Bangalore Metro Upto Hosur: ತಮಿಳುನಾಡಿನ ಹೊಸೂರುವರೆಗೂ ಬೆಂಗಳೂರು ಮೆಟ್ರೋ ವಿಸ್ತರಣೆ, ಚೆನ್ನೈ ಮೆಟ್ರೋ ತಂಡ ಭೇಟಿ, ಹೇಗಿದೆ ಪ್ರಸ್ತಾವ-bangalore news chennai metro rail limited team visited bangalore for extension metro rail upto hosur in tamilnadu kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Metro Upto Hosur: ತಮಿಳುನಾಡಿನ ಹೊಸೂರುವರೆಗೂ ಬೆಂಗಳೂರು ಮೆಟ್ರೋ ವಿಸ್ತರಣೆ, ಚೆನ್ನೈ ಮೆಟ್ರೋ ತಂಡ ಭೇಟಿ, ಹೇಗಿದೆ ಪ್ರಸ್ತಾವ

Bangalore Metro Upto Hosur: ತಮಿಳುನಾಡಿನ ಹೊಸೂರುವರೆಗೂ ಬೆಂಗಳೂರು ಮೆಟ್ರೋ ವಿಸ್ತರಣೆ, ಚೆನ್ನೈ ಮೆಟ್ರೋ ತಂಡ ಭೇಟಿ, ಹೇಗಿದೆ ಪ್ರಸ್ತಾವ

Hosur News ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿದ್ದು, ಚೆನ್ನೈ ಮೆಟ್ರೋ ತಂಡವೂ(Chennai metro Rail Limited) ಬೆಂಗಳೂರಿಗೆ ಭೇಟಿ ನೀಡಿದೆ.

ಬೆಂಗಳೂರು ಮೆಟ್ರೋ ಸೇವೆಯನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸುವ ಚರ್ಚೆಗಳು ಶುರುವಾಗಿವೆ.
ಬೆಂಗಳೂರು ಮೆಟ್ರೋ ಸೇವೆಯನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸುವ ಚರ್ಚೆಗಳು ಶುರುವಾಗಿವೆ.

ಬೆಂಗಳೂರು: ಬೆಂಗಳೂರು ಮೆಟ್ರೋ ಯೋಜನೆಯನ್ನು ತಮಿಳುನಾಡಿನ ನಗರಿ ಹೊಸೂರುವರೆಗೂ ವಿಸ್ತರಣೆ ಸಂಬಂಧ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಹೊಸೂರು ನಗರವು ಕರ್ನಾಟಕದೊಂದಿಗೆ ವಹಿವಾಟು ನಂಟು ಹೊಂದಿದೆ. ಹೊಸೂರು ಕೂಡ ಉದ್ಯಮ ಪಟ್ಟಣವಾಗಿ ಬೆಳೆಯುತ್ತಿದ್ದು. ಹಲವು ಕಂಪೆನಿಗಳು ಹೊಸೂರಿನಲ್ಲಿ ತಮ್ಮ ಘಟಕ ಆರಂಭಿಸುತ್ತಿವೆ. ಹೊಸೂರು ಜನ ಕೂಡ ಬೆಂಗಳೂರಿನೊಂದಿಗೆ ನಿಕಟ ನಂಟು ಹೊಂದಿರುವ ಕಾರಣಕ್ಕೆ ಬೆಂಗಳೂರು ಮೆಟ್ರೋ ಸೇವೆಯನ್ನು ಹೊಸೂರುವರೆಗೂ ವಿಸ್ತರಿಸುವ ಪ್ರಸ್ತಾವಗಳು ಸಲ್ಲಿಕೆಯಾಗಿವೆ. ಇದೇ ಹಿನ್ನೆಲೆಯಲ್ಲಿ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಅಧಿಕಾರಿಗಳ ತಂಡ ಆಗಸ್ಟ್ 27 ರಂದು ಬೆಂಗಳೂರಿಗೆ ಭೇಟಿ ನೀಡಿದ್ದು ಈ ಯೋಜನೆಗೆ ಜೀವ ಬಂದಿದೆ.

ಬೊಮ್ಮಸಂದ್ರ ಮತ್ತು ಆರ್‌ ವಿ ರಸ್ತೆಯನ್ನು ಸಂಪರ್ಕಿಸುವ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಡಿಸೆಂಬರ್ 2024 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಬಿಎಂಆರ್‌ಸಿಎಲ್‌ ಸಹ ಹಳದಿ ಮಾರ್ಗವನ್ನು ಕರ್ನಾಟಕದ ಸಮೀಪದ ಬೊಮ್ಮಸಂದ್ರದಿಂದ ಅತ್ತಿಬೆಲೆ (11 ಕಿಮೀ) ವರೆಗೆ ವಿಸ್ತರಿಸಲು ಕಾರ್ಯಸಾಧ್ಯತೆಯ ಅಧ್ಯಯನವನ್ನು ತಯಾರಿಸಲು ಅಸೋಸಿಯೇಟ್‌ಗಳನ್ನು ತೊಡಗಿಸಿಕೊಂಡಿದೆ. ಇದರ ಭಾಗವಾಗಿಯೇ ಮೆಟ್ರೋ ಸೇವೆಯನ್ನು ಹೊಸೂರುವರೆಗೆ ವಿಸ್ತರಣೆ ಮಾಡುವ ಪ್ರಸ್ತಾವವನ್ನು ಚೆನ್ನೈ ಮೆಟ್ರೋ ನಿಗಮ ಮುಂದಿಟ್ಟಿದೆ ಎಂದು ಮನಿ ಕಂಟ್ರೋಲ್‌ ವರದಿ ಮಾಡಿದೆ.

ಸಿಎಂಆರ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂಎ ಸಿದ್ದಿಕ್ ಅವರು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ( BMRCL) ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಅವರನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಭೇಟಿ ಮಾಡಿ ಬೊಮ್ಮಸಂದ್ರದಿಂದ ಹೊಸೂರುವರೆಗೆ ಮೆಟ್ರೊ ಮಾರ್ಗವನ್ನು ವಿಸ್ತರಿಸುವ ಕುರಿತು ಚರ್ಚಿಸಿದರು.ಸಭೆಯಲ್ಲಿ CMRL, BMRCL, ಮತ್ತು ಸಲಹೆಗಾರ ಸಂಸ್ಥೆಗಳಾದ ಬಾಲಾಜಿ ರೈಲ್‌ರೋಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹ್ಯಾಬೋಗ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್) ಅಧಿಕಾರಿಗಳು ಉಪಸ್ಥಿತರಿದ್ದರು.

ತಮಿಳುನಾಡು ಪ್ರಸ್ತಾವ

ಚೆನ್ನೈ ಮೆಟ್ರೋ ನಿಗಮವು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ನಿರ್ದೇಶಿಸಿದಂತೆ ಬೊಮ್ಮಸಂದ್ರ (ಬೆಂಗಳೂರು) ನಿಂದ ಅತ್ತಿಬೆಲೆ ಮೂಲಕ ಹೊಸೂರು ಬೆಂಗಳೂರು ವರೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ವಿವರವಾದ ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು (DFR) ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. ಇದರ ಭಾಗವಾಗಿಯೆ ಬೆಂಗಳೂರು, ಹೊಸೂರು ಭೇಟಿ ಯೋಜಿಸಲಾಗಿತ್ತು.

ತಮಿಳುನಾಡಿನಲ್ಲಿ ಸುಮಾರು 11 ಕಿಮೀ ಮತ್ತು ಕರ್ನಾಟಕದಲ್ಲಿ 12 ಕಿಮೀ ಸೇರಿದಂತೆ 23 ಕಿಮೀ ಉದ್ದ ಒಳಗೊಂಡಿರುವ ಬಿಎಂಆರ್‌ಟಿಎಸ್ ಲೈನ್ ಅನ್ನು ಅನುಷ್ಠಾನಗೊಳಿಸುವ ಕಾರ್ಯಸಾಧ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹೊಸೂರುವರೆಗೂ ಮೆಟ್ರೋ ವಿಸ್ತರಣೆಯಾದರೆ ಒಟ್ಟು 12 ಮೆಟ್ರೋ ನಿಲ್ದಾಣಗಳು ಮತ್ತು ಮಾರ್ಗದಲ್ಲಿ ಡಿಪೋ ಒಂದನ್ನು ಯೋಜಿಸಲಾಗಿದೆ ಎನ್ನುವುದು ಚೆನ್ನೈ ಮೆಟ್ರೋ ಅಧಿಕಾರಿಗಳ ವಿವರಣೆ.

ಬಿಎಂಆರ್‌ಸಿಎಲ್‌ ಹೇಳೋದೇನು

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರರಾವ್‌, ಮೆಟ್ರೋ ವಿಸ್ತರಣೆ ಚಟುವಟಿಕೆ ಮುಂದುವರಿದಿದೆ. ಹೊಸೂರುವರೆಗೂ ಮೆಟ್ರೋ ವಿಸ್ತರಿಸುವ ಕುರಿತಾಗಿ ಚೆನ್ನೈನ ಮೆಟ್ರೋ ನಿಗಮದ ಅಧಿಕಾರಿಗಳ ತಂಡ ಚರ್ಚಿಸಿದೆ. ಅವರಿಗೆ ಪ್ರಾಥಮಿಕ ಮಾಹಿತಿಗಳನ್ನು ನೀಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನಗಳು ಆಗಬೇಕಾಗುತ್ತದೆ ಎಂದು ಹೇಳುತ್ತಾರೆ.

ಚರ್ಚೆಯ ನಂತರ ಸಿಎಂಆರ್‌ಎಲ್ ತಂಡವು ಸಲಹೆಗಾರರೊಂದಿಗೆ ಹೊಸೂರಿಗೆ ತೆರಳಿ ಕೃಷ್ಣಗಿರಿ ಜಿಲ್ಲಾಧಿಕಾರಿ ಕೆ.ಎಂ.ಸರಯು ಮತ್ತು ಹೊಸೂರು ಮಹಾನಗರ ಪಾಲಿಕೆ ಆಯುಕ್ತ ಎಚ್.ಎಸ್.ಶ್ರೀಕಾಂತ್ ಅವರೊಂದಿಗೆ ಹೊಸೂರುವರೆಗೂ ಬೆಂಗಳೂರು ಮೆಟ್ರೋ ವಿಸ್ತರಣೆ ಕುರಿತಾಗಿ ಮಾಹಿತಿ ಕಲೆ ಹಾಕಿತು.

ಸಬಬರ್ನ್‌ ರೈಲ್ವೆ

ಆದಾಗ್ಯೂ, ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಹೀಲಲಿಗೆ-ಹೊಸೂರು ಕಾರಿಡಾರ್ (23 ಕಿಮೀ) ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲಿನ ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ಜಾಲವನ್ನು ವಿಸ್ತರಿಸಲು ಪ್ರಸ್ತಾಪಿಸಿತ್ತು. ಈ ವಿಸ್ತರಣೆಗೆ ಪೂರ್ವ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಸಂಸ್ಥೆಯು ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮೋದನೆಯನ್ನು ಕೋರಿದೆ. ಆದರೆ, ನೈಋತ್ಯ ರೈಲ್ವೆ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದೆ.

ಹೊಸೂರು ವಿಮಾನ ನಿಲ್ದಾಣ

ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೂನ್ 27 ರಂದು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದರು. ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ತಮಿಳುನಾಡು ನಿರ್ಧಾರವು ಕೃಷ್ಣಗಿರಿ, ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳಿಗೆ ಮಾತ್ರವಲ್ಲದೆ ಟೆಕ್ ಹಬ್ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಂಗಳೂರಿನ ಆಗ್ನೇಯ ಭಾಗಗಳಿಗೂ ಪ್ರಯೋಜನಕಾರಿಯಾಗಿದೆ ಎನ್ನಲಾಗುತ್ತಿದೆ.

ಹೊಸೂರಿನ ಹೊಸ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಮೆಟ್ರೋ ಸೇವೆಯನ್ನು ವಿಸ್ತರಿಸುವ ಇರಾದೆಯನ್ನು ತಮಿಳುನಾಡು ಹೊಂದಿದೆ.