಿ ಕಳುಹಿಸುತ್ತಾರೆ. ಈ ಸ್ಕೂಲ್ ಬಸ್‍ಗಳು ಸುರಕ್ಷಿತ ಅನ್ನೋ ಕಾರಣಕ್ಕೂ ಪ್ರಶ್ನಿಸುವ ಗೋಜಿಗೆ ಹೋಗಿರುವುದಿಲ್ಲ. ಈ ಸುದ್ದಿ ಓದಿದ್ರೆ ಇಂಥ ಸ್ಕೂಲ್‍ ಬಸ್‍ಗಳು ಎಷ್ಟು ಸೇಫ್ಟಿ ಅನ್ನೋ ಪ್ರಶ್ನೆ ಕಾಡುತ್ತಿದೆ.ವರದಿ:ಪ್ರಿಯಾಂಕ ಗೌಡ, ಬೆಂಗಳೂರು

ಬೆಂಗಳೂರಿನಲ್ಲಿ ಕುಡಿದು ಶಾಲಾ ಬಸ್‌ ವಾಹನ ಚಲಾಯಿಸುವ ಚಾಲಕರ ತಪಾಸಣೆ ಚುರುಕುಗೊಂಡಿದೆ.
ಬೆಂಗಳೂರಿನಲ್ಲಿ ಕುಡಿದು ಶಾಲಾ ಬಸ್‌ ವಾಹನ ಚಲಾಯಿಸುವ ಚಾಲಕರ ತಪಾಸಣೆ ಚುರುಕುಗೊಂಡಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಬಸ್‍ಗಳಲ್ಲಿ ಕಳುಹಿಸುತ್ತಾರೆ. ಇದು ಮಕ್ಕಳಿಗೆ ತುಂಬಾ ಸೇಫ್ಟಿಯಾಗಿರುತ್ತದೆ ಹಾಗೂ ತಾವೇ ಶಾಲೆಗೆ ಬಿಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಈ ಶಾಲಾ ಬಸ್ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಶಾಲಾ ಬಸ್ ಚಾಲಕರು ಆಲ್ಕೋಹಾಲ್ ಕುಡಿದು ವಾಹನ ಚಲಾಯಿಸಿದ್ರೆ ಯಾರು ಗತಿ? ಇದೀಗ ನಗರದಲ್ಲಿ ಕುಡಿದು ಶಾಲಾ ಬಸ್ ಚಲಾಯಿಸಿದ 23 ಶಾಲಾ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.ಮಂಗಳವಾರದಂದು ನಗರದಾದ್ಯಂತ ಮದ್ಯಪಾನ ಮಾಡಿ ವಾಹನ ಚಾಲನೆಯ ವಿರುದ್ಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 3,016 ರಲ್ಲಿ 23 ಶಾಲಾ ಬಸ್ ಚಾಲಕರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ನಗರದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಶಾಲಾ ಬಸ್ ಚಾಲಕರು ಕುಡಿದು ವಾಹನ ಚಲಾಯಿಸಿದ್ದು ಕಂಡುಬಂದಿದ್ದರಿಂದ ಅವರ ವಿರುದ್ಧ ಬಾಲ ನ್ಯಾಯ ಕಾಯ್ದೆ 2015ರ ಅಡಿಯಲ್ಲಿ ಕೇಸ್ ದಾಖಲಿಸಲು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಚಿಂತನೆ ನಡೆಸಿದ್ದಾರೆ.

ಖಚಿತ ಮಾಹಿತಿ ಹಾಗೂ ದೂರುಗಳ ಮೇರೆಗೆ ಬೆಂಗಳೂರು ಸಂಚಾರ ವಿಭಾಗದ ಪೊಲೀಸರಿ ನಗರದ ಹಲವು ಪ್ರದೇಶಗಳಲ್ಲಿ ಮದ್ಯಪಾನ ಪರಿಶೀಲನೆ ವೇಳೆ ಶಾಲಾ ಬಸ್ ಚಾಲಕರು ಆಲ್ಕೋಹಾಲ್ ಸೇವಿಸಿದ್ದು ದೃಢಪಟ್ಟಿದ್ದರಿಂದ ಅಂತಹ ಚಾಲಕರನ್ನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗಿದೆ. ಅಲ್ಲದೆ, ಫಿಟ್‌ನೆಸ್ ಪ್ರಮಾಣ ಪತ್ರವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ 11 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಗತ್ಯ ಕ್ರಮಕ್ಕಾಗಿ ಆರ್‌ಟಿಒಗಳಿಗೆ ಹಸ್ತಾಂತರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್, ‘ಶಾಲೆಗಳನ್ನು ಹೊಣೆಗಾರರನ್ನಾಗಿಸುವ ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಚಾಲಕರನ್ನು ಪ್ರಶ್ನಿಸುವ ಜವಾಬ್ದಾರಿಯು ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಮೇಲಿದೆ’ ಎಂದು ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.

‘ಮದ್ಯಪಾನ ಸೇವಿಸಿ ವಾಹನ ಚಲಾಯಿಸಿದ ಶಾಲಾ ಬಸ್ ಚಾಲಕರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಹೀಗಾಗಿ ನಾವು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಕಾನೂನು ಸಲಹೆಯನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಬಾಲಾಪರಾಧಿ ನ್ಯಾಯ ಕಾಯ್ದೆ ಅಂದರೆ ಏನು?

ಮಕ್ಕಳ ಹಿತರಕ್ಷಣೆಯನ್ನು ಕಾಪಾಡುವ ಉದ್ದೇಶದಿಂದ 2015ರಲ್ಲಿ ಈ ಕಾಯ್ದೆ ಜಾರಿಗೆ ಬಂದಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಗೆ ಅನುಮೋದನೆ ಸಿಕ್ಕಿತ್ತು. ಇದು ಸಂಘರ್ಷಕ್ಕೆ ಒಳಗಾದ ಮಕ್ಕಳು ಅಥವಾ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನನ್ನು ಬಲಪಡಿಸುವ ಮತ್ತು ತಿದ್ದುಪಡಿ ಮಾಡುವ ಕಾಯಿದೆಯಾಗಿದೆ ಎನ್ನುವುದು ಪೊಲೀಸರ ವಿವರಣೆ.

ವರದಿ:ಪ್ರಿಯಾಂಕ ಗೌಡ, ಬೆಂಗಳೂರು

Whats_app_banner