Cauvery Issue: ಕಾನೂನನ್ನು ಗೌರವಿಸೋಣ, ನಮ್ಮ ರೈತರ ಹಿತವನ್ನೂ ಕಾಪಾಡೋಣ; ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸರ್ವಪಕ್ಷ ಸಭೆ ಚರ್ಚೆ
Bangalore News ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ನಡೆದು ಎಲ್ಲಾ ಆಯಾಮಗಳಲ್ಲೂ ಚರ್ಚಿಸಿತು.

ಬೆಂಗಳೂರು: ಒಂದು ತಿಂಗಳಿನಿಂದ ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರೂ ಇನ್ನೂ ಸಂಪೂರ್ಣ ತುಂಬಿಲ್ಲ. ಕಬಿನಿ ಜಲಾಶಯ ಹೊರತುಪಡಿಸಿದರೆ ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ತುಂಬಬೇಕಿದೆ. ಈವರೆಗೂ ಶೇ.63 ರಷ್ಟು ಜಲಾಶಯ ಭರ್ತಿಯಾಗಿದೆ. ಇದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ನಾವು ಎಚ್ಚರಿಕೆಯ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕಾಗಿದೆ. ಕಾನೂನು ಗೌರವಿಸುತ್ತಲೇ ಕಾವೇರಿ ಕೊಳ್ಳದ ನಮ್ಮ ರೈತರ ಹಿತವನ್ನ ಕಾಪಾಡುವ ಬಹಳ ಮುಖ್ಯ. ಇದನ್ನು ಕಾವೇರಿ ನೀರು ನಿರ್ವಹಣಾ ಸಮಿತಿ( CWMC )ಗೂ ಮನವರಿಕೆ ಮಾಡಿಕೊಡೋಣ.
ಇದು ಬೆಂಗಳೂರಿನಲ್ಲಿ ಭಾನುವಾರ ನಡೆದ ಕಾವೇರಿ ನೀರು ಹಂಚಿಕೆ ವಿಚಾರದ ಸರ್ವಪಕ್ಷ ಸಭೆಯಲ್ಲಿ ಕೇಳಿಬಂದ ಒಕ್ಕೊರಲ ಅಭಿಪ್ರಾಯ. ಪ್ರತಿನಿತ್ಯ ಒಂದು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎನ್ನುವ ಸೂಚನೆಯ ನಂತರ ಚರ್ಚಿಸಲು ಸರ್ವ ಪಕ್ಷ ಸಭೆಯನ್ನು ಕರೆಯಲಾಗಿತ್ತು.
2024ರ ಜುಲೈ 11ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ 3 ನೇ ಸಭೆ ನಡೆದು, ಜುಲೈ 12 ನೇ ದಿನಾಂಕದಿಂದ ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ 1ಟಿಎಂಸಿ ಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿದ್ದಾರೆ. ಸಾಮಾನ್ಯವಾಗಿ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈ ನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿ ಗೂ ಹೆಚ್ಚು ನೀರು ನಮ್ಮಿಂದ ತಮಿಳುನಾಡಿಗೆ ಬಿಡಲು ಸಾಧ್ಯವಾಗಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜು12 ರಂದು ಸಭೆ ನಡೆಸಿ ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು, ಕಾವೇರಿ ನೀರು ನಿಯಂತ್ರಣ ಸಮಿತಿ(CWMA) ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಅವರು ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯ ಆಧರಿಸಿ ಕರ್ನಾಟಕ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.
ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ 63 % ಮಾತ್ರ ಭರ್ತಿ ನೀರು ಆಗಿದೆ. ಕಬಿನಿ ಜಲಾಶಯ ಮಾತ್ರ ಭರ್ತಿ ಯಾಗಿದ್ದು, ಕಳೆದ ಎರಡು ದಿನ 20 ಸಾವಿರ, 19 ಸಾವಿರ ಹಾಗೂ ಇಂದು 13 ಸಾವಿರ ಕ್ಯೂಸೆಕ್ಸ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿದುಹೋಗಿದೆ. ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, ಸಮಿತಿಯ ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು ಸಮಿತಿಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ. ಈ ಕಾರಣದಿಂದ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.